ಚೌಕ ಸಿನಿಮಾದ ಅಪ್ಪ ಐ ಲವ್ ಯೂ ಹಾಡಿಗೆ ಕಣ್ಣೀರಾಗಿಸಿದ ಅರ್ಜುನ್ ಜನ್ಯ
ಮೈಸೂರು ಸೆಪ್ಟೆಂಬರ್ 26 : "ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೊ ಜಾದುಗಾರ, ಹಗಲು ಬೆವರಿನ ಕೂಲಿಕಾರ, ರಾತ್ರಿ ಮನೆಯಲಿ ಚೌಕಿದಾರ, ಎಲ್ಲ ಕೊಡಿಸುವ ಜಾದುಗಾರ ಅಪ್ಪಾ... ಅಪ್ಪಾ ಐ ಲವ್ ಯು ಪಾ...'
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
-ಮಳೆಯ ನಡುವೆಯೇ ಯುವ ದಸರಾ ಸಂಗೀತ ರಸ ಮಂಜರಿ ಕಾರ್ಯಕ್ರಮದಲ್ಲಿ ಕೇಳಿಬಂದ ಈ ಹಾಡು ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (ಎಜೆ) ತಮ್ಮ ತಂದೆಯನ್ನು ನೆನೆಯುತ್ತಲೇ 'ಚೌಕ' ಚಿತ್ರದ ಹಾಡು ಹಾಡಿದರು. ಎಲ್ಲ ತಂದೆಯರಿಗೂ ಈ ಹಾಡನ್ನು ಅರ್ಪಿಸಿದಾಗ ಸಂಗೀತ ಪ್ರೇಮಿಗಳು ಭಾವುಕರಾದರು. ಹಾಡಿಗೆ ಅನುರಾಧ ಭಟ್ ದನಿಗೂಡಿಸಿದ್ದರು. ಸುರಿದ ಭಾರೀ ಮಳೆಯಲ್ಲಿಯೂ ಅದೆಲ್ಲಿಂದ ಬಂದರೋ ಜನ, ಯುವ ದಸರಾ ವೇದಿಕೆಯ ಮುಂಭಾಗ ಜಮಾಯಿಸಿದ್ದರು.
ಮಲ್ಲಿಗೆ ನಗರಿಯ ಮನಸ್ಸುಗಳನ್ನು ರಂಜಿಸಲು ಬಂದಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ರಸ ಸಂಜೆಯಲ್ಲಿ ತೇಲಾಡಿದರು. ವಿಶಿಷ್ಟ ಹಾಡುಗಳ ಮೂಲಕ ಎಲ್ಲರ ಮನ ಸೂರೆಗೊಂಡ ಕನ್ನಡದ ಸಂಗೀತ ಮಾಂತ್ರಿಕ ಜನ್ಯ, ಬೆನ್ನಿನಿಂದ ಹೂ ಕುಂಡ ಸಿಡಿದು ಬರುವಂತಹ ಜಾಕೆಟ್ ಧರಿಸಿ ವೇದಿಕೆ ಪ್ರವೇಶಿಸಿದ್ದು ವಿಶೇಷವಾಗಿತ್ತು.

'ಭಜರಂಗಿ' ಚಿತ್ರದ 'ಜೈ ಜೈ ಭಜರಂಗಿ...' ಗೀತೆ ಮೂಲಕ ಯುವಜನರನ್ನು ಹುಚ್ಚೆಬ್ಬಿಸಿದರು. ನಂತರ ಚಿತ್ರರಂಗದ ತಮ್ಮ ಗಾಡ್ ಫಾದರ್ ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದ ಹುಲಿ ಹುಲಿ ಹೆಬ್ಬುಲಿ...', ಅಧ್ಯಕ್ಷ ಚಿತ್ರದ 'ಕೈನಾಗೆ ಮೈಕ್ ಇದ್ರೆ ಬಾಯ್ ತುಂಬ ಭಾಷಣ..' ಹಾಡುಗಳಿಗೆ ತಾವೂ ಕುಣಿದು, ಪ್ರೇಕ್ಷಕರನ್ನೂ ಕುಣಿಸಿದರು.
'ಜೈ ಜೈ ಜೈ ಮೈಸೂರು...' ಎಂಬ ಪದ ಸೇರಿಸಿಕೊಂಡು ಜನ್ಯ ಜೊತೆ ಹಾಡಿದರು. ಅಬ್ಬರದ ಸಂಗೀತಕ್ಕೆ ಹಿರಿಯರು, ಯುವಕ, ಯುವತಿಯರು ಹಾಗೂ ಮಕ್ಕಳು ಹೆಜ್ಜೆ ಹಾಕಿದರು. ಯಾವ ಮಳೆ-ಚಳಿ ಸಂಗೀತ ರಸಿಕರನ್ನು ತಡೆಯಲು ಸಾಧ್ಯವಾಗಲೇ ಇಲ್ಲ.

ಸಂಚಿತ್ ಹೆಗಡೆ 'ತರತರ ಎನಿಸಿದೆ ಮನಸ್ಸಿಗೆ ನೀನು..' ಹಾಗೂ 'ಸರಿಯಾಗಿ ನೆನಪಿದೆ ನನಗೆ..' ನಂತರ ಮುಕುಂದ ಮುರಾರಿ...ಹಾಡುಗಳನ್ನು ಹಾಡಿದರು. ಹಾಡುಗಳ ನಡುವೆ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಸೇರಿಸಿ ಹಾಡಿದ ಫ್ಯೂಜನ್ ಹಾಡು ದೇಶಪ್ರೇಮವನ್ನು ಉಕ್ಕಿಸಿತು. ಅರ್ಜುನ್ ಜನ್ಯರ ಸಂಗೀತ ಸಂಜೆ ಮೈಸೂರಿನ ಜನರ ಮನದಲ್ಲಿ ಉಳಿಯುವಂತಿತ್ತು.












Click it and Unblock the Notifications