Kabini Dam: ಕಬಿನಿ ಜಲಾಶಯದಿಂದ 15,000 ಕ್ಯೂಸೆಕ್ ನೀರು ಬಿಡುಗಡೆ
ಮೈಸೂರು, ಜುಲೈ, 25: ಭಾರೀ ಮಳೆ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೊಂದೆಡೆ ಕೆಲವು ಜಲಾಶಯಗಳ ನೀರನ್ನು ಕೂಡ ಹೊರಗಡೆ ಬಿಡಲಾಗುತ್ತಿದೆ. ಅದೇ ರೀತಿ ಇದೀಗ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಿಂದ 15,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಮುಂದಿನ ಸೇತುವೆ ಮುಳುಗಡೆ ಆಗಿದ್ದು, ಲಘು ವಾಹನಗಳಿಗೆ ಜಲಾಶಯದ ಮೇಲ್ಭಾಗದಿಂದ ಬಿದರಹಳ್ಳಿ ಮತ್ತು ಮುಂದಿನ ಎಲ್ಲಾ ಗ್ರಾಮಗಳಿಗೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿದೆ.
ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಇತರ ವಾಹನಗಳು ಸರಗೂರು ಸಾಗರೆ, ಆಗತ್ತೋರು ಬಿದರಹಳ್ಳಿ ಮೂಲಕ ಮುಂದಿನ ಗ್ರಾಮಗಳಿಗೆ ತೆರಳಲು ಕೋರಲಾಗಿದೆ ಎಂದು ತಹಶೀಲ್ದಾರ್ ಸಣ್ಣ ರಾಮಪ್ಪ ತಿಳಿಸಿದ್ದಾರೆ.

ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ನೀರಿನ ಸಂಗ್ರ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಇಂದಿನ ನೀರಿನ ಮಟ್ಟ 16.09 ಟಿಎಂಸಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಳಹರಿವು 20,749 ಕ್ಯೂಸೆಕ್ ಇದ್ದರೆ, ಹೊರಹರಿವು 33,33 ಕ್ಯೂಸೆಕ್ ಇದೆ.
ಜಲಾಶಯಕ್ಕೆ ಜೀವಕಳೆ ಬಂದಿದೆ
ವಾಡಿಕೆಯಂತೆ ಮಳೆ ಸುರಿದಿದ್ದರೆ ಇಷ್ಟರಲ್ಲೇ ಜಿಲ್ಲೆಯ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿ ಬಿಡುತ್ತಿತ್ತು. ಆದರೆ ಬೇಸಿಗೆಯಲ್ಲಿ ನೀರಿನ ಮಟ್ಟ ತಳಮುಟ್ಟಿದ್ದರಿಂದ ಮತ್ತು ಮುಂಗಾರು ವಿಳಂಬವಾದ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರಲಿಲ್ಲ. ಆದರೀಗ ಕೇರಳದ ವೈನಾಡು ಸೇರಿದಂತೆ ಹಿನ್ನೀರು ಪ್ರದೇಶಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಜೀವಕಳೆ ಬಂದಿದೆ.
ಕಳೆದ ಕೆಲ ದಿನಗಳಿಂದ ಮುಂಗಾರು ಚೇತರಿಸಿಕೊಂಡಿದ್ದು, ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ ನೀರಿನ ಮಟ್ಟವೂ ಏರಿಕೆಯಾಗುತ್ತಿದ್ದು, 2284 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2279.30 ಅಡಿಯಷ್ಟು ನೀರಿದೆ.
ತಗ್ಗುಪ್ರದೇಶದ ಜನರಿಗೆ ಶುರುವಾಯ್ತು ನಡುಕ
ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆಯೇ ರೈತರಿಗೆ ಸಂತೋಷದ ಜೊತೆಗೆ ಆತಂಕವೂ ಶುರುವಾಗಿದೆ. ಒಂದು ಕಡೆ ಜಲಾಶಯ ಭರ್ತಿಯಾದರೆ ಕೃಷಿಗೆ ನೀರು ಹರಿದು ಬರಲಿದೆ ಎಂಬ ಖುಷಿಯಿದ್ದರೆ, ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಸಂಕಷ್ಟ ಅನುಭವಿಸಬೇಕಲ್ವ ಎಂಬ ಚಿಂತೆಯೂ ಕಾಡತೊಡಗಿದೆ. ಈಗಾಗಲೇ ಕಳೆದ ನಾಲ್ಕೈದು ವರ್ಷಗಳಿಂದ ನದಿಪಾತ್ರದ ಜನ ಪ್ರವಾಹದ ಸಂಕಷ್ಟವನ್ನು ಅನುಭವಿಸುತ್ತಲೇ ಬಂದಿರುವುದರಿಂದ ತಗ್ಗುಪ್ರದೇಶದ ಜನರ ಎದೆ ಢವಢವ ಎಂದು ಬಡಿದುಕೊಳ್ಳಲಾರಂಭಿಸಿದೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಪಕ್ಕದಲ್ಲಿರುವ ಸುಭಾಷ್ ವಿದ್ಯುತ್ ಘಟಕದ ಮೂಲಕ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ. ಒಳ ಹರಿವು ಧಿಡೀರ್ ಹೆಚ್ಚಾದಲ್ಲಿ ಹೆಚ್ಚಿನ ನೀರಿನ ಹೊರ ಹರಿವು ಹೆಚ್ಚಿಸುವುದು ಅನಿವಾರ್ಯವಾಗಲಿದ್ದು, ಇದರಿಂದ ಪ್ರವಾಹ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಈ ನಡುವೆ ಜಲಾಶಯ ಭರ್ತಿಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ಬಲದಂಡೆ ನಾಲೆಯ 1.15 ಲಕ್ಷ ಹೆಕ್ಟೇರ್, ಎಡದಂಡೆ ನಾಲೆಯ 3 ಸಾವಿರ ಹೆಕ್ಟೇರ್ ಪ್ರದೇಶದ ರೈತರ ಗದ್ದೆಗಳ ಖಾರೀಫ್ ಬೆಳೆಗೆ ನೀರು ಸಿಗುವ ಸಾಧ್ಯತೆಯಿದೆ. ಇದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಇನ್ನು ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಇದರಿಂದ ಜಲಾಶಯದ ತಳಭಾಗದಲ್ಲಿರುವ ಗ್ರಾಮಗಳು ಹಾಗೂ ನಂಜನಗೂಡು ಪಟ್ಟಣದ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಪ್ರವಾಹ ಏರ್ಪಡುತ್ತಿದ್ದು, ಪ್ರತಿ ವರ್ಷವೂ ಸಂಕಷ್ಟ ಅನುಭವಿಸುವುದು ತಪ್ಪದಂತಾಗಿದೆ.












Click it and Unblock the Notifications