Kabini Dam: ಭರ್ಜರಿ ಮಳೆಯಾದರೂ ಜಲಾಶಯದ ಒಳಹರಿವು ಕುಸಿತ: ಕಾರಣವೇನು..?
ಮೈಸೂರು, ಜೂನ್ 14: ಕೇರಳದ ವೈನಾಡು ವ್ಯಾಪ್ತಿಯಲ್ಲಿ ವರುಣನ ಅಬ್ಬರ ಇಳಿಕೆಯಾದ ಪರಿಣಾಮ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಸದ್ಯ ಒಳಹರಿವು ಆರು ಸಾವಿರ ಕ್ಯುಸೆಕ್ ನಿಂದ ಸಾವಿರ ಕ್ಯುಸೆಕ್ ಗೆ ಇಳಿದಿದೆ. ಇದು ರೈತಾಪಿ ವರ್ಗಕ್ಕೆ ನಿರಾಸೆಯನ್ನುಂಟು ಮಾಡಿದೆ.
ಕಬಿನಿ ಜಲಾಶಯಕ್ಕೆ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಎಷ್ಟೇ ಮಳೆ ಸುರಿದರೂ ಪ್ರಯೋಜನವಾಗುವುದಿಲ್ಲ. ಬದಲಿಗೆ ಕೇರಳದ ವೈನಾಡಿನಲ್ಲಿ ಮಳೆಯಾದರೆ ನದಿ ನೀರಿನ ಪ್ರಮಾಣ ಹೆಚ್ಚಾಗಿ ಜಲಾಶಯ ತಲುಪುತ್ತದೆ. ಒಂದೆರಡು ವಾರಗಳ ಹಿಂದೆ ಕೇರಳದಲ್ಲಿ ಉತ್ತಮವಾಗಿ ಮಳೆಯಾಗಿತ್ತು. ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ವೈನಾಡು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿತ್ತು. ಹೀಗಾಗಿ ಸುಮಾರು ಆರು ಸಾವಿರ ಕ್ಯುಸೆಕ್ ನಷ್ಟು ನೀರು ಹರಿದು ಬರುತ್ತಿತ್ತು.

ಬೇಸಿಗೆಯಲ್ಲಿ ತಳ ಸೇರಿದ್ದ ಜಲಾಶಯದ ನೀರಿನ ಪ್ರಮಾಣ ಮುಂಗಾರು ಪೂರ್ವ ಮತ್ತು ಮುಂಗಾರಿನ ಆರಂಭದ ನಂತರ ಸುರಿದ ಮಳೆಯಿಂದ ಹೆಚ್ಚಾಗಿತ್ತು. ದಿನದಿಂದ ದಿನಕ್ಕೆ ನೀರಿನ ಮಟ್ಟದಲ್ಲಿ ಚೇತರಿಕೆ ಕಂಡಿದ್ದು ಖುಷಿ ತಂದಿತ್ತು. ಹೀಗಾಗಿ ರೈತರಲ್ಲಿ ಆಶಾಭಾವ ಮೂಡಿತ್ತು. ಈ ಬಾರಿ ಜುಲೈ ತಿಂಗಳೊಳಗೆ ಜಲಾಶಯ ಭರ್ತಿಯಾಗ ಬಹುದೆಂಬ ಖುಷಿಯಾಗಿದ್ದರು. ಆದರೀಗ ಒಳಹರಿವಿನ ಪ್ರಮಾಣ ಇಳಿಮುಖವಾಗಿರುವುದು ಸ್ವಲ್ಪ ಮಟ್ಟಿಗೆ ಬೇಸರ ತಂದಿದೆ.
ಆರು ಅಡಿಯಷ್ಟು ಹೆಚ್ಚಿದ ನೀರಿನ ಮಟ್ಟ
ಹಾಗೆನೋಡಿದರೆ ಜನವರಿಯಿಂದ ಏಪ್ರಿಲ್ ತನಕ ಸರಿಯಾಗಿ ಮಳೆಯೇ ಸುರಿದಿರಲಿಲ್ಲ. ಹೀಗಾಗಿ ಆತಂಕ ಸೃಷ್ಟಿಯಾಗಿತ್ತು. ನೀರಿನ ಪ್ರಮಾಣವೂ ಇಳಿಯುತ್ತಾ ಹೋಗಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ಆದರೆ ಮೇ ತಿಂಗಳ ಮೊದಲ ವಾರದಲ್ಲಿ ಉತ್ತಮವಾಗಿ ಸುರಿದ ಮಳೆ ಜನರಲ್ಲಿ ಆವರಿಸಿದ್ದ ಆತಂಕವನ್ನು ದೂರ ಮಾಡಿತ್ತಲ್ಲದೆ, ನೀರು ಕೂಡ ಜಲಾಶಯಕ್ಕೆ ಹರಿದು ಬರಲಾರಂಭಿಸಿತ್ತು. ಇದರಿಂದ ಸಂಗ್ರಹ ಮಟ್ಟದಲ್ಲಿ ಚೇತರಿಕೆ ಕಂಡು ಬರಲಾರಂಭಿಸಿತು.
ಸದ್ಯಕ್ಕೀಗ ಕೇರಳ ರಾಜ್ಯದ ವೈನಾಡು ಪ್ರದೇಶ ಸೇರಿದಂತೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಮುಂಗಾರು ಮಳೆಯ ಅಬ್ಬರ ತಣ್ಣಗಾಗಿದ್ದು, ಇದರಿಂದ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳ ಹರಿವಿನಲ್ಲಿ ತೀವ್ರ ಕುಸಿತ ಕಾಣಲಾರಂಭಿಸಿದೆ. ಮಳೆ ಉತ್ತಮವಾಗಿ ಸುರಿಯುತ್ತಿದ್ದ ವೇಳೆ ತಳ ಸೇರಿದ್ದ ಜಲಾಶಯಕ್ಕೆ ಜೀವಕಳೆ ಬಂದಿತ್ತಲ್ಲದೆ, ಸುಮಾರು ಆರು ಅಡಿಯಷ್ಟು ನೀರಿನ ಮಟ್ಟವೂ ಹೆಚ್ಚಾಗಿತ್ತು.

