ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿರುವ ಶಿವಣ್ಣ, ರಮ್ಯಾ ಮತ್ತು ದುನಿಯಾ ವಿಜಯ್: ಯಾವ ದಿನ ತಿಳಿಯಿರಿ
ಮತದಾನಕ್ಕೆ ದಿನ ಹತ್ತಿರವಾದಂತೆ ರಾಜ್ಯ ಚುನಾವಣಾ ಅಖಾಡ ರಂಗೇರುತ್ತಿದೆ. ರಾಷ್ಟ್ರಮಟ್ಟದ ನಾಯಕರು ರಾಜ್ಯದಲ್ಲಿ ಠಿಕಾಣಿ ಹೂಡಿದ್ದು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಬಾರಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕರು ಕೂಡ ಚುನಾವನಾ ಅಖಾಡದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವುದು ವಿಶೇಷವಾಗಿದೆ.
ರಾಜ್ಯ ರಾಜಕೀಯದಲ್ಲಿ ಭಾರಿ ಗಮನ ಸೆಳೆದಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಸೋಮಣ್ಣ ಬೆಂಬಲಿಗರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ವಿ ಸೋಮಣ್ಣ ಪರವಾಗಿ ಈಗಾಗಲೇ ನಟ ಜಗ್ಗೇಶ್ ವರುಣಾದಲ್ಲಿ ಮತಯಾಚನೆ ಮಾಡಿದ್ದು, ಕಾಂಗ್ರೆಸ್ ಪರವಾಗಿ ಕೂಡ ಸ್ಯಾಂಡಲ್‌ವುಡ್ ತಾರೆಗಳು ಪ್ರಚಾರ ಮಾಡಲು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯನವರ ಪರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ರಮ್ಯಾ, ನಟ ದುನಿಯಾ ವಿಜಯ್ ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿರುವ ಮಾಜಿ ಸಂಸದೆ, ನಟಿ ರಮ್ಯಾ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಲವು ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಮೇ 4ರಂದು ವರುಣಾದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದು, ಮಾಜಿ ಸಿಎಂ ಜೊತೆಯಲ್ಲಿ ಶಿವರಾಜ್ ಕುಮಾರ್ ಮತ್ತು ರಮ್ಯಾ ಕೂಡ ಭಾಗವಹಿಸುತ್ತಿದ್ದಾರೆ.
ಕನ್ನಡದ ಮತ್ತೊಬ್ಬ ನಟ ದುನಿಯಾ ವಿಜಯ್ ಕೂಡ ವರುಣಾದಲ್ಲಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಮೇ 5ರಂದು ಅವರು ವರುಣಾಗೆ ಆಗಮಿಸಲಿದ್ದು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ತಮ್ಮನ್ನು ಸೋಲಿಸಲು ಸಿದ್ದವಾಗಿರುವ ವಿ ಸೋಮಣ್ಣಗೆ ಸಿದ್ದರಾಮಯ್ಯ ಟಕ್ಕರ್ ಕೊಡಲು ಮುಂದಾಗಿದ್ದಾರೆ.
ಹಲವು ನಟರಿಂದ ಚುನಾವಣಾ ಪ್ರಚಾರ
ಈಗಾಗಲೇ ಚಿತ್ರ ನಟ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗಾಗಿ ಪ್ರಚಾರ ಮಾಡ್ತೀನಿ ಎಂದಿದ್ದ ಕಿಚ್ಚ ಸುದೀಪ್ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಈಗಾಗಲೇ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಿದ್ದಾರೆ. ತಾರಾ, ಶೃತಿ ಸೇರಿದಂತೆ ಹಲವರು ಬಿಜೆಪಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ದರ್ಶನ್ ಕೂಡ, ಹಲವು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಯಾವೊಂದು ಪಕ್ಷಕ್ಕೂ ಜೋತು ಬೀಳದ ಅವರು ಈವರೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಕೂಡ ಪ್ರಚಾರ ಮಾಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ಸುಧಾಕರ್ ಪರವಾಗಿ ಪ್ರಚಾರ ಮಾಡಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್ ಅವರ ಪತ್ನಿ ಮಾಜಿ ಸಿಎಂ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಶಿವರಾಜ್‌ಕುಮಾರ್ ಕಾಂಗ್ರೆಸ್‌ಗೆ ಹತ್ತಿರವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿರುವ ವರುಣಾದಲ್ಲಿ ಶಿವಣ್ಣ ಪ್ರಚಾರ ಮಾಡಲಿದ್ದಾರೆ.












Click it and Unblock the Notifications