ನನಗೆ ಟಿಕೆಟ್ ಸಿಗಬಹುದೆಂಬ ಭರವಸೆಯಿದೆ:ಕೆ.ಶಿವರಾಂ
ಮೈಸೂರು, ಮಾರ್ಚ್ 6:ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಲೋಕಸಭೆ ಚುನಾವಣೆಗೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ನಿನ್ನೆ ತಡ ರಾತ್ರಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಶಿವರಾಂ ಭೇಟಿ ನೀಡಿ, ಬಿಜೆಪಿಯಿಂದ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಕೆ.ಶಿವರಾಂ ಅವರು, ಪ್ರಸಾದ್ ಅಣ್ಣ ಹೇಳಿದವರಿಗೆ ಟಿಕೆಟ್ ಎಂದು ಈ ಹಿಂದೆ ಯಡಿಯೂರಪ್ಪ ಹೇಳಿದ್ದಾರೆ. ನಾನು 30ವರ್ಷದಿಂದಲೂ ಪ್ರಸಾದ್ ಅಣ್ಣ ಅವರೊಂದಿಗೆ ಇದ್ದೇನೆ. ಹೀಗಾಗಿ ಟಿಕೆಟ್ ಕೊಡಿಸುವಂತೆ ಆಶೀರ್ವಾದ ಕೇಳಿದ್ದೇನೆ. ಹಾಗೆಯೇ ಶ್ರೀನಿವಾಸ್ ಪ್ರಸಾದ್ ಅವರು ಸಹ ಟಿಕೆಟ್ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೇ ಈ ಕುರಿತಾಗಿ ಹೈ ಕಮಾಂಡ್ ಗೆ ಹೇಳಲಿದ್ದೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪ್ರಸಾದ್ ಅವರ ಆಶೀರ್ವಾದ ಇಲ್ಲದೆ ಯಾರು ಗೆಲ್ಲಲು ಸಾಧ್ಯವಿಲ್ಲ. ಆಯ್ಕೆ ವಿಚಾರದಲ್ಲಿ ಪ್ರಸಾದ್ ರವರ ತೀರ್ಮಾನವೇ ಅಂತಿಮ. ಸಮರ್ಥ ಅಭ್ಯರ್ಥಿಯನ್ನು ಅವರೇ ತೀರ್ಮಾನ ಮಾಡಲಿದ್ದಾರೆ. ಪ್ರಸಾದ್ ಅಣ್ಣ ಅವರು ಇದಕ್ಕೆ ಕೈ ಹಾಕಬೇಡ ಸುಮ್ಮನಿರು ಎಂದರೆ ಸುಮ್ಮನಾಗುತ್ತೇನೆ. ಯಾರಿಗೆ ಟಿಕೆಟ್ ನೀಡಿದರೂ ಕೆಲಸ ನಿರ್ವಹಿಸುತ್ತೇವೆ. ಲೋಕಸಭಾ ಚುನಾವಣೆಗೆ ನಾನು ಎಲ್ಲ ತಯಾರಿ ಮಾಡಿಕೊಂಡಿದ್ದೇನೆ. ಟಿಕೆಟ್ ನನಗೆ ಸಿಗಬಹುದು ಎಂದು ಭರವಸೆ ವ್ಯಕ್ತಪಡಿಸಿದರು.












Click it and Unblock the Notifications