2263 ಅಡಿಗೇರಿದ ನೀರಿನ ಮಟ್ಟ
ಪ್ರತಿ ದಿನವೂ ಆರು ಸಾವಿರ ಕ್ಯುಸೆಕ್ ನೀರು ಹರಿದು ಬಂದಿದ್ದರಿಂದ ಬೇಸಿಗೆಯಲ್ಲಿ 2257 ಅಡಿಗಳಿಗೆ ಕುಸಿತ ಕಂಡಿದ್ದ ಜಲಾಶಯದ ನೀರಿನ ಮಟ್ಟ ಹದಿನೈದು ದಿನಗಳ ಅವಧಿಯಲ್ಲಿ 2263 ಅಡಿಗಳಿಗೆ ಏರಿಕೆ ಕಂಡಿತ್ತು. ಆದರೀಗ ಜಲಾಶಯಕ್ಕೆ ಕೇವಲ 1863 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಮುಂಭಾಗದ ನದಿಗೆ 300 ಕ್ಯುಸೆಕ್ ನೀರನ್ನು ಬಿಡಲಾಗುತ್ತದೆ. 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2263 ಅಡಿಯಷ್ಟು ನೀರಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚೇತರಿಕೆಯಾದರೆ ಒಳ ಹರಿವು ಹೆಚ್ಚುವ ಸಾಧ್ಯತೆಯಿದೆ. ಈಗ ಬಹುತೇಕ ಕಡೆ ಮೋಡ ಕವಿದ ವಾತಾವರಣದೊಂದಿಗೆ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿರುವ ಕಾರಣದಿಂದಾಗಿ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಮುಂಗಾರು ಮಳೆ ಯಾವಾಗ ಬೇಕಾದರೂ ಅಬ್ಬರಿಸುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಳೆ ಚೇತರಿಕೆಯಾಗಲಿದ್ದು ಜುಲೈ ಆಗಸ್ಟ್ ನಲ್ಲಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಈಗಲೂ ರೈತಾಪಿ ವರ್ಗದಲ್ಲಿದೆ.
ಬೇಗ ಭರ್ತಿಯಾಗುವ ನಿರೀಕ್ಷೆಯಲ್ಲಿ ರೈತರು
ಇನ್ನು ಕಳೆದ ವರ್ಷ ಮುಂಗಾರು ಆಶಾದಾಯಕವಾಗಿರಲಿಲ್ಲ. ವಾಡಿಕೆ ಮಳೆ ಸುರಿಯದ ಕಾರಣ ಜಲಾಶಯವೂ ಭರ್ತಿಯಾಗಿರಲಿಲ್ಲ. ಇದರ ನಡುವೆ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದ್ದರಿಂದ ನೀರಿಗೆ ತೊಂದರೆವುಂಟಾದ ಕಾರಣ ಕುಡಿಯುವ ನೀರಿನ ಅಗತ್ಯ ನೋಡಿಕೊಂಡು ಕೃಷಿಗೂ ಸರಿಯಾಗಿ ನೀರು ಹರಿಸಿರಲಿಲ್ಲ. ಇದರಿಂದ ರೈತರು ಬೆಳೆ ಬೆಳೆಯದೆ ಕಂಗಾಲಾಗಿದ್ದರು.
ರಾಜ್ಯ ಹವಾಮಾನ ಇಲಾಖೆ ಈ ಬಾರಿ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಬರಲಿದೆ ಎಂದು ಹೇಳಿದ್ದು, ಅದರಂತೆಯೇ ಮುಂಗಾರು ಆರಂಭದಲ್ಲಿಯೇ ಮಳೆ ಸುರಿದಿದ್ದು, ಮುಂದೆ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಜಲಾಶಯ ಭರ್ತಿಯಾದರೆ ರೈತರ ಜಮೀನಿಗೆ ನೀರು ಹರಿದು ಬರಲಿದ್ದು ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಬಹುದೆಂಬ ಖುಷಿಯಲ್ಲಿ ರೈತರಿದ್ದಾರೆ.












Click it and Unblock the Notifications