Nagarahole: ನಾಗರಹೊಳೆಗೆ ತಟ್ಟಿದ ಬರದ ಬಿಸಿ: ವನ್ಯಜೀವಿಗಳಿಗೆ ನೀರುಣಿಸಲು ಭಗೀರಥ ಪ್ರಯತ್ನ!
ಮೈಸೂರು, ಮಾರ್ಚ್ 14: ಕಳೆದ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೇಸಿಗೆಯ ಆರಂಭದಲ್ಲಿಯೇ ಜಲಮೂಲಗಳು ಬರಿದಾಗ ತೊಡಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಹೊಳೆ, ಕೆರೆಕಟ್ಟೆಗಳು ಈಗಲೇ ಬತ್ತಲಾರಂಭಿಸಿರುವುದರಿಂದ ಮುಂದಿನ ಬೇಸಿಗೆ ವೇಳೆಗೆ ವನ್ಯಪ್ರಾಣಿಗಳಿಗೆ ನೀರೊದಗಿಸುವುದೇ ಅರಣ್ಯ ಇಲಾಖೆಗೆ ಸವಾಲ್ ಆಗಿ ಪರಿಣಮಿಸುವ ಸಾಧ್ಯತೆ ಇರುವ ಕಾರಣ ಈಗಿನಿಂದಲೇ ನದಿಮೂಲಗಳಿಂದ ಟ್ಯಾಂಕರ್ ಮೂಲಕ ಅರಣ್ಯದಲ್ಲಿರುವ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಆರಂಭಿಸಲಾಗಿದೆ.
ಕಳೆದ ವರ್ಷ ಈ ವೇಳೆಗೆ ಕೆರೆ ಕಟ್ಟೆಗಳಲ್ಲಿ ನೀರು ತುಂಬಿತ್ತು. ಹೀಗಾಗಿ ಯಾವುದೇ ಆತಂಕ ಇರಲಿಲ್ಲ. ಆದರೀಗ ಹಾಗಿಲ್ಲ. ಈಗಾಗಲೇ ಅಲ್ಲಲ್ಲಿ ಕೆರೆಕಟ್ಟೆಗಳು ಬತ್ತಿರುವುದು ಕಾಣಿಸುತ್ತಿದೆ. ಇದರಿಂದ ನಾಗರಹೊಳೆ ಅರಣ್ಯದಲ್ಲಿರುವ ವನ್ಯಪ್ರಾಣಿಗಳು ನೀರಿಗಾಗಿ ಅಲೆಯುವಂತಾಗಿದೆ. ಇದು ಹೀಗೆಯೇ ಮುಂದುವರೆದರೆ ನಡು ಇನ್ನೊಂದು ತಿಂಗಳಲ್ಲಿ ನೀರಿಗೆ ತೀವ್ರ ಬರ ಬರುವ ಸಾಧ್ಯತೆ ಹೆಚ್ಚಾಗಿದೆ. ಅದರೊಳಗೆ ವರುಣ ಕೃಪೆ ತೋರಿದರೆ ಇಡೀ ಪ್ರಾಣಿ ಸಂಕುಲ ನೆಮ್ಮದಿಯುಸಿರು ಬಿಡಬಹುದು.

ಸಾಮಾನ್ಯವಾಗಿ ಬೇಸಿಗೆಯಲ್ಲೂ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತದೆ. ಅದರಲ್ಲೂ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಪೂರ್ವ ಮುಂಗಾರು ಮಳೆ ಸುರಿದು ವಾತಾವರಣವನ್ನು ತಂಪುಗೊಳಿಸುತ್ತದೆ. ಆದರೆ ಕಳೆದ ವರ್ಷ ಏಪ್ರಿಲ್ ತನಕವೂ ಮಳೆ ಸುರಿಯದ ಕಾರಣದಿಂದಾಗಿ ಸಂಕಷ್ಟ ಎದುರಾಗಿತ್ತಾದರೂ 2017ರ ಬಳಿಕ ಪ್ರತಿ ವರ್ಷವೂ ಮುಂಗಾರು ಉತ್ತಮವಾಗಿದ್ದರಿಂದ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ಬಾರಿ ಬೇಸಿಗೆಯಲ್ಲಿ ಮಳೆ ಸುರಿಯದೆ ಹೋದರೆ ಏನಾಗಬಹುದು ಎಂಬುದನ್ನು ಊಹಿಸಿದರೆ ನಡುಕವುಂಟಾಗುತ್ತದೆ.
