ಮೈಸೂರಿನಲ್ಲಿ ಮತದಾನ ಮಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಮೈಸೂರು, ಮೇ, 10: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ನಡೆಯತ್ತಿದ್ದು, ಈಗಾಗಲೇ ಹಲವು ರಾಜಕೀಯ ನಾಯಕ, ಸಿನಿಮಾ ನಟ, ನಟರು ಮತದಾನ ಮಾಡಿದ್ದಾರೆ. ಹಾಗೆಯೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಮತದಾನ ಮಾಡಿದರು.
ಮತಗಟ್ಟೆಗೆ ಆಗಮಿಸಿದ ಪ್ರಮೋದಾ ದೇವಿ ಅವರು ದಾಖಲೆ ಮರೆತು ಬಂದಿದ್ದರು. ಮತಗಟ್ಟೆಗೆ ಆಗಮಿಸಿದ ವೇಳೆ ಮೂಲ ದಾಖಲೆ ತರುವಂತೆ ಮತಗಟ್ಟೆ ಅಧಿಕಾರಿಗಳು ಮನವಿ ಮಾಡಿದ್ದರಿಂದ ಮತ್ತೆ ಬಂದು ವೋಟ್ ಮಾಡುವುದಾಗಿ ತಿಳಿಸಿ ಹಿಂದಿರುಗಿದರು. ಬಳಿಕ ಮೂಲ ದಾಖಲೆ ತರುವಂತೆ ಆಪ್ತರಿಗೆ ಸೂಚಿಸಿದ ಒಡೆಯರ್ ಅವರು, ಮತಗಟ್ಟೆ ಹೊರ ಭಾಗ ಕಾರಿನಲ್ಲಿ ಕುಳಿತಿದ್ದರು. ನಂತರ ಮೂಲಕ ದಾಖಲೆ ಪಡೆದು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದಾ ದೇವಿ ಒಡೆಯರ್ ಅವರು, ಮೊದಲೆಲ್ಲಾ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಆಫೀಸ್‌ನಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಬೇಕಿಲ್ಲ ಅಂತಾ ಬಂದಿದ್ದೆ. ಆದರೆ ಅದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತಾ ಅಲ್ಲಿನ ಅಧಿಕಾರಿಗಳು ಹೇಳಿದರು. ಹಾಗಾಗಿ ಮತದಾನ ನಿಧಾನ ಆಯಿತು ಎಂದು ಹೇಳಿದರು.
ಯುವಕರು ಮತದಾನದ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಬೇಕು. ಅಲ್ಲದೆ ನಮ್ಮ ಧ್ವನಿ ಕೇಳಲ್ಲ ಅಂದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿ ಏನೇ ಇದ್ದರೂ ಅದನ್ನು ಇಲ್ಲಿ ವ್ಯಕ್ತಪಡಿಸಿ. ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ ಎಂದು ಹೇಳಿದರು.
ಮೊಬೈಲ್‌ಗೆ ನಿರ್ಬಂಧ
ಅಲ್ಲದೆ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಕಷ್ಟು ಮಂದಿ ಮತದಾರರು ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳ ಕಾಪಿಯನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದರು. ಅಲ್ಲದೆ ಪರಿಶೀಲನೆ ವೇಳೆ ಇದನ್ನೇ ತೋರಿಸಲು ಇಟ್ಟು ಕೊಂಡಿದ್ದರು. ಈ ವೇಳೆ ಪೊಲೀಸರು ಮತಗಟ್ಟೆಯೊಳಗೆ ಮೊಬೈಲ್‌ಗೆ ಅವಕಾಶವಿಲ್ಲ ಎಂದು ನಿರ್ಬಂಧ ವಿಧಿಸಿದ್ದು, ಇದರಿಂದ ಮತದಾರರು ಪರದಾಡುವಂತಾಯಿತು.
ನಂತರ ಮತದಾರರು ಮೊಬೈಲ್ ಅನ್ನು ಹೊರಗೆ ಇಟ್ಟು ಮತದಾನಕ್ಕೆ ತೆರಳಿದರು.
ಮತಗಟ್ಟೆಯಲ್ಲಿ ಮತದಾನಕ್ಕೆ ಬರುವ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು ಜಿಲ್ಲಾಡಳಿತ ಶಾಲಾ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಿತ್ತು. ಆದ್ದರಿಂದ ಪ್ರತಿ ಮತಗಟ್ಟೆಯಲ್ಲಿಯೂ ವಿದ್ಯಾರ್ಥಿಗಳು ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಮತದಾನದ ಕ್ರಮ ಸಂಖ್ಯೆಯೊಂದಿಗೆ ಯಾವ ಬೂತ್‌ಗೆ ತೆರಳಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದರು.












Click it and Unblock the Notifications