ಕರ್ನಾಟಕ ಚುನಾವಣಾ ಫಲಿತಾಂಶ: ಶಾಸಕರ ಮಕ್ಕಳ ‘ಕೈ’ ಹಿಡಿಯದ ಚಾಮರಾಜ ಮತದಾರರು
ಮೈಸೂರು, ಮೇ 17: ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಕೆಲವು ಕ್ಷೇತ್ರಗಳ ವಿಶೇಷತೆಗಳು ಹೊರಬಂದಿವೆ. ಅಷ್ಟೇ ಅಲ್ಲದೆ ಈ ಹಿಂದೆ ಪ್ರಬಲ ಪೈಪೋಟಿ ನೀಡಿದ ಪಕ್ಷಗಳು ಠೇವಣಿ ಕಳೆದುಕೊಳ್ಳುವ ಮಟ್ಟಕ್ಕೂ ಹೋಗಿರುವುದು ಎದ್ದು ಕಾಣಿಸುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಜೆಡಿಎಸ್ ಕೆಲವು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದ್ದರೆ, ಬಿಜೆಪಿ ಪೈಪೋಟಿ ನೀಡುವ ಪಕ್ಷವಾಗಿ ಬೆಳೆದಿದೆ. ಇದೆಲ್ಲದರ ನಡುವೆ ಮೈಸೂರು ಜಿಲ್ಲೆಯ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿರುವುದು ಬೇಸರದ ಸಂಗತಿಯಾಗಿದೆ.

ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಕೆ.ರಮೇಶ್ ಕೇವಲ 4,549 ಮತ ಪಡೆದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟು ಠೇವಣಿ ಕಳೆದುಕೊಂಡಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಏನೆಂದರೆ ಇವತ್ತು ಠೇವಣಿ ಕಳೆದುಕೊಂಡ ರಮೇಶ್ ಅವರ ತಂದೆ ಕೆಂಗೇಗೌಡರನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದರು. ಆದರೆ ಮಗ ರಮೇಶ್ ಅವರನ್ನು ಆಯ್ಕೆ ಮಾಡುವುದಿರಲಿ, ಠೇವಣಿಯನ್ನು ನೀಡಲಿಲ್ಲ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.
ಮಕ್ಕಳ ಕೈ ಹಿಡಿಯದ ಮತದಾರರು
ಈ ಕ್ಷೇತ್ರದ ವಿಶೇಷತೆ ಏನೆಂದರೆ ಇದುವರೆಗೆ ಅಪ್ಪನನ್ನು ಗೆಲ್ಲಿಸಿದ ಮತದಾರರು ಮಕ್ಕಳನ್ನು ಗೆಲ್ಲಿಸಿಕೊಂಡು ಬಾರದಿರುವುದು ಇಲ್ಲಿ ಕಂಡು ಬಂದಿದ್ದು, ಅದು ಈ ಬಾರಿಯ ಚುನಾವಣೆಯಲ್ಲೂ ಮುಂದುವರೆದಿದೆ. ಈ ಕ್ಷೇತ್ರದಿಂದ ಕೆ.ಪುಟ್ಟಸ್ವಾಮಿ, ಕೆಂಗೇಗೌಡ, ಕೆ.ಕೆಂಪೀರೇಗೌಡ ಹಾಗೂ ಎಚ್.ಎಸ್.ಶಂಕರಲಿಂಗೇಗೌಡರು ಆರಿಸಿ ಬಂದಿದ್ದಾರೆ. ಆದರೆ, ಅವರ ಮಕ್ಕಳು ಸ್ಪರ್ಧಿಸಿದ್ದರೂ ಇದುವರೆಗೂ ಗೆದ್ದು ಬಂದಿಲ್ಲ. ಇನ್ನು ಕೆಲವು ಮಾಜಿ ಶಾಸಕರ ಮಕ್ಕಳು ವಿವಿಧ ಪಕ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೂ ಸ್ಪರ್ಧಿಸುವ ಅವಕಾಶ ದೊರೆಯದಿರುವುದನ್ನು ಕಾಣಬಹುದಾಗಿದೆ.

ಮೊದಲ ಶಾಸಕರಾದ ಕೆ.ಪುಟ್ಟಸ್ವಾಮಿ
ಚಾಮರಾಜ ಕ್ಷೇತ್ರ ರಚನೆಯಾದ ಬಳಿಕ 1978ರಲ್ಲಿ ಪ್ರಥಮ ಬಾರಿಗೆ ಕೆ.ಪುಟ್ಟಸ್ವಾಮಿ ಶಾಸಕರಾಗಿದ್ದರು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎನ್.ಕೆಂಗೇಗೌಡ 18103 ಮತ ಪಡೆದರೆ, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಪುಟ್ಟಸ್ವಾಮಿ 24524 ಮತ ಪಡೆದು, 6421 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಕೆ.ಪುಟ್ಟಸ್ವಾಮಿ ಅವರ ಪುತ್ರ, ಮೈಸೂರಿನ ಪ್ರಥಮ ಮೇಯರ್ ಪಿ.ವಿಶ್ವನಾಥ್ 1994ರ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಅವರಿಗೆ ಗೆಲುವು ದೊರೆಯಲಿಲ್ಲ. ಅಂದು ಅವರು ಪಡೆದದ್ದು ಕೇವಲ 1926 ಮತಗಳಷ್ಟೇ. ಅವರ ವಿರುದ್ಧ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಂಕರಲಿಂಗೇಗೌಡ 32620 ಮತ ಪಡೆದು ಶಾಸಕರಾಗಿ ಆಯ್ಕೆಯಾದರು.

