ಕರ್ನಾಟಕ ವಿಧಾನಸಭಾ ಚುನಾವಣೆ: ಗೆಲುವಿನಲ್ಲಿ ನಂಬಿಕೆ ಕಳೆದುಕೊಂಡರೇ ಹಾಲಿ ಶಾಸಕರು?
ಮೈಸೂರು, ಜನವರಿ 6: 2023ರ ವಿಧಾನಸಭಾ ಚುನಾವಣೆಗೆ ಕೇವಲ ಮೂರು ತಿಂಗಳಷ್ಟೆ ಬಾಕಿಯಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಳ್ಳುತ್ತಿದ್ದು, ಪ್ರಮುಖ ಮೂರು ರಾಜಕೀಯ ಪಕ್ಷಗಳು ಹಂತಹಂತವಾಗಿ ಪ್ರಚಾರದ ವೇಗವನ್ನು ಹೆಚ್ಚಿಸಿಕೊಳ್ಳುತ್ತಿವೆ. ಜೊತೆಗೆ ತಳಮಟ್ಟದಿಂದಲೇ ತಂತ್ರ ಪ್ರತಿತಂತ್ರಗಳು ಆರಂಭವಾಗಿವೆ. ಆರೋಪ ಪ್ರತ್ಯಾರೋಪಗಳು ಜೋರಾಗಿದೆ. ಇದರ ನಡುವೆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಟಿಕೆಟ್ ಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ ಜೆಡಿಎಸ್ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಫೆಬ್ರವರಿಯಲ್ಲಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಸದ್ಯಕ್ಕೆ ಅಭ್ಯರ್ಥಿಗಳ ಘೋಷಣೆ ಕುರಿತಂತೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ಮೂರು ಪಕ್ಷಗಳು ಗೆದ್ದೇ ಗೆಲ್ಲಬೇಕೆಂಬ ಪಣತೊಟ್ಟಿರುವ ಕಾರಣ ಪ್ರತಿ ಕ್ಷೇತ್ರಗಳಲ್ಲಿಯೂ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸುವುದು ಪಕ್ಷಗಳಿಗೆ ಅನಿವಾರ್ಯವಾಗಿದೆ.
ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಎಸ್‌ನತ್ತ ಮೃದು ಧೋರಣೆ ತಳೆದಿತ್ತು. ಅವತ್ತು ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಎರಡು ಪಕ್ಷಗಳು ಮುಗಿ ಬಿದ್ದಿದ್ದವು. ಜೊತೆಗೆ ಬಿಜೆಪಿ ಚುನಾವಣೆ ಬಳಿಕ ತಮಗೆ ಬೆಂಬಲ ನೀಡಬಹುದು ಎಂಬ ಕಾರಣಕ್ಕೆ ಜೆಡಿಎಸ್‌ಅನ್ನು ಟಾರ್ಗೆಟ್ ಮಾಡದೆ ಮೃದು ಧೋರಣೆ ತಾಳಿತ್ತು. ಆದರೆ ನಂತರ ಏನಾಯಿತು ಎನ್ನುವುದು ಜನರಿಗೆ ಗೊತ್ತಿದೆ. ಹೀಗಾಗಿ ಈ ಬಾರಿ ಜೆಡಿಎಸ್ಅನ್ನು ನಂಬಲು ಕಾಂಗ್ರೆಸ್ ಮತ್ತು ಬಿಜೆಪಿ ತಯಾರಿಲ್ಲ ಎನ್ನುವ ಅಭಿಪ್ರಾಯವಿದೆ. ಆದ್ದರಿಂದ ಮೂರು ಪಕ್ಷಗಳು ಕೂಡ ಬಹುಮತ ಪಡೆದು ತಮ್ಮದೇ ಪಕ್ಷದ ಸರ್ಕಾರ ರಚಿಸುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ತ್ರಿಕೋನ ಸ್ಪರ್ಧೆಗಳು ಬಹುತೇಕ ಕ್ಷೇತ್ರಗಳಲ್ಲಿ ಕಂಡು ಬರುವ ಸಾಧ್ಯತೆಯಿದೆ.

