ಮೈಸೂರಿನ ಅಂಗಳದಲ್ಲಿ ಹಲವಾರು ವೈವಿಧ್ಯಮಯ ಸುದ್ದಿಗಳು
ಮೈಸೂರು, ಅಕ್ಟೋಬರ್,20 : ನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರ ಹಾಗೂ ವೈಭವದಿಂದ ಆಚರಿಸಲು ಜಿಲ್ಲಾಧಿಕಾರಿ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಅಕ್ಟೋಬರ್ 20ರ ಮಂಗಳವಾರದಂದು ತೀರ್ಮಾನಿಸಿದೆ.
ಮೈಸೂರಿನಲ್ಲಿ ನವೆಂಬರ್ 1ರ ಭಾನುವಾರ ನಡೆಯಲಿರುವ ರಾಜ್ಯೋತ್ಸವ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಶ್ರೀನಿವಾಸ್ ಆಗಮಿಸಿ ರಾಷ್ಟ್ರಧ್ವಜ, ಕನ್ನಡ ಧ್ವಜಾರೋಹಣ ಹಾಗೂ ನಾಡದೇವಿ ತಾಯಿ ಭುವನೇಶ್ವರಿ ಪೂಜೆಯನ್ನು ಬೆಳಿಗ್ಗೆ 9 ಗಂಟೆಗೆ ನೆರವೇರಿಸಲಿದ್ದಾರೆ.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯೋತ್ಸವ ದಿನದಂದು ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಕೈಬಿಡಲಾಗಿದೆ. ನಗರದ ಆಯ್ದ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಒಂದುವಾರ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಯಾದ ಶಿಖಾ ಅವರಲ್ಲಿ ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿದರು. [ಮೈಸೂರು ಕರ್ನಾಟಕವಾಗಿ ಬದಲಾಗಿದ್ದು ಯಾಕೆ?]

ರಾಜ್ಯಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನ್
ರಾಜ್ಯಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನ-2015 ಮಹಿಳಾ ಕ್ರೀಡಾಕೂಟ ಅಕ್ಟೋಬರ್ 22 ರಿಂದ 24 ರವರೆಗೆ ಬೆಳಗಾವಿಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆಯಲಿದೆ.
ಈಗಾಗಲೇ ಕ್ರೀಡೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಅಕ್ಟೋಬರ್ 22ರ ಮಧ್ಯಾಹ್ನ 12.00 ಗಂಟೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರು ಗ್ರಾಮದ ಸೈನಿಕ ಶಾಲೆಯಲ್ಲಿ ನೋಂದಾಣಿ ಮಾಡಿಕೊಳ್ಳಬೇಕು.
ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಹಾರದ ವ್ಯವಸ್ಥೆ ಮತ್ತು ಸಾಮಾನ್ಯ ವಸತಿ ವ್ಯವಸ್ಥೆ ಸಂಘಟಕರಿಂದ ಏರ್ಪಡಿಸಲಾಗಿದೆ. ಕ್ರೀಡಾಪಟುಗಳು ಬರುವಾಗ ಲಘು ಹಾಸಿಗೆ ಮತ್ತು ಹೊದಿಕೆಯನ್ನು ತರತಕ್ಕದ್ದು. ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ/ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಅಥವಾ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ದೂರವಾಣಿ ಸಂಖ್ಯೆ :0831-2470757 ನ್ನು ಸಂಪರ್ಕಿಸಬಹುದು.[ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?]
ಕನಕದಾಸರ ಕುರಿತು ಪ್ರಬಂಧ ಸ್ಪರ್ಧೆ
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕನಕ ಜಯಂತಿ ಅಂಗವಾಗಿ ಕನಕ ಸಾಹಿತ್ಯ ಲೋಕ ಎಂಬ ಹೆಸರಿನಲ್ಲಿ ಕನಕದಾಸರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.
ಸ್ಫರ್ಧಿಗಳು ಕನಕದಾಸರ ಕಾವ್ಯ, ಕೀರ್ತನೆ, ಅವರ ಸಾಮಾಜಿಕ ಮತ್ತು ಪಾರಮಾರ್ಥಿಕ ಚಿಂತನೆ ಹಾಗೂ ಜೀವನ ಸಂದೇಶ ಕುರಿತಂತೆ ಯಾವುದೇ ಒಂದು ವಿಷಯದ ಬಗ್ಗೆ ಪ್ರಬಂಧ ರಚಿಸಬಹುದು. 28ರ ಬುಧವಾರದಂದು ಏರ್ಪಡಿಸುವ ಕನಕ ಜಯಂತಿ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು.
ಪ್ರಥಮ ಬಹುಮಾನ ರೂ 5,000, ದ್ವಿತೀಯ ಬಹುಮಾನ ರೂ 4000, ತೃತೀಯ ಬಹುಮಾನ ರೂ 3,000 ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನ ತಲಾ ರೂ 1,000 ಗಳಂತೆ ಐದು ನಗದು ಬಹುಮಾನ ವಿತರಿಸಲಾಗುವುದು.
ನವೆಂಬರ್ 07ರಂದು ಡಯಟ್ ಸಂಸ್ಥೆಯು ಪ್ರಬಂಧ ಸ್ಪರ್ಧೆ ನಡೆಸಿಕೊಡುತ್ತದೆ. ಆಸಕ್ತ ವಿದ್ಯಾರ್ಥಿಗಳು ಪ್ರೌಢಶಾಲೆಯ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಲಿಖಿತ ಮನವಿಯನ್ನು ಜಿಲ್ಲಾ ಶಿಕ್ಞಣ ಮತ್ತು ತರಬೇತಿ ಸಂಸ್ಥೆ (ಡಯಟ್), ವಸಂತಮಹಲ್, ಮೈಸೂರು ಇಲ್ಲಿಗೆ ದಿನಾಂಕ 30.10.2015ರೊಳಗೆ ಸಲ್ಲಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಲು 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಮನವಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಮೇರೆಗೆ ಆಯ್ಕೆ ಮಾಡಲಾಗುವುದು ಎಂದು ಡಯಟ್ ಪ್ರಾಂಶುಪಾಲರು ತಿಳಿಸಿದ್ದಾರೆ.[Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]
ಪೊಲೀಸ್ ಹುತಾತ್ಮ ದಿನಾಚರಣೆ
ಮೈಸೂರು ನಗರ ಮತ್ತು ಜಿಲ್ಲಾ ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಕೆ.ಎಸ್.ಆರ್.ಪಿ. ಘಟಕಗಳಿಂದ ಪೊಲೀಸ್ ಹುತ್ಮಾತರ ದಿನಾಚರಣೆ ಅಕ್ಟೋಬರ್ 21ರ ಬುಧವಾರದಂದು ಬೆಳಿಗ್ಗೆ 8 ಗಂಟೆಗೆ ಮೈಸೂರು ಜಿಲ್ಲಾ ಪೊಲೀಸ್ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಹುತ್ಮಾತರ ಸ್ಮಾರಕ ಉದ್ಯಾನವನದಲ್ಲಿ ನಡೆಯಲಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎಸ್. ಮುದಗಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.












Click it and Unblock the Notifications