ಚುನಾವಣೆ ಪೂರ್ವದಲ್ಲಿ ಪಾದಯಾತ್ರೆ, ಅಧಿಕಾರಕ್ಕೆ ಬಂದ ಮೇಲೆ ಕಥೆಯೇನು?: ಸಿಎಂಗೆ ರೈತರ ಪ್ರಶ್ನೆ
ಮೈಸೂರು, ಅಕ್ಟೋಬರ್ 22: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಇಂದು (ಅಕ್ಟೋಬರ್ 22) ಮಂಗಳವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆಯ ಬಗ್ಗೆ ರೈತರು ಪ್ರಶ್ನಿಸಿದ್ದಾರೆ.
ತಾವು ಪಾದಯಾತ್ರೆ ಮಾಡಿ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಸಾಕಷ್ಟು ಒತ್ತಡವನ್ನು ಹಾಕಿದ್ದೀರಾ. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯಿತು. ಮೇಕೆದಾಟು ಯೋಜನೆ ಪ್ರಾರಂಭ ತಾಂತ್ರಿಕ ಸಮಸ್ಯೆ ಎಂಬಂತೆ ಉಳಿದಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರೈತರು ಹಕ್ಕು ಒತ್ತಾಯ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.

ರಾಜ್ಯದ ಎಲ್ಲಾ ಸಂಸತ್ ಸದಸ್ಯರನ್ನು ಒಟ್ಟುಗೂಡಿಸಿ. ಮೈಸೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು ಕೆರೆ ತುಂಬಿಸುವುದು. ಅಂತರ್ಜಲ ವೃದ್ಧಿಗಾಗಿ ಬರಗಾಲ ಸಂದರ್ಭದಲ್ಲಿ ರಾಜ್ಯದ ರೈತರ ಹಿತ ದೃಷ್ಟಿಯಿಂದ ಮೇಕೆದಾಟು ಯೋಜನೆ ಪ್ರಾರಂಭವಾಗುವುದು ಅತ್ಯವಶ್ಯಕವಾಗಿರುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.
ಹೀಗಾಗಿ ರಾಜ್ಯದ ಜನರ ಹಿತಾಸಕ್ತಿಯಂತೆ ಮೇಕೆದಾಟು ಜಲಾಶಯ ಯೋಜನೆಯ ಮೂಲ ಸ್ಥಳದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದಿಂದ ಮತ್ತು ಪರಿಸರ ಇಲಾಖೆಯಿಂದ ಬೇಕಾದಂತಹ ಸಹಕಾರವನ್ನು ಪಡೆಯಲು ರಾಜ್ಯದ ರೈತ ಸಂಘಟನೆಗಳ ಒಕ್ಕೂಟದ ಮೂಲಕ ನಿಯೋಗವನ್ನು ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮನವರಿಕೆ ಮಾಡಬೇಕು ಎಂದು ರೈತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮೇಕೆದಾಟು ಯೋಜನೆಗೆ ಕ್ರಮ ಕೈಗೊಳ್ಳಲು ಹಕ್ಕು ಒತ್ತಾಯ ಪತ್ರವನ್ನು ಇಂದು ರೈತರ ನಿಯೋಗ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಇಂದಿನ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಗೌರವಾಧ್ಯಕ್ಷರಾದ ಶಿವರುದ್ರಪ್ಪ, ಮೈಸೂರು ಜಿಲ್ಲಾ ಖಜಾಂಚಿ ಹೊಸಪುರ ಮಾದಪ್ಪ, ಜಿಲ್ಲಾ ಉಪಾಧ್ಯಕ್ಷ ಮಲೆಯೂರು ಪ್ರವೀಣ್, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ವಳಗೆರೆ ಗಣೇಶ್ ಹಾಜರಿದ್ದರು.











Click it and Unblock the Notifications