ಗೆಲುವಿನಲ್ಲಿ ನಂಬಿಕೆ ಕಳೆದುಕೊಂಡ ಹಾಲಿ ಶಾಸಕರು
ಸದ್ಯ ರಾಜ್ಯದಲ್ಲಿರುವ ಘಟಾನುಘಟಿ ನಾಯಕರು ತಮ್ಮ, ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅಲ್ಲಿಂದಲೇ ಗೆದ್ದು ಬರುತ್ತಿದ್ದಾರೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ನಂಬಿಕೆಯೇ ಇಲ್ಲದಾಗಿದೆ. ಚುನಾವಣೆಯಿಂದ ಚುನಾವಣೆಗೆ ಯುವ ಮತದಾರರು ಮತದಾನದ ಹಕ್ಕನ್ನು ಪಡೆಯುತ್ತಿದ್ದಾರೆ. ಯುವ ಮತದಾರರೆಲ್ಲರೂ ವಿದ್ಯಾವಂತರಾಗಿರುವುದರಿಂದ ಅವರಿಗೆ ಅರಿಯುವ ಮತ್ತು ಯೋಚಿಸುವ ಶಕ್ತಿಯಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದರಿಂದ ವಿದ್ಯಮಾನಗಳ ಅರಿವಿದೆ. ಅವರ ನಿರೀಕ್ಷೆಗಳು ಸದಾ ಹೊಸತನದಲ್ಲಿರುತ್ತದೆ. ಹೀಗಾಗಿ ರಾಜಕಾರಣಿಗಳು ಹಿಂದಿನಿಂದ ಮಾಡಿಕೊಂಡು ಬರುತ್ತಿರುವ ಗಿಮಿಕ್ ಈಗಲೂ ಫಲಕೊಡಬಹುದು ಎಂದು ಹೇಳುವುದು ಕಷ್ಟವಾಗಲಿದೆ.

ಮತದಾರರ ತೀರ್ಮಾನ ಬಹುಮುಖ್ಯ
ಜನ ಬದಲಾವಣೆಯನ್ನು ಬಯಸುವುದರಿಂದ ಒಂದೇ ಕ್ಷೇತ್ರದಲ್ಲಿ ಹಲವು ಬಾರಿ ಗೆದ್ದು ಬಂದವರು ಮುಂದೆಯೂ ಸುಲಭವಾಗಿ ಗೆಲ್ಲುತ್ತೇನೆ ಎಂಬುದನ್ನು ಹೇಳಲಾಗದು. ಮತದಾರರು ತಮ್ಮ ಮತವನ್ನು ಯಾರಿಗೆ..? ಏಕೆ ಹಾಕಬೇಕು ಎಂಬುದರ ಬಗ್ಗೆಯೂ ವಿಮರ್ಶೆ ಮಾಡುತ್ತಾರೆ. ಜತೆಗೆ ಗೆಲ್ಲಲೇ ಬೇಕು ಎಂಬ ಹಠದಲ್ಲಿರುವ ಅಭ್ಯರ್ಥಿಗಳು ಎದುರಾಳಿಯನ್ನು ಸೋಲಿಸಲು ಬೇಕಾದ ತಂತ್ರಗಳನ್ನು ಮಾಡಬಹುದು. ಮತಕ್ಕಾಗಿ ವಾಮಮಾರ್ಗವನ್ನು ಹಿಡಿಯಬಹುದು. ಆಮಿಷವೊಡ್ಡಬಹುದು. ಆದರೆ ಅದೆಲ್ಲವನ್ನು ಮೀರಿ ಕೊನೆಗಳಿಗೆಯಲ್ಲಿ ಮತದಾರರು ತೆಗೆದುಕೊಳ್ಳುವ ತೀರ್ಮಾನಗಳು ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ.

