ವರುಣದ ಜನ ಬಿಜೆಪಿಯ ಹೊಸ ಅಸ್ತ್ರಕ್ಕೆ ಸೊಪ್ಪು ಹಾಕಲ್ಲ, ಇಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಖಚಿತ: ಯತೀಂದ್ರ ಸಿದ್ದರಾಮಯ್ಯ
ಮೈಸೂರು, ಏಪ್ರಿಲ್, 13: ಮೈಸೂರು ತಾಲೂಕಿನ ವರುಣಾ ಕ್ಷೇತ್ರ ಇದೀಗ ಹೈವೋಲ್ಟೇಜ್ ಕಣವಾಗಿ ರೂಪುಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಬಿಜೆಪಿಯ ಪ್ರಬಲ ಲಿಂಗಾಯತ ಮುಖಂಡ ವಿ.ಸೋಮಣ್ಣ ಪ್ರತಿಸ್ಪರ್ಧಿ ಆಗಿದ್ದಾರೆ. ವಿ.ಸೋಮಣ್ಣ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ಒತ್ತಡಕ್ಕೆ ಮಣಿದು ಸೋಮಣ್ಣ ಸ್ಪರ್ಧೆ
ಮೈಸೂರಿನಲ್ಲಿ ಮಾತನಾಡಿದ ಅವರು, "ವಿ.ಸೋಮಣ್ಣನವರು ಹೈಕಮಾಂಡ್ ಒತ್ತಡಕ್ಕೆ ಮಣಿದು ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜನರು ಸಿದ್ದರಾಮಯ್ಯನವರ ಪರ ಇದ್ದಾರೆ. ಯಾರೇ ವರುಣ ಕ್ಷೇತ್ರದಿಂದ ಸ್ಪರ್ಧಿಸಿದರೂ ಇಲ್ಲಿ ಸಿದ್ದರಾಮಯ್ಯನವರ ಗೆಲುವು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಅವರು ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೆಲ್ಲಹಳ್ಳಿ ಹಳ್ಳಿಕೆರೆಹುಂಡಿ ಹಾರೋಹಳ್ಳಿ ಗ್ರಾಮಗಳಲ್ಲಿ ಬುಧವಾರ ಪ್ರಚಾರ ಮಾಡಿದರು.

ಕುತಂತ್ರ ರಾಜಕಾರಣ ನಡೆಯುವುದಿಲ್ಲ
"ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಹೊಸಬರಲ್ಲ. ಇಲ್ಲಿ ಕುತಂತ್ರ ರಾಜಕಾರಣ ನಡೆಯುವುದಿಲ್ಲ. ವರುಣ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಿಂದ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಹಾಗಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿ ಆಯ್ಕೆ ಪಕ್ಷದ ಹೈಕಮಾಂಟ್‌ಗೆ ಹಾಗೂ ಶಾಸಕರಿಗೆ ಬಿಟ್ಟ ವಿಚಾರ ಆಗಿದೆ" ಎಂದರು.
"ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಪ್ಪನನ್ನು ಸೋಲಿಸಲು ಒಳ ಒಪ್ಪಂದ ಆಗಿತ್ತು. ಈ ಬಾರಿಯೂ ಒಳ ಒಪ್ಪಂದ ಆಗುವ ಸಾಧ್ಯತೆ ಇದೆ. ಹಾಗಾಗಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇವೆ. ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದಾಗಲಿ ಜೆಡಿಎಸ್‌ಯಿಂದಾಗಲಿ ಯಾರನ್ನೇ ಅಭ್ಯರ್ಥಿಯಾಗಿ ಹಾಕಿದರೂ ಅವರ ಕುತಂತ್ರ ರಾಜಕಾರಣ ಇಲ್ಲಿ ನಡೆಯುವುದಿಲ್ಲ. ಕ್ಷೇತ್ರದ ಮತದಾರರು ಕೂಡ ನಮ್ಮ ತಂದೆಯವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಅವರ ಗೆಲುವು ನಿಶ್ಚಿತ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಟಾಂಗ್ ನೀಡಲು ಬಿಜೆಪಿ ಹೊಸ ಅಸ್ತ್ರ
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಮಹಿಳಾ ಅಭ್ಯರ್ಥಿಗೆ ಮಣೆ ಹಾಕದ ಬಿಜೆಪಿಯು, ಯುವಜನರಿಗೆ ಹೆಚ್ಚು ಆದ್ಯತೆ ನೀಡಿದೆ.

ರಾಜ್ಯದ ಗಮನ ಸೆಳೆದಿರುವ ವರುಣ ಕ್ಷೇತ್ರದಿಂದ ವಿ.ಸೋಮಣ್ಣ ಅವರಿಗೆ ಟಿಕೆಟ್ ಘೋಷಿಸಿ ಬಿಜೆಪಿ ಅಚ್ಚರಿ ಮೂಡಿಸಿದೆ. ಹಾಗೆಯೇ ವಿ.ಸೋಮಣ್ಣ ಅವರಿಗೆ ಚಾಮನಗರದಲ್ಲೂ ಟಿಕೆಟ್ ಘೋಷಣೆ ಆಗಿದ್ದು, ಎರಡು ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ವಿ.ಸೋಮಣ್ಣ ಸ್ಪರ್ಧೆಯಿಂದ ವರುಣ ಕಣ ರಂಗೇರಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಿಸಿದೆ. ಮತ್ತೊಂದೆಡೆ ಕೆ.ಆರ್.ಕ್ಷೇತ್ರ ಹಾಗೂ ಎಚ್.ಡಿ.ಕೋಟೆ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ.
ಮೈಸೂರು ಜಿಲ್ಲೆಯ ಕೆ.ಆರ್.ಕ್ಷೇತ್ರ ಹಾಗೂ ಎಚ್.ಡಿ.ಕೋಟೆ ಹೊರತುಪಡಿಸಿ ಚಾಮರಾಜ, ನರಸಿಂಹರಾಜ, ಕೃಷ್ಣರಾಜ, ವರುಣಾ, ತಿ.ನರಸೀಪುರ, ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ವರುಣ ಕ್ಷೇತ್ರ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲೇ ರಾಜ್ಯರ ಗಮನ ಸೆಳೆದಿತ್ತು. ಸಿಎಂಗಳಿಬ್ಬರ ಮಕ್ಕಳು ಎದುರಾಳಿಗಳಾಗಬಹುದೆಂದು ಬಹುತೇಕರು ಅಂದಾಜಿಸಿದ್ದರು. ಆದರೆ, ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಕಡೇ ಕ್ಷಣದಲ್ಲಿ ಅದು ಸುಳ್ಳಾಗಿದೆ. ಆದರೆ, ಈ ಬಾರಿ ಯತೀಂದ್ರ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಪರಿಣಾಮ ಸಿದ್ದರಾಮಯ್ಯ ಮತ್ತೆ ವರುಣ ಕ್ಷೇತ್ರಕ್ಕೆ ಬಂದಿದ್ದಾರೆ. ಈ ಹಿನ್ನೆಲೆ ಇದೀಗ ಸೋಮಣ್ಣ ಸ್ಪರ್ಧೆಯಿಂದ ಕ್ಷೇತ್ರ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.












Click it and Unblock the Notifications