ಮೈಸೂರಿನಲ್ಲಿ ಕಡುಬಿಸಿಲಿನಲ್ಲಿಯೇ ರೋಡ್ ಶೋ ನಡೆಸಿ ಗಮನ ಸೆಳೆದ ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು, ಮೇ, 01: ವಿಧಾನಸಭೆ ಚುನಾವಣೆ ಹಿನ್ನೆಲೆ ಸೋಮವಾರ ಕಡು ಬಿಸಿಲಿನ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ರೋಡ್ ಶೋ ನಡೆಸಿ ಗಮನಸೆಳೆದರು. ಈ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು. ನಗರದ ಅಗ್ರಹಾರದಿಂದ ಮಧ್ಯಾಹ್ನ 2:30ಕ್ಕೆ ಸಿಎಂ ರೋಡ್ ಆರಂಭವಾಯಿತು.
ಈ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ, ಬಿಜೆಪಿ ಒಬಿಸಿ ಅಧ್ಯಕ್ಷ ನರೇಂದ್ರ ಬಾಬು, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಸಾಥ್ ನೀಡಿದರು. ಅಗ್ರಹಾರದಿಂದ ಆರಂಭವಾದ ರೋಡ್ ಶೋ 101 ಗಣಪತಿ ದೇವಸ್ಥಾನ, ನಂಜುಮಳಿಗೆ ವೃತ್ತ ತಲುಪಿ ಚಾಮುಂಡಿಪುರಂನಲ್ಲಿ ಕೊನೆಗೊಂಡಿತು.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಮೈಸೂರು ಐತಿಹಾಸಿಕ ನಗರ ಆಗಿದೆ. ಕಳೆದ ಹಲವು ವರ್ಷದಗಳಿಂದ ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಸಂಸದರು ಇಲ್ಲಿಯವರೇ ಆಗಿದ್ದಾರೆ. ಮೈಸೂರಿನಲ್ಲಿ ನಮ್ಮ ಪಕ್ಷ ಸಂಘಟಿತವಾಗಿದೆ. ನಿಮ್ಮ ಉತ್ಸಾಹ ನೋಡಿ ಕಮಲ ಅರಳುತ್ತದೆ. ಅಲ್ಲದೆ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ನಾವು ನಮ್ಮ ಡಬ್ಬಲ್ ಎಂಜಿನ್ ಸರ್ಕಾರದ ಕೆಲಸ ಹೇಳಿ ಮತ ಕೇಳುತ್ತಿದ್ದೇವೆ. ಕೆಲವರು ನಕಾರಾತ್ಮಕ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಆದರೆ ಸಕಾರಾತ್ಮಕ ರಾಜಕೀಯ ಮಾಡುವವರಿಗೆ ನಿಮ್ಮ ಬೆಂಬಲ ಇರಲಿ. ಅಲ್ಲದೆ ನಮ್ಮ ಸರ್ಕಾರ ಆಯುಷ್ಮಾನ್ ಕಾರ್ಡ್ ಮುಖಾಂತರ ಜನರ ಆರೋಗ್ಯಕ್ಕೆ ಭದ್ರತೆ ಒದಗಿಸಿದೆ. ಮನೆ ಕಟ್ಟಲು ಕೇಂದ್ರ ಸರ್ಕಾರ ಆವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಬಸವ ಆಶ್ರಯ ಯೋಜನೆ ಕಲ್ಪಿಸಿದೆ ಎಂದರು.