ಹಣ, ಹೆಂಡ ಹಂಚುವ ಪ್ರಯತ್ನದಲ್ಲಿ ರಾಜಕೀಯ ನಾಯಕರು
ಮತದಾರರ ಪೈಕಿ ಹಲವು ರೀತಿಯಲ್ಲಿ ಯೋಚನೆ ಮಾಡುವವರಿದ್ದು, ಕೆಲವರು ಪಕ್ಷವನ್ನು ಬೆಂಬಲಿಸಿ ಮತಹಾಕಬಹುದು, ಮತ್ತೆ ಕೆಲವರು ವ್ಯಕ್ತಿಯನ್ನು ನೋಡಿ ಮತಚಲಾಯಿಸಬಹದು, ಇನ್ನು ಕೆಲವರು ಆಮಿಷಕ್ಕೊಳಗಾಗಿ ಮತ ನೀಡಬಹುದು. ಇದೆಲ್ಲದರ ನಡುವೆ ಕೆಲವರು ಗೊಂದಲಕ್ಕೊಳಗಾಗಿ ಮತ್ಯಾರಿಗೋ ಮತಹಾಕಿ ಬಿಡಬಹುದು. ಹೀಗಾಗಿ ವರ್ಷ, ತಿಂಗಳ ಕಾಲ ರಾಜಕೀಯ ಪಕ್ಷಗಳು ಏನೇ ಹರಸಾಹಸ ಪಟ್ಟರೂ ಮತದಾನದ ಹಿಂದಿನ ಕೆಲ ದಿನಗಳು ಬಹು ಮುಖ್ಯವಾಗಿರುತ್ತದೆ. ಹಾಗಾಗಿ ರಾಜಕೀಯ ಪಕ್ಷಗಳು ಆ ದಿನಗಳಲ್ಲಿ ವಾಮಮಾರ್ಗದಲ್ಲಿ ಮತದಾರರ ಸೆಳೆಯಲು ಪ್ರಯತ್ನಿಸುತ್ತವೆ. ಹಣ, ಹೆಂಡ ಹಂಚುವ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವು ಮತದಾರರು ಕೂಡ ಅಭ್ಯರ್ಥಿಗಳಿಂದ ಫಲಾಫಲಗಳನ್ನು ನಿರೀಕ್ಷೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಗರಿಗೆದರಿದ ರಾಜಕೀಯ ಚಟುವಟಿಕೆ
ಒಟ್ಟಾರೆಯಾಗಿ ಹೇಳಬೇಕೆಂದರೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಚಟುವಟಿಕೆಗಳು ಬಿರುಸುಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ರಾಜಕೀಯವಾಗಿ ಒಂದಷ್ಟು ಬೆಳವಣಿಗೆ ಆಗಲಿವೆ. ಪ್ರತಿದಿನವೂ ರಾಜಕೀಯಕ್ಕೆ ಸಂಬಂಧಿಸಿದಂತೆ ಸಮಾವೇಶ, ಪ್ರಚಾರ ಭಾಷಣಗಳು, ಸಭೆಗಳು ನಡೆಯಲಿದ್ದು, ಇಡೀ ರಾಜ್ಯ ಸಂಪೂರ್ಣವಾಗಿ ರಾಜಕೀಯಮಯವಾಗಲಿದೆ. ಚುನಾವಣೆಗಾಗಿ ರಾಜಕೀಯ ಪಕ್ಷಗಳು, ನಾಯಕರು ಏನೇ ಮಾಡಿದರೂ ಚುನಾವಣೆಯಲ್ಲಿ ಮತ ಚಲಾಯಿಸುವವರು ಮತದಾರರು ಆಗಿರುವುದರಿಂದ ಮತದಾರರ ತೀರ್ಮಾನವೇ ಅಂತಿಮ ಎನ್ನುವುದರಲ್ಲಿ ಎರಡು ಮಾತಿಲ್ಲ.











Click it and Unblock the Notifications