Somanna vs Siddaramaiah: ಬಿಜೆಪಿ ಪ್ರಚಾರದ ಮೇಲೆ ಕಲ್ಲು ತೂರಾಟ; ಸಿದ್ದು ಗೆಲುವಿಗೆ ಅಣ್ಣನ ಮಕ್ಕಳೇ ಕಂಟಕ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ಎಷ್ಟು ಹೆಚ್ಚಾಗಿದೆಯೆಂದರೆ, ಬಿಸಿಲಿನ ಬೇಗೆಗಿಂತಲೂ ಅಧಿಕವಾಗಿದೆ. ಪ್ರಚಾರದ ಭರಾಟೆಯಲ್ಲಿ ಕಲ್ಲು ತೂರಾಟ ಮತ್ತು ಗಲಾಟೆ ನಡೆಯುವ ಹಂತದವರೆಗೂ ತಲುಪಿದೆ.
ಮೇ 10ರಂದು ಮತದಾನ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರವಾಗಿರುವ ಮೈಸೂರಿನ ವರುಣಾ ಕ್ಷೇತ್ರದ ಚುನಾವಣಾ ಅಖಾಡ ರಣರಂಗವಾಗಿದೆ. ಬಿಜೆಪಿ ಪಕ್ಷದ ಪ್ರಚಾರ ಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ತವರೂರಾದ ಸಿದ್ದರಾಮನಹುಂಡಿದಲ್ಲಿ ಕಲ್ಲು ತೂರಾಟದಂತಹ ಘಟನೆ ನಡೆದಿದೆ.

ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮನಹುಂಡಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಕಲ್ಲು ತೂರಾಟ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹೋದರನ ಮನೆ ಎದುರು ಪ್ರಚಾರ ಯಾತ್ರೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಸ್ವಲ್ಪದರಲ್ಲೇ ಪಾರಾಗಿದ್ದು, ಓರ್ವ ಬಿಜೆಪಿ ಕಾರ್ಯಕರ್ತನಿಗೆ ಗಾಯವಾಗಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಒಂದು ಬಾರಿ ಪ್ರಚಾರ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ
2018ರಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯನಿಗೆ ಚಾಮುಂಡೇಶ್ವರಿ ಕ್ಷೇತ್ರದ ಜನರು 36 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಇನ್ನು ಬಾದಾಮಿಯಲ್ಲಿ ಕೇವಲ 1600 ಮತಗಳಿಂದ ಗೆದ್ದಿದ್ದರು.
2023ರ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬ ಗೊಂದಲದಲ್ಲಿದ್ದ ಸಿದ್ದರಾಮಯ್ಯಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ವರುಣಾ ಕ್ಷೇತ್ರದ ಟಿಕೆಟ್ ನೀಡಿತು. ಕೊನೆಯ ಚುನಾವಣೆ ಎಂದು ಸ್ಪರ್ಧಿಸಿರುವ ಅವರಿಗೆ ಇಲ್ಲೂ ಸೋಲಿನ ಭಯ ಕಾಡುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.

ತವರಿನ ವರುಣಾ ಕ್ಷೇತ್ರ ತಮಗೆ ಸೇಫ್ ಎಂದು ಭಾವಿಸಿದ್ದ ಸಿದ್ದರಾಮಯ್ಯಗೆ ಮತದಾನ ದಿನಾಂಕ ಹತ್ತಿರ ಬರುಬರುತ್ತಾ ಕಬ್ಬಿಣದ ಕಡಲೆಯಂತಾಗುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿ, ಸಿದ್ದರಾಮಯ್ಯನವರ ನಿದ್ದೆಗೆಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ, ಬಳಿಕ ಒಂದು ಬಾರಿ ಪ್ರಚಾರ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಸಿದ ನಂತರ ಎರಡು ಬಾರಿ ಪ್ರಚಾರ ಮಾಡಿದ್ದಾರೆ. ಮತ್ತೆ ಮತ್ತೆ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಚಾಮರಾಜನಗರ ಕ್ಷೇತ್ರದ ಜೊತೆಗೆ ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ವಿ. ಸೋಮಣ್ಣಗೆ ಗೆಲುವು ಅಷ್ಟು ಸುಲಭವಿಲ್ಲದಿದ್ದರೂ, ಅವರ ಪ್ರಯತ್ನ ಮಾತ್ರ ಮೆಚ್ಚುಗೆಯಾಗಿದೆ. ಒಬ್ಬ ಮಾಜಿ ಮುಖ್ಯಮಂತ್ರಿಯನ್ನು ಅವರ ತವರಿನಲ್ಲೇ ಸೋಲಿಸಲು ಇನ್ನಿಲ್ಲದ ತಂತ್ರ- ಪ್ರತಿತಂತ್ರ, ಕಸರತ್ತು ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಚಾರ ವೇಳೆ ಗಲಾಟೆ, ಕಲ್ಲು ತೂರಾಟ
ವಿ. ಸೋಮಣ್ಣ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದಾಗಿನಿಂದ ಕಣ್ಣು ಕೆಂಪು ಮಾಡಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಬೆಂಬಲಿಗರು, ಇದೀಗ ಹಲ್ಲೆ ಮಾಡುವ ಹಂತಕ್ಕೆ ತಲುಪಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ವಿ. ಸೋಮಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿ, ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದರು.
