ಕರ್ನಾಟಕ ಚುನಾವಣೆ: ಹೆಚ್.ಡಿ.ಕೋಟೆಯಲ್ಲಿ ಕೇಳಿ ಬರುತ್ತಿರುವ ‘ಆ ಮಾತು’ ನಿಜವಾಗುತ್ತಾ?
ಮೈಸೂರು, ಮೇ 12: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದೊಂದು ಕ್ಷೇತ್ರವೂ ವಿಭಿನ್ನ ರೀತಿಯ ವೈಶಿಷ್ಟ್ಯತೆ ಹೊಂದಿದ್ದು, ಇಂತಹ ಕ್ಷೇತ್ರಗಳಲ್ಲಿ ಮೈಸೂರಿನ ಹೆಚ್.ಡಿ.ಕೋಟೆ ಕ್ಷೇತ್ರವೂ ಒಂದಾಗಿದ್ದು ಇಲ್ಲಿನ ಚುನಾವಣಾ ಇತಿಹಾಸವನ್ನು ಗಮನಿಸಿರುವ ಜನ ಅಭ್ಯರ್ಥಿಯ ಗೆಲುವನ್ನು ರಾಜ್ಯ ರಾಜಕೀಯದೊಂದಿಗೆ ತುಲನೆ ಮಾಡುತ್ತಾ ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ.
ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರವು ಎಸ್ಟಿ ಮೀಸಲು ಕ್ಷೇತ್ರವಾಗಿದ್ದು, ಈ ಕ್ಷೇತ್ರಕ್ಕೆ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯೂ ಇದೆ. ಇಲ್ಲಿ ಹಲವರು ಗೆದ್ದು ವಿಧಾನ ಸೌಧದ ಮೆಟ್ಟಿಲೇರಿದ್ದರೂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ತೆಗೆಯುವ ಪ್ರಯತ್ನ ಮಾಡಿದಂತೆ ಕಂಡು ಬರುತ್ತಿಲ್ಲ.

ಇಲ್ಲಿನವರು ಹೇಳುವಂತೆ ಈ ಕ್ಷೇತ್ರದಲ್ಲೊಂದು ವಿಶೇಷತೆಯಿದೆಯಂತೆ. ಅದು ರಾಜ್ಯ ರಾಜಕೀಯದ ಮೇಲೆ ನೇರ ಪರಿಣಾಮ ಬೀರುತ್ತಾ ಬಂದಿದೆಯಂತೆ. ಆದರೆ ಅದು ಕೇವಲ ಮಾತಾ? ಅಥವಾ ಅಂತಹದೊಂದು ಪವಾಡ ನಡೆಯುತ್ತಾ? ಈ ಬಾರಿ ಆ ವಿಶೇಷತೆ ಮುಂದುವರೆಯುತ್ತಾ? ಜನರಲ್ಲಿರುವ ಅದೊಂದು ಮಾತು ನಿಜವಾಗುತ್ತಾ? ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.
ಗೆಲುವಿನ ನಿರೀಕ್ಷೆಯಲ್ಲಿ ಮೂವರು ಅಭ್ಯರ್ಥಿಗಳು
ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು ಹೊರ ಬಂದಿವೆ. ಆದರೂ ನಾಳಿನ(ಮೇ 13) ಫಲಿತಾಂಶವೇ ಅಂತಿಮವಾಗಿದ್ದು, ಯಾರು ಗೆಲ್ಲುತ್ತಾರೆ? ಸೋಲುತ್ತಾರೆ ಎಂಬುದು ಫಲಿತಾಂಶವೇ ಹೇಳಬೇಕಾಗಿದೆ. ಆದರೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಮಾಮೂಲಿಯಾಗಿದೆ.
ಇನ್ನು ಕೆಲವು ಕ್ಷೇತ್ರಗಳು ಕೆಲವು ನಾಯಕರ ಹಿಡಿತದಲ್ಲಿರುತ್ತದೆ. ಅವರು ಮೇಲಿಂದ ಮೇಲೆ ಗೆಲ್ಲುತ್ತಲೇ ಬರುತ್ತಿರುತ್ತಾರೆ. ಆದರೆ ಹೆಚ್.ಡಿ.ಕೋಟೆ ಕ್ಷೇತ್ರವನ್ನು ಗಮನಿಸಿದರೆ ಅಂತಹ ಪರಿಸ್ಥಿತಿ ಕಡಿಮೆಯೇ. ಸದ್ಯಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಮತದಾರರನ್ನು ಸೆಳೆಯಲು ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಮಾಡಿದ್ದಾರೆ. ಆದರೂ ಮೂರು ಅಭ್ಯರ್ಥಿಗಳಿಗೂ ನಾವೇ ಗೆಲ್ಲುತ್ತೇವೆ ಎಂಬ ನಂಬಿಕೆ ಇಲ್ಲದಂತಾಗಿದೆ.