ಒಣಗುತ್ತಿರುವ ಅರಣ್ಯದ ಜಲಮೂಲಗಳು
2017ರ ಹಿಂದೆಯೂ ಹೀಗೆ ಮಳೆಯಿಲ್ಲದೆ, ಅರಣ್ಯದಲ್ಲಿ ನೀರಿಗೆ ಸಂಕಷ್ಟ ಬಂದಿದ್ದು ಎಲ್ಲರ ನೆನಪಿನಲ್ಲಿದೆ. ಜತೆಗೆ ಕಾಡ್ಗಿಚ್ಚು ಸಂಭವಿಸಿದ್ದರಿಂದ ವನ್ಯ ಸಂಪತ್ತು ನಾಶವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಇವತ್ತಿಗೂ ನಾಗರಹೊಳೆಯ ಕೆಲವು ಕಡೆ ಅರ್ಧ ಸುಟ್ಟು ಹೋಗಿ ಸತ್ತ ಮರಗಳು ಸಾಕ್ಷಿಯಾಗಿ ನಿಂತಿವೆ. ಆದರೆ ಈ ಬಾರಿ ನಾಗರಹೊಳೆ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಮತ್ತು ವನ್ಯಪ್ರಾಣಿಗಳಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ನದಿಯಿಂದ ನೀರನ್ನು ಟ್ಯಾಂಕರ್ ಗಳಿಗೆ ತುಂಬಿಸಿ ಅರಣ್ಯ ಪ್ರದೇಶದಲ್ಲಿರುವ ಕೆರೆ ಕಟ್ಟೆಗಳಿಗೆ ತುಂಬಿಸುವ ಕಾರ್ಯವನ್ನು ಶುರು ಮಾಡಿದ್ದಾರೆ.
ಸುಡು ಬಿಸಿಲಿಗೆ ನಾಗರಹೊಳೆ ಅರಣ್ಯ ಪ್ರದೇಶದೊಳಗಿರುವ ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ತೀರಾ ಕೆಳಮಟ್ಟಕ್ಕೆ ಇಳಿದಿದೆ ಹೀಗಾಗಿ ಕೆಲವೆಡೆ ಈಗಲೇ ಪ್ರಾಣಿಗಳಿಗೆ ನೀರು ಸಿಗದೆ ಪರದಾಡುತ್ತಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೊಂಡು ಸುತ್ತು ಹೊಡೆದರೆ, ಹುಣಸೂರು, ವೀರನಹೊಸಹಳ್ಳಿ, ಕಲ್ಲಹಳ್ಳ, ಅಂತರಸಂತೆ ಸೇರಿದಂತೆ ನಾಗರಹೊಳೆ ವಲಯ ವ್ಯಾಪ್ತಿಯಲ್ಲಿ ಫೆಬ್ರವರಿ ಅಂತ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಪರಿಣಾಮ ನಾಗರಹೊಳೆ ಅರಣ್ಯ ಒಣಗಲಾರಂಭಿಸಿದೆ.

ವನ್ಯಪ್ರಾಣಿಗಳು ನಾಡಿನತ್ತ ಬರುವ ಭೀತಿ
ಇದರ ಜತೆಗೆ ಕಾಡಿನಲ್ಲಿರುವ ಸಾಕಷ್ಟು ಕೆರೆ ಕಟ್ಟೆಗಳಲ್ಲಿ ನೀರು ಬತ್ತಿ ಹೋಗಿದ್ದರೆ, ಇನ್ನು ಕೆಲವು ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಾಗಿ ಈಗಿನಿಂದಲೇ ವನ್ಯಜೀವಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದು ಹೀಗೆಯೇ ಮುಂದುವರೆದು ತಾಪಮಾನ ಹೆಚ್ಚಾಗಿ ಜಲಮೂಲ ಬತ್ತಿದರೆ, ಅರಣ್ಯದಲ್ಲಿರುವ ಪ್ರಾಣಿಗಳು ಮೇವು ಮತ್ತು ನೀರು ಅರಸಿ ಅದರಲ್ಲೂ ಹುಲಿ ಮತ್ತು ಆನೆ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುವ ಸಾಧ್ಯವತೆ ಹೆಚ್ಚಿರುತ್ತದೆ.
