ಸ್ವಚ್ಛ ಮೈಸೂರು ಕುರಿತು ಯದುವೀರ್ ವಿಡಿಯೋ ವೈರಲ್
ಮೈಸೂರು, ಜನವರಿ 30 : ಸಾಂಸ್ಕೃತಿಕ ನಗರಿಗೆ ಸ್ವಚ್ಛ ನಗರಿ ಪಟ್ಟ ಸಿಗಬೇಕೆಂದು ಮೈಸೂರು ಮಹಾನಗರ ಪಾಲಿಕೆ ಅವಿರತ ಶ್ರಮಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ನಗರವನ್ನು ಸ್ವಚ್ಛವಾಗಿರಿಸುವ ಕುರಿತಾಗಿ ವಿಶೇಷ ಕಾಳಜಿಯುಳ್ಳ ವಿಡಿಯೋವನ್ನು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಮೈಸೂರನ್ನು ಸ್ವಚ್ಛವಾಗಿಡಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ ?
ಈ ವಿಡಿಯೋದಲ್ಲಿ ಯದುವೀರ್ ಅವರು, ಸಾಂಸ್ಕೃತಿಕ ನಗರಿ ಮೈಸೂರು ಎರಡು ಬಾರಿ ಸ್ವಚ್ಛನಗರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತ್ತು ಆದರೆ ಕಳೆದ ಬಾರಿ ಐದನೇ ಸ್ಥಾನ ಪಡೆದುಕೊಂಡಿದೆ. ಮೊದಲಿನಂತೆಯೇ ಸ್ವಚ್ಛನಗರ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಮೊದಲಿಗೆ ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಬೇಕು, ಹಸಿ ಕಸ-ಒಣ ಕಸವನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದಿದ್ದಾರೆ.
ಈ ಆಪ್ ಮೂಲಕ ನೀವು ಎಲ್ಲಿಯಾದರೂ ಕಸವನ್ನು ಕಂಡರೆ ಅದರ ಫೋಟೋ ತೆಗೆದು ಆಪ್‌ನಲ್ಲಿ ಹಾಕಬಹುದಾಗಿದೆ. ಫೋಟೋ ಹಾಕಿದ ತಕ್ಷಣ ಮಹಾನಗರ ಪಾಲಿಕೆಯವರಿಗೆ ಕಸ ಎಸೆದಿರುವ ಸ್ಥಳ ಗೊತ್ತಾಗಲಿದ್ದು, 12 ಗಂಟೆಯೊಳಗೆ ಕಸವನ್ನು ತೆಗೆದು ಕ್ಲೀನ್ ಮಾಡಿರುವ ಫೋಟೋವನ್ನು ಮತ್ತೆ ಆಪ್‌ನಲ್ಲಿ ಹಾಕುತ್ತಾರೆ ಎಂದು ವಿಡೀಯೋ ಮಾಡಿ ತಿಳಿಸಿದ್ದಾರೆ.

ಕ್ಲೀನ್‌ಸಿಟಿ ಪಟ್ಟ ಗಿಟ್ಟಿಸಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಮೊದಲೆರಡು ಬಾರಿ ಸ್ವಚ್ಛ ಮೈಸೂರು ಪಟ್ಟ ಪಡೆದಿದ್ದು ಮೂರನೇ ಬಾರಿ 5ನೇ ಸ್ಥಾನಕ್ಕೆ ಇಳಿದಿತ್ತು. ಈ ಬಾರಿ ಮತ್ತೆ ಮೊದಲ ಸ್ಥಾನ ಪಡೆಯಬೇಕೆಂದು ಪಾಲಿಕೆ ಶ್ರಮಿಸುತ್ತಿದೆ.
ಮೈಸೂರು ಭಾರತದ ನಂಬರ್ ಒನ್ ಸ್ವಚ್ಛನಗರ ಎಂಬ ಪ್ರಶಸ್ತಿಯನ್ನು ಮತ್ತೊಮ್ಮೆ ತಮ್ಮದಾಗಿಸಿಕೊಳ್ಳಲು ಮಹಾನಗರ ಪಾಲಿಕೆ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದು ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದೆ. ಈ ವಿಡಿಯೊವನ್ನು ಈಗಾಗಲೇ 44 ಸಾವಿರ ಮಂದಿ ವೀಕ್ಷಿಸಿದ್ದಾರೆ.












Click it and Unblock the Notifications