ಅಲ್ಲದೆ ರೈತರ ಮಕ್ಕಳಿಗೆ ವಿದ್ಯಾನಿಧಿ, ನಗರದ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಾಡಿದ್ದೇವೆ. ಮೋದಿ ಅವರಿಗೆ ಮೈಸೂರಿನ ಬಗ್ಗೆ ಒಲವಿದೆ. ಯೋಗ ದಿನದಂದು ಅವರು ಇಲ್ಲಿಗೆ ಬಂದಿದ್ದರು. ನಿನ್ನೆ ರೋಡ್ ಶೋನಲ್ಲೂ ಭಾಗವಹಿಸಿದ್ದರು. ಹಾಗಾಗಿ ಈ ಬಾರಿ ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಅವರನ್ನು ಅತ್ಯಾಧಿಕ ಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮೈಸೂರು ಅಭಿವೃದ್ಧಿಗೆ ಬಿಜೆಪಿ ಸರ್ಕರದ ಅವಧಿಯಲ್ಲಿ 2,500 ಕೋಟಿ ರೂಪಾಯಿ ನೀಡಲಾಗಿದೆ. ದಸರಾಗೆ 25 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಮೈಸೂರಿನಲ್ಲಿ ಪ್ರವಾಸೋಮದ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಟೂರಿಸಂ ಸರ್ಕಿಟ್ ಮಾಡಲಾಗಿತ್ತು. ಕೆ.ಆರ್.ಆಸ್ಪತ್ರೆ ದುರಸ್ತಿಗೆ 80 ಕೋಟಿ ನೀಡಲಾಗಿತ್ತು. ಮಹಾರಾಣಿ ಕಟ್ಟಡ ನವೀಕರಣಕ್ಕೂ ಅನುದಾನ ನೀಡಲಾಗಿದೆ. ಆದ್ರ ಕಾಂಗ್ರೆಸ್‌ನದ್ದು ಗ್ಯಾರಂಟಿ ಅಲ್ಲ, ಗಳಗಂಟಿ ಸರ್ಕಾರ ಎಂದು ಟೀಕಿಸಿದರು.
ನಂತರ ನಟಿ ತಾರಾ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿ. ಈ ನಗರದ ನಿವಾಸಿಗಳು ಪ್ರಜ್ಞಾವಂತರಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಕೈಬಲಪಡಿಸುವ ದೃಷ್ಟಿಯಿಂದ ಬಿಜೆಪಿಗೆ ಮತ ಚಲಾಯಿಸಿ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಹಕರಿಸಿ ಎಂದು ಮನವಿ ಮಾಡಿದರು.
ಪ್ರಚಾರದ ವೇಳೆ ಭದ್ರತಾ ಲೋಪ
ಇನ್ನು ಕರ್ನಾಟಕ ಸಾರ್ವತ್ರಿಕ ಚುನಾವಣೆ ಅಂಗವಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ಲಕ್ಷಾಂತರ ಜನರ ಮಧ್ಯೆ ಭರ್ಜರಿ ನಿನ್ನೆಯಷ್ಟೇ ರೋಡ್ ನಡೆಸಿದ್ದರು. ಪ್ರಚಾರದ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಮೊಬೈಲ್ ಎಸೆದ ಘಟನೆ ನಡೆದಿದೆ.
ಮೈಸೂರಿನ ವಿದ್ಯಾಪೀಠದಿಂದ ಹೈವೇ ವೃತ್ತದ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ರೋಡ್ ಶೋ ನಡೆಸಿ ಅವರು ಬಿಜೆಪಿ ಪರ ಮತಯಾಚಿಸಿದರು. ಈ ಮೂಲಕ ಬಿಜೆಪಿಯ ಶಕ್ತಿ ಪ್ರದರ್ಶಿಸಿದರು. ಪ್ರಚಾರ ಕಾರ್ಯದ ವೇಳೆ ರಸ್ತೆ ಬದಿ ಜನಸ್ತೋಮವೇ ಕಂಡು ಬಂತು. ಎಲ್ಲರೂ ಮೋದಿ ಮೋದಿ ಎಂದು ಜೈ ಕಾರ ಕೂಗುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಮೊಬೈಲ್ ಅನ್ನು ಎಸೆದ ಘಟನೆ ನಡೆದಿತ್ತು.
ರೋಡ್ ಶೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವುಗಳನ್ನು ಎಸೆಯುವುದು ಸಾಮಾನ್ಯವಾಗಿತ್ತು. ಆದರೆ ವಾಹನದ ಮೇಲೆ ನಿಂತ ಪ್ರಧಾನಿಯತ್ತ ಮೊಬೈಲ್ ಎಸೆದಿರುವುದು ಕರ್ನಾಟಕದ ಮಟ್ಟಿಗೆ ಇದೆ ಮೊದಲು. ಈ ಮೂಲಕ ಪ್ರಧಾನಿ ರ್ಯಾಲಿಯಲ್ಲಿ ಭದ್ರತಾ ಲೋಪ ಉಂಟಾಗಿತ್ತು.












Click it and Unblock the Notifications