ಬೆಟ್ಟಿಂಗ್‌ಗೆ ಮುಂದಾದ ಕ್ಷೇತ್ರದ ನಾಯಕರು
ಚುನಾವಣೆ ಬಳಿಕ ಕೆಲವು ಅಭ್ಯರ್ಥಿಗಳು ರಿಲೀಫ್ ಮೂಡ್‌ಗೆ ಹೋಗಿದ್ದರೆ, ಇನ್ನು ಕೆಲವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳಲ್ಲಿ ಗೆಲ್ಲೋರು ಯಾರು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಕೆಲವರು ಬೆಟ್ಟಿಂಗ್‌ಗೆ ಮುಂದಾಗಿರುವುದು ಕ್ಷೇತ್ರದಲ್ಲಿ ಕಂಡು ಬರುತ್ತಿದೆ.
ಈ ಬಾರಿ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಅಭಿವೃದ್ದಿ ಮಂತ್ರ ಪಠಿಸಿ ಎರಡು ಬಾರಿ ನಮ್ಮ ಕುಟುಂಬಕ್ಕೆ ತಾಲ್ಲೂಕಿನ ಜನತೆ ಆರ್ಶೀವಾದ ಮಾಡಿ ಗೆಲ್ಲಿಸಿದ್ದೀರಾ? ಈ ಬಾರಿ ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗಾಗಿ ಮತ್ತೊಮ್ಮೆ ಗೆಲ್ಲಿಸಿ ಎಂದು ಮತದಾರರ ಮುಂದೆ ಹೋಗಿದ್ದಾರೆ.
ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಅಭ್ಯರ್ಥಿಗಳು
ಜೆಡಿಎಸ್ ಅಭ್ಯಥಿಯಾಗಿದ್ದ ಜಯಪ್ರಕಾಶ್ ಅವರು ನಮ್ಮ ಕುಟುಂಬವನ್ನು ಎರಡು ಬಾರಿ ಸೋಲಿಸಿದ್ದೀರಿ ನಾನು ಸ್ಥಳೀಯ ವ್ಯಕ್ತಿ ಈ ಬಾರಿಯಾದರೂ ನನಗೆ ಮತ ನೀಡಿ ಎಂದು ಮತದಾರರ ಮುಂದೆ ಮನವಿ ಮಾಡಿಕೊಂಡಿದ್ದರು.

ಇದೆಲ್ಲದರ ನಡುವೆ ಜೆಡಿಎಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣನಾಯ್ಕ ಅವರು ನಾನು ಕ್ಷೇತ್ರದಲ್ಲಿ ಕೊರೊನಾ ಸಂದರ್ಭ ಆಹಾರ ಮತ್ತು ಔಷಧ ಕಿಟ್ ನೀಡಿದ್ದೇನೆ. ಬಡವರ ಹಸಿವು ನೀಗಿಸಲು ಅಪ್ಪಾಜಿ ಕ್ಯಾಂಟೀನ್ ತೆರೆದು ಕಡಿಮೆ ದರದಲ್ಲಿ ಊಟ ಹಾಕಿದ್ದೇನೆ ಹಾಗಾಗಿ ನನಗೆ ಮತನೀಡಿ ಎಂದು ಜನರ ಮುಂದೆ ಹೋಗಿದ್ದಾರೆ.
ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ
ಆದರೆ ಕ್ಷೇತ್ರದ ಜನ ಈ ಮೂವರ ಪೈಕಿ ಯಾರಿಗೆ ಮಣೆಹಾಕಿದ್ದಾರೆ ಎನ್ನುವುದು ಮಾತ್ರ ಫಲಿತಾಂಶದ ಬಳಿಕವೇ ಗೊತ್ತಾಗಬೇಕಾಗಿದೆ. ಆದರೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.
ಇನ್ನು ಹಾಲಿ ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಅವರು ಗೆದ್ದೇ ಗೆಲ್ಲುತ್ತೇನೆ ಎಂಬ ಖುಷಿಯಲ್ಲಿದ್ದಾರೆ. ಆದರೆ ಇಲ್ಲಿನ ಚುನಾವಣಾ ಇತಿಹಾಸವನ್ನು ನೋಡಿದರೆ ಒಂದು ಬಾರಿ ಗೆದ್ದ ಅಭ್ಯರ್ಥಿ ಮರು ಆಯ್ಕೆಯಾಗಿದ್ದೇ ಇಲ್ಲ. ಈ ದಾಖಲೆಯನ್ನು ಅನಿಲ್ ಚಿಕ್ಕಮಾದು ಮುರಿಯುತ್ತಾರಾ ಎಂಬುದನ್ನು ನೋಡಬೇಕಾಗಿದೆ.
ಈ ಬಾರಿ ಆ ಮಾತು ನಿಜವಾಗುತ್ತಾ?
ಕಳೆದ ಐದಾರು ದಶಕಗಳಿಂದ ನಡೆಯುತ್ತಾ ಬಂದಿರುವ ಚುನಾವಣೆಯನ್ನು ಗಮನಿಸಿದರೆ ಒಂದು ಬಾರಿ ಗೆದ್ದ ಪಕ್ಷ ಮತ್ತೊಮ್ಮೆ ವಿಜಯ ಪತಾಕೆ ಹಾರಿಸಿದ ದಾಖಲೆಯಿಲ್ಲ. ಅಷ್ಟೇ ಅಲ್ಲದೆ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ ಹೀಗೆ ಗೆಲುವಿನ ಹಾವು ಏಣಿ ಆಟವನ್ನು ಈ ಎರಡು ಪಕ್ಷಗಳು ಆಡುತ್ತಾ ಬಂದಿವೆ. ಆದರೆ ಕ್ಷೇತ್ರ ರಚನೆಯಾದ ದಿನದಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷದ ಅಭ್ಯಥಿ ಗೆಲುವು ಕಂಡಿಲ್ಲ. ಇದೆಲ್ಲದರ ನಡುವೆ ಬಹುಮುಖ್ಯವಾದ ವಿಚಾರ ಏನೆಂದರೆ ಇಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲವಂತೆ. ಇದು ಈ ಬಾರಿ ನಿಜವಾಗುತ್ತಾ? ಸುಳ್ಳಾಗುತ್ತಾ? ಎನ್ನುವುದು ಫಲಿತಾಂಶದಿಂದ ಗೊತ್ತಾಗಲಿದೆ.












Click it and Unblock the Notifications