ಇದೀಗ ವಿ. ಸೋಮಣ್ಣ ಅವರು ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನಹುಂಡಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಸ್ವತಃ ಸಿದ್ದರಾಮಯ್ಯನವರ ಅಣ್ಣನ ಮಕ್ಕಳೇ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಗುರುವಾರ ರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಬಳಿಕ ಕಾರ್ಯಕರ್ತನ ತಂದೆ ನನ್ನ ಮಗನ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಿ. ಸಿದ್ದರಾಮಯ್ಯ ಅಣ್ಣನ ಮಕ್ಕಳೇ ಇದನ್ನು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ತವರಿನಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯಗೆ ಅವರ ಅಣ್ಣನ ಮಕ್ಕಳೇ ಅಡ್ಡಿಯಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಎದುರಾಳಿ ಅಭ್ಯರ್ಥಿ ಮೇಲೆ ಕಲ್ಲು ತೂರಾಟ, ಗಲಾಟೆ ಮತ್ತು ಹಲ್ಲೆಯಂತಹ ಕೃತ್ಯಗಳನ್ನು ಎಸಗುವುದು ತಮಗೆ ನಷ್ಟವಾಗಲಿದೆ ಎಂಬುದನ್ನು ಸಿದ್ದರಾಮಯ್ಯ ಹೇಳಿಕೊಡಬೇಕಿದೆ.
ಸಿದ್ದರಾಮಯ್ಯಗೆ ಸೋಲಿನ ಭೀತಿ?
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರು ಬೆಂಬಲಿಗರಿಗೆ ಎದುರಾಳಿ ಅಭ್ಯರ್ಥಿ ಪ್ರಚಾರ ನಡೆಸುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಸೋಲಿನ ಭಯದಿಂದ ಕಂಗೆಟ್ಟಿರುವ ಕಾಂಗ್ರೆಸ್‌ನ ಗೂಂಡಾಗಳು ಕಲ್ಲು ತೂರಾಟಕ್ಕೆ ಮುಂದಾಗಿದ್ದಾರೆ ಎಂದು ಟ್ವೀಟ್ ಮೂಲಕ ಆರೋಪ ಮಾಡಿದೆ.
ವಿ. ಸೋಮಣ್ಣ ಸ್ಪರ್ಧೆಯಿಂದ ನಿಜವಾಗಲೂ ಸಿದ್ದರಾಮಯ್ಯಗೆ ಸೋಲಿನ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಕಾಡದಿರದು. ಸಿದ್ದರಾಮಯ್ಯನವರು ರಾಜ್ಯದ ಉಳಿದ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಬೇಕಿರುವುದರಿಂದ ಸ್ವಕ್ಷೇತ್ರದ ಹಿಡಿತ ತಪ್ಪುತ್ತಿದೆ ಎನ್ನಲಾಗುತ್ತಿದೆ.
ಅಲ್ಲದೆ ಇತ್ತೀಚಿಗೆ ಸಿದ್ದರಾಮಯ್ಯ ವಿರುದ್ಧ ಜಾತಿ ರಾಜಕಾರಣದ ಆರೋಪವನ್ನು ಮಾಡಲಾಗಿದೆ. ಕೇವಲ ಕುರುಬ ಸಮುದಾಯಕ್ಕೆ ಮಾತ್ರ ಅನುಕೂಲ ಮಾಡಿದ್ದಾರೆ. ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ಯಾವುದೇ ನೆರವು ನೀಡಿಲ್ಲ ಎಂದು ಆರೋಪ ಮಾಡಲಾಗಿದೆ.
ಲಿಂಗಾಯತರೇ ನಿರ್ಣಾಯಕವಾಗಿರುವ ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಮನೆಮನೆ ಪ್ರಚಾರ ಮಾಡುತ್ತಿದ್ದರೆ, ಸಿದ್ದರಾಮಯ್ಯ ಪರ ಅವರ ಮಗ ಹಾಗೂ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಚಾರ ಜವಾಬ್ದಾರಿ ಹೊತ್ತಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications