ಶರತ್ ಬಿ. ಮತ್ತು ಸರ್ಕಾರದ ನಡುವೆ ಮತ್ತೊಂದು ಕಾನೂನು ಹೋರಾಟ!
ಮೈಸೂರು, ಡಿಸೆಂಬರ್ 20: ಐಎಎಸ್ ಅಧಿಕಾರಿ ಬಿ. ಶರತ್ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಸಮರ ಆರಂಭವಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮಾಡಿದ ಕರ್ನಾಟಕ ಸರ್ಕಾರದ ಆದೇಶವನ್ನು ಶರತ್ ಬಿ. ಸಿಎಟಿಯಲ್ಲಿ ಪ್ರಶ್ನೆ ಮಾಡಿದ್ದರು.
ಡಿಸೆಂಬರ್ 15ರಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮೈಸೂರು ಜಿಲ್ಲಾಧಿಕಾರಿಯಾಗಿ ಶರತ್ ಬಿ. ಅವರನ್ನು ಮರು ನೇಮಕ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಡಿಸೆಂಬರ್ 22ರೊಳಗೆ ಮರು ನೇಮಕ ಕುರಿತು ಆದೇಶ ಹೊರಡಿಸಬೇಕು ಎಂದು ಹೇಳಿತ್ತು.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಶರತ್ ಬಿ. ಸಂಕಷ್ಟಕ್ಕೆ ಸಿಲುಕಿದರೆ? ಎಂಬ ಪ್ರಶ್ನೆ ಎದುರಾಗಿದೆ. ಕರ್ನಾಟಕ ಸರ್ಕಾರ ಶರತ್ ಬಿ. ವಿರುದ್ಧ ಸಿಎಟಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ. ಸಿಎಟಿ ಡಿಸೆಂಬರ್ 22ರಂದು ಈ ಅಫಿಡೆವಿಟ್ ವಿಚಾರಣೆ ನಡೆಸುವುದಾಗಿ ಹೇಳಿದೆ.

ರಾಜ್ಯ ಸರ್ಕಾರದಿಂದ ಶರತ್ ಬಿ. ವಿರುದ್ದ 10 ಪುಟಗಳ ಅಫಿಡೇವಿಟ್ ಅನ್ನು ಸಿಎಟಿಗೆ ಸಲ್ಲಿಕೆ ಮಾಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಶರತ್ ಬಿ. ಅವರನ್ನು ರೇಷ್ಮೆ ಮಾರುಕಟ್ಟೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಆದರೆ, ಮೂರು ತಿಂಗಳಿನಿಂದಲೂ ಅವರು ಅಧಿಕಾರ ಸ್ವೀಕರಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ಭಾರತೀಯ ಚುನಾವಣಾ ಆಯೋಗ ಶರತ್ ಬಿ. ಅವರನ್ನು ಬಿಹಾರ ಚುನಾವಣೆ ವೀಕ್ಷಕರಾಗಿ ನಿಯೋಜನೆ ಮಾಡಿತ್ತು. ಆ ಕರ್ತವ್ಯಕ್ಕೆ ಸಹ ಅವರು ಹಾಜರಾಗಿಲ್ಲ. ಸಾರ್ವಜನಿಕ ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಲಾಗಿದೆ. ಅನಾರೋಗ್ಯದ ಕಾರಣವನ್ನು ಶರತ್ ಅವರು ಹೇಳಿದ್ದಾರೆ.
ಆದರೆ, ಸರಿಯಾದ ದಾಖಲೆಗಳನ್ನು ಕೊಡದೆ ರಜೆ ಮೇಲೆ ಇರುತ್ತಾರೆ. ಇದು ಕಾನೂನಿಗೆ ವಿರುದ್ದವಾದ ಸರ್ಕಾರಿ ಅಧಿಕಾರಿಯ ನಡೆಯಾಗಿದೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ನವೆಂಬರ್ 25ರಂದು ಶರತ್‌ಗೆ ಶೋಕಾಸ್ ನೋಟಿಸ್ ಸಹ ನೀಡಿದೆ. 7 ದಿನದಲ್ಲಿ ಉತ್ತರವನ್ನು ನೀಡಬೇಕಿತ್ತು. ಆದರೆ, ಇದುವರೆಗೂ ಉತ್ತರಿಸಿಲ್ಲ ಎಂದು ಸರ್ಕಾರ ಹೇಳಿದೆ.
ನಿಯೋಜಿತ ಕರ್ತವ್ಯಕ್ಕೆ ಹಾಜರಾಗಲು ಅನಾರೋಗ್ಯದ ಕಾರಣ ಹೇಳಿರುವ ಶರತ್ ಬಿ. ಅವರು ಮೈಸೂರಿನಂತಹ ಸೂಕ್ಷ್ಮ ಪ್ರದೇಶಕ್ಕೆ ಜಿಲ್ಲಾಧಿಕಾರಿಯಾಗಲು ಹೇಗೆ ಸಾಧ್ಯ?. ಈ ಕಾರಣದಿಂದಾಗಿ ಸರ್ಕಾರದ ಆದೇಶ ಪ್ರಶ್ನಿಸಿ ಶರತ್ ಸಲ್ಲಿಸಿರುವ ಅರ್ಜಿ ವಜಾ ಮಾಡಬೇಕು ಎಂದು ಸರ್ಕಾರ ಸಿಎಟಿಗೆ ಮನವಿ ಮಾಡಿದೆ.












Click it and Unblock the Notifications