ಉಮಾಶಂಕರ್ ಕೂಡ ಗೆಲುವು ಸಾಧಿಸಲಿಲ್ಲ
1985ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹರ್ಷಕುಮಾರ್ (16265) ವಿರುದ್ಧ ಜನತಾಪಕ್ಷದ ಅಭ್ಯರ್ಥಿ ಕೆ.ಕೆಂಪೀರೇಗೌಡ 32077 ಮತ ಗಳಿಸಿ, 15812 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ಮಗ ಉಮಾಶಂಕರ್ 2004ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರಾದರೂ 10,609 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಈ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಎಚ್.ಎಸ್.ಶಂಕರಲಿಂಗೇಗೌಡ 37,906 ಮತ ಪಡೆದು ಗೆಲುವು ಸಾಧಿಸಿದರು. ಹೀಗಾಗಿ ಶಾಸಕ ಕೆ.ಕೆಂಪೀರೇಗೌಡರ ಪುತ್ರ ಉಮಾಶಂಕರ್ ಅವರನ್ನು ಕ್ಷೇತ್ರದ ಮತದಾರರು ಗೆಲ್ಲಿಸಲಿಲ್ಲ.
ಠೇವಣಿ ಕಳೆದುಕೊಂಡ ಎಚ್.ಕೆ.ರಮೇಶ್
ಇನ್ನು 1978ರಲ್ಲಿ ಪ್ರಥಮ ಬಾರಿಗೆ ಚಾಮರಾಜದಿಂದ ಆಯ್ಕೆಯಾಗಿದ್ದ ಕೆ.ಪುಟ್ಟಸ್ವಾಮಿ ಅಕಾಲಿಕ ನಿಧನರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ಎನ್.ಕೆಂಗೇಗೌಡ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ಆದರೆ, ಅವರ ಮಗ ಮಾಜಿ ಮೇಯರ್ ಬಿ.ಕೆ.ಪ್ರಕಾಶ್ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದರೂ ಪಕ್ಷ ಸ್ಪರ್ಧಿಸುವ ಅವಕಾಶ ಮಾಡಿಕೊಡಲಿಲ್ಲ.
1983ರ ಚುನಾವಣೆಯಲ್ಲಿ ಎಚ್.ಕೆಂಪೇಗೌಡ ಜನತಾಪಕ್ಷದಿಂದ ಸ್ಪರ್ಧಿಸಿ 23,967 ಮತ ಪಡೆದರೆ, ಎದುರಾಳಿ ಪುಟ್ಟೇಗೌಡ ಬಿಜೆಪಿಯಿಂದ ಸ್ಪರ್ಧಿಸಿ 11,932 ಮತ ಪಡೆದಿದ್ದರು. ಈ ವೇಳೆ 11,765 ಮತಗಳ ಅಂತರದಿಂದ ಎಚ್.ಕೆಂಪೇಗೌಡ ಗೆಲುವು ಸಾಧಿಸಿದ್ದರು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಅವರ ಪುತ್ರ ಎಚ್.ಕೆ.ರಮೇಶ್ ಸ್ಪರ್ಧೆ ಮಾಡಿ ಠೇವಣಿ ಕಳೆದುಕೊಂಡಿದ್ದಾರೆ ಎನ್ನುವುದೇ ಅಚ್ಚರಿಯಾಗಿದೆ.
ಶಂಕರಲಿಂಗೇಗೌಡರ ಪುತ್ರರಿಗೆ ಅವಕಾಶ ಸಿಕ್ಕಿಲ್ಲ
1994, 1999, 2004 ಹಾಗೂ 2008ರ ಚುನಾವಣೆಗಳಲ್ಲಿ ಸತತ ನಾಲ್ಕು ಬಾರಿಯೂ ಕ್ಷೇತ್ರದ ಶಾಸಕರಾಗಿ ಎಚ್.ಎಸ್. ಶಂಕರಲಿಂಗೇಗೌಡ ಆಯ್ಕೆಯಾಗಿದ್ದರು. ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಅವರು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ವಾಸು ಅವರ ವಿರುದ್ಧ ಸೋಲು ಕಂಡು ನಿಧನರಾದರು.
ಅಪ್ಪ ಜೆಡಿಎಸ್‌ಗೆ ಸೇರಿದರೂ ಬಿಜೆಪಿಯಲ್ಲಿಯೇ ಇರುವ ಅವರ ಪುತ್ರ ನಂದೀಶ್ ಪ್ರೀತಂ 2013ರ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೇಳಿದ್ದರೂ ಸಿಗಲಿಲ್ಲ. 2018 ಮತ್ತು 2023ರಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ದೊರೆಯಲಿಲ್ಲ. ಸದ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ ಅವರಿಗೆ ಸ್ಪರ್ಧಿಸುವ ಅವಕಾಶ ಕೂಡಿ ಬರಲೇ ಇಲ್ಲ.












Click it and Unblock the Notifications