ಕಳೆದ ಕೆಲವು ವರ್ಷಗಳ ಹಿಂದೆಯೇ ನಾಗರಹೊಳೆ ಕಾಡಿನ ಮಂಟಹಳ್ಳಿ ಕೆರೆ, ಹಂದಿಕೆರೆ, ಭೀಮನಕಟ್ಟೆ, ಪಾರೆಕಟ್ಟೆ ಭಾಗದ ಕೆರೆ ಕಟ್ಟೆಗಳ ಸಮೀಪ ಕೊಳವೆ ಬಾವಿಗಳನ್ನು ಕೊರೆಯಿಸಿ ಅವುಗಳಿಗೆ ಸೋಲಾರ್ ಪಂಪ್ ಮೂಲಕ ಕೆರೆಗಳಿಗೆ ನೀರು ಹರಿಸಿ ಪ್ರಾಣಿಗಳ ಕೆರೆ ಕಟ್ಟೆಗಳನ್ನು ತುಂಬಿಸುವ ಕಾರ್ಯ ಕೈಗೊಂಡಿದ್ದರೂ, ಈ ಬಾರಿ ಮಳೆಗಾಲ ಕಡಿಮೆಯಾದ ಹಿನ್ನಲೆಯಲ್ಲಿ ಅಂತರ್ಜಲದ ಸಮಸ್ಯೆ ಎದುರಾಗಿದೆ ಜತೆಗೆ ನಾಗರಹೊಳೆ ಅರಣ್ಯದೊಳಗೆ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಹುಲಿ ಯೋಜನೆ ನಿರ್ದೇಶಕರು ಹೇಳುವುದೇನು?
ಮುಂದಿನ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆಯನ್ನು ಪರಿಹರಿಸ ಬೇಕಾದರೆ ಈಗಿನಿಂದಲೇ ಎಚ್ಚರವಾಗಿರುವುದು ಒಳಿತು. ಹೀಗಾಗಿ ಜಲಮೂಲಗಳಿಂದ ನೀರನ್ನು ಟ್ಯಾಂಕರ್ ನಲ್ಲಿ ತೆಗೆದುಕೊಂಡು ಪ್ರಾಣಿ ಪಕ್ಷಿ ಸಂಕುಲಗಳಿಗೆ ನೀರು ಒದಗಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ.

ಈ ಕುರಿತಂತೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಾ.ಹರ್ಷಕುಮಾರ್ ಚಿಕ್ಕನರಗುಂದ ಅವರು ನಾಗರಹೊಳೆ ಅರಣ್ಯದೊಳಗೆ ಕಬಿನಿ ಹಾಗೂ ಲಕ್ಷ್ಮಣತೀರ್ಥ ನದಿ ಹರಿಯುತ್ತಿರುವುದು ಕಾಡಿನ ಅಪಾರ ಜೀವ ಸಂತತಿಗೆ ಅನುಕೂಲವಾಗಿದೆ. ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ನದಿ ಪಾತ್ರ ಹಾಗೂ ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿದೆ. ಇದಲ್ಲದೆ ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಅಗತ್ಯವಿರುವ ಕೆರೆ ಕಟ್ಟೆಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ತುಂಬಿಸುವ ಕಾರ್ಯವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.
ಎಲ್ಲರೂ ವರುಣನಿಗಾಗಿ ಪ್ರಾರ್ಥಿಸೋಣ
ತಕ್ಷಣಕ್ಕೆ ಪ್ರಾಣಿಗಳ ದಾಹ ತೀರಿಸುವ ಕೆಲಸವನ್ನು ಮಾಡಿದರೂ ಇಡೀ ಅರಣ್ಯ ಹಸಿರಾಗಿ ಪ್ರಾಣಿಗಳೆಲ್ಲವೂ ನಲಿದಾಡಬೇಕಾದರೆ ವರುಣ ಕೃಪೆ ತೋರಲೇ ಬೇಕಾಗಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿದು ಭೂಮಿ ತಂಪಾದರೆ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಇದರಿಂದ ಕಾಡು ನಾಡು ಎಲ್ಲವೂ ಸಮೃದ್ಧಿಯಾಗಲು ಸಾಧ್ಯವಾಗಲಿದೆ. ಆದ್ದರಿಂದ ಆದಷ್ಟು ಬೇಗ ಮಳೆ ಸುರಿದು ವಾತಾವರಣ ತಣ್ಣಗಾಗಿ ಅರಣ್ಯದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿ ಎಂಬುದಷ್ಟೆ ಪ್ರಾರ್ಥನೆಯಾಗಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications