BJP Candidates List : ವರುಣದಲ್ಲಿ ಸಿದ್ದರಾಮಯ್ಯ ಎದುರಾಳಿ ವಿ. ಸೋಮಣ್ಣ
ಮೈಸೂರು, ಏಪ್ರಿಲ್ 11; ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಂಗಳವಾರ ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಮೈಸೂರಿನ ವರುಣ ಕ್ಷೇತ್ರ ಚುನಾವಣೆಯಲ್ಲಿ ದೇಶದ ಗಮನ ಸೆಳೆಯಲಿದೆ.
ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು. ವರುಣ ಕ್ಷೇತ್ರಕ್ಕೆ ವಸತಿ ಸಚಿವ, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಹಾಲಿ ಶಾಸಕ ವಿ. ಸೋಮಣ್ಣ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಸಚಿವ ಆರ್. ಅಶೋಕ ಮತ್ತು ವಿ. ಸೋಮಣ್ಣಗೆ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಪಕ್ಷ ಅವಕಾಶ ನೀಡಿದೆ.

ಲಿಂಗಾಯತ ಅಸ್ತ್ರ; ವರುಣದಲ್ಲಿ ಕಾಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ವಿ. ಸೋಮಣ್ಣಗೆ ಚಾಮರಾಜನಗರ ಮತ್ತು ಮೈಸೂರಿನ ವರುಣದಲ್ಲಿ ಕಣಕ್ಕಿಳಿಯಲು ಪಕ್ಷ ಅವಕಾಶ ನೀಡಿದೆ. ಈ ಮೂಲಕ ಸಿದ್ದರಾಮಯ್ಯ ಎದುರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡಿದೆ. ವರುಣ ಕ್ಷೇತ್ರದ ಹಾಲಿ ಶಾಸಕರು ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ. ಆದರೆ ಅವರು ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಿದ್ದಾರೆ.
ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಚಾಮರಾಜಪೇಟೆ, ವರುಣ, ಚಾಮುಂಡೇಶ್ವರಿ, ಕೋಲಾರ ಮುಂತಾದ ಕ್ಷೇತ್ರಗಳ ಹೆಸರು ಕೇಳಿ ಬಂದಿದ್ದವು. ಕೋಲಾರದಲ್ಲಿ ಅವರು ಬೃಹತ್ ಸಮಾವೇಶವನ್ನು ನಡೆಸಿದ್ದರು. ಹೈಕಮಾಂಡ್ ಒಪ್ಪಿಗೆ ನೀಡಿದರೆ ಕೋಲಾರದಿಂದ ಕಣಕ್ಕಿಳಿಯುವೆ ಎಂದು ಹೇಳಿದ್ದರು.

ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆಯಂತೆ ಸಿದ್ದರಾಮಯ್ಯ ವರುಣದಿಂದ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ಸಿದ್ದರಾಮಯ್ಯ ವರುಣದಿಂದ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. ಆದರೆ ಅವರು ಕೋಲಾರದಿಂದ ಕಣಕ್ಕಿಳಿಯುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಕೋಲಾರಕ್ಕೆ ಪಕ್ಷ ಸಹ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎದುರಾಳಿಯಾಗಿ ಆರ್. ಅಶೋಕ ಕಣಕ್ಕಿಳಿಸಿರುವ ಬಿಜೆಪಿ ಒಕ್ಕಲಿಗ ಕಾರ್ಡ್ ಬಳಕೆ ಮಾಡಿದೆ. ಅದೇ ಮಾದರಿಯಲ್ಲಿ ವರುಣದಲ್ಲಿ ಸಿದ್ದರಾಮಯ್ಯ ಎದುರಾಳಿಯಾಗಿ ವಿ. ಸೋಮಣ್ಣ ಕಣಕ್ಕಿಳಿಸುವ ಮೂಲಕ ಲಿಂಗಾಯತ ದಾಳ ಉರುಳಿಸಿದೆ. ವರುಣದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಿಜೆಪಿ ಸಿದ್ದರಾಮಯ್ಯ ಸೋಲಿಸಲು ತಂತ್ರ ರೂಪಿಸಿ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ. ಸೋಮಣ್ಣರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.
ಇದುವರೆಗೂ ವರುಣದಲ್ಲಿ ಸಿದ್ದರಾಮಯ್ಯ, ಯತೀಂದ್ರಗೆ ಎದುರಾಳಿಯಾಗಿದ್ದವರು ಲಿಂಗಾಯತ ಸಮುದಾಯದ ಅಭ್ಯರ್ಥಿಗಳೇ. ಈ ಬಾರಿ ಸಿದ್ದರಾಮಯ್ಯಗೆ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಎದುರಾಳಿ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಕುರಿತು ಸ್ವತಃ ಯಡಿಯೂರಪ್ಪ ಸ್ಪಷ್ಪನೆ ನೀಡಿ ವಿಜಯೇಂದ್ರ ವರುಣದಲ್ಲಿ ಕಣಕ್ಕಿಳಿಯಲ್ಲ ಎಂದು ಹೇಳಿದ್ದರು. ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಬಿ. ವೈ. ವಿಜಯೇಂದ್ರ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ.
2008ರಲ್ಲಿ ಸಿದ್ದರಾಮಯ್ಯ ವರುಣದಲ್ಲಿ ಗೆಲುವು ಸಾಧಿಸಿದ್ದರು. ಎದುರಾಳಿ ಬಿಜೆಪಿಯ ಎಲ್. ರೇವಣ ಸಿದ್ದಯ್ಯ 53,071 ಮತಗಳನ್ನು ಪಡೆದಿದ್ದರು. 2013ರಲ್ಲಿಯೂ ಸಿದ್ದರಾಮಯ್ಯ ವರುಣದಿಂದ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಬಿಜೆಪಿಯ ಮಹೇಂದ್ರ ಎಸ್. ಡಿ. ಕೇವಲ 1070 ಮತಗಳನ್ನು ಪಡೆದಿದ್ದರು. 2018ರ ಚುನಾವಣೆಯಲ್ಲಿ ವರುಣವನ್ನು ಪುತ್ರ ಯತೀಂದ್ರಗೆ ಬಿಟ್ಟುಕೊಟ್ಟು ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿಯಲ್ಲಿ ಕಣಕ್ಕಿಳಿದರು. ವರುಣದಲ್ಲಿ ಬಿಜೆಪಿ ಅಭ್ಯರ್ಥಿ ಟಿ. ಬಸವರಾಜು 37,819 ಮತಗಳನ್ನು ಪಡೆದು ಯತೀಂದ್ರ ವಿರುದ್ಧ ಸೋತಿದ್ದರು.












Click it and Unblock the Notifications