ಕಬಿನಿ ಹಿನ್ನೀರಿನಲ್ಲಿ ಪ್ರತ್ಯಕ್ಷನಾದ ಜೂನಿಯರ್ ಅರ್ಜುನ: ಪ್ರಾಣಿಪ್ರಿಯರು ಫುಲ್‌ ಖುಷ್‌

ಮೈಸೂರು, ಮೇ 04: ಇವತ್ತಿಗೂ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದ ಹೆಜ್ಜೆ ಹಾಕುತ್ತಿದ್ದ ಅರ್ಜುನ ಆನೆಯನ್ನು ಯಾರೂ ಮರೆತಿಲ್ಲ. ಹಾಸನದಲ್ಲಿ ಕಾಡಾನೆ ದಾಳಿಗೆ ಬಲಿಯಾದ ಅರ್ಜುನ ಒಂದಲ್ಲ ಒಂದು ಕಾರಣಕ್ಕೆ ಪ್ರಾಣಿಪ್ರಿಯರನ್ನು ಕಾಡುತ್ತಲೇ ಇರುತ್ತಾನೆ. ಆದರೆ ಅರ್ಜುನ ನಮ್ಮನ್ನು ಬಿಟ್ಟು ಹೋದನಲ್ಲ ಎಂಬ ಕೊರಗಿನಲ್ಲಿರುವಾಗಲೇ ಕಬಿನಿ ಹಿನ್ನೀರಿನಲ್ಲಿ ಅರ್ಜುನನ ಮುಖವನ್ನೇ ಹೋಲುವ ಆನೆಯೊಂದು ಕಾಣಿಸಿರುವುದು ವನ್ಯಜೀವಿ ಛಾಯಾಗ್ರಾಹಕರಿಗೆ ಅಚ್ಚರಿ ತಂದಿದ್ದು, ಅದರ ಚಿತ್ರ ತೆಗೆದು ಖುಷಿಪಟ್ಟಿದ್ದಾರೆ.

ಸದ್ಯಕ್ಕೀಗ ಕಬಿನಿ ಹಿನ್ನೀರಿನಲ್ಲಿ ಕಂಡು ಬಂದ ಜೂನಿಯರ್ ಅರ್ಜುನ ಎಲ್ಲರ ಗಮನಸೆಳೆದಿದ್ದು, ಎಲ್ಲರೂ ಅಚ್ಚರಿಯ ನೋಟ ಬೀರುತ್ತಿದ್ದಾರೆ. ಇಷ್ಟಕ್ಕೂ ಅರ್ಜುನನ್ನೇ ಹೋಲುವ ಈ ಕಾಡಾನೆಯದು ಅಪರೂಪದ ದರ್ಶನವಾಗಿದೆ. ಕಾಡಿನಲ್ಲಿ ಅಂಡಲೆಯುವ ಈ ಕಾಡಾನೆ ಛಾಯಾಗ್ರಾಹಕರ ಕ್ಯಾಮರಾ ಕಣ್ಣಿಗೆ ಬಿದ್ದಿರುವುದು ಆಕಸ್ಮಿಕ, ಅಚ್ಚರಿಯ ಕ್ಷಣ ಎಂದರೂ ತಪ್ಪಾಗಲಾರದು.

Junior Arjuna Found In The Mysore Kabini Backwaters

ಹಾಗೆನೋಡಿದರೆ ಹೆಚ್.ಡಿ.ಕೋಟೆ ತಾಲೂಕಿನ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ಹಿನ್ನೀರು ಈಗ ಪ್ರಾಣಿಪಕ್ಷಿಗಳ ದಾಹ ನೀಗಿಸುವ ತಾಣವಾಗಿದೆ. ಅರಣ್ಯದಲ್ಲಿದ್ದ ಕೆರೆ ಕಟ್ಟೆಗಳೆಲ್ಲವೂ ಬಿಸಿಲ ಧಗೆಗೆ ಬತ್ತಿ ಹೋಗಿವೆ. ತಮಗೆ ಹತ್ತಿರದಲ್ಲಿಯೇ ಕೆರೆಕಟ್ಟೆಗಳಲ್ಲಿ ದೊರೆಯುತ್ತಿದ್ದ ನೀರನ್ನು ಕುಡಿದು ನೆಮ್ಮದಿಯಾಗಿದ್ದ ವನ್ಯಪ್ರಾಣಿಗಳು ಇದೀಗ ಜಲಮೂಲಗಳೇ ಬತ್ತಿ ಹೋಗಿರುವ ಕಾರಣದಿಂದ ನೀರಿಗಾಗಿ ಅರಣ್ಯದಲ್ಲಿ ಎಲ್ಲೆಂದರಲ್ಲಿ ಅಲೆಯುತ್ತಿದ್ದು ನೀರನ್ನು ಹುಡುಕಿಕೊಂಡು ಕಬಿನಿ ಹಿನ್ನೀರಿನತ್ತ ಬರುತ್ತಿವೆ.

ಕಬಿನಿ ಹಿನ್ನೀರಿನಲ್ಲಿ ಪ್ರತ್ಯಕ್ಷನಾದ ಜೂ.ಅರ್ಜುನ

ಈಗಾಗಲೇ ಬಹುತೇಕ ಪ್ರಾಣಿಪಕ್ಷಿಗಳು ಕಬಿನಿ ಹಿನ್ನೀರಿನಲ್ಲಿ ನೆಲೆಯೂರಿವೆ. ಕಾಡಾನೆಗಳು, ಹುಲಿ, ಚಿರತೆ, ಕಾಡುಕೋಣಗಳು ನೀರನ್ನು ಅರಸಿಕೊಂಡು ಇತ್ತ ಬರುತ್ತಿವೆ. ಹೀಗೆ ಬರುವ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿಯಲೆಂದೇ ವನ್ಯ ಛಾಯಾಗ್ರಾಹಕರು ಇಲ್ಲಿ ಬೀಡು ಬಿಡುತ್ತಿದ್ದಾರೆ. ಹೀಗೆ ಕ್ಯಾಮರಾ ಹಿಡಿದುಕೊಂಡು ಕಾಯುತ್ತಿದ್ದವರಿಗೆ ಅರ್ಜುನನ್ನು ಹೋಲುವ ಆನೆ ಸೆರೆ ಸಿಕ್ಕಿದೆ. ಕಾಡಿನಿಂದ ನೀರು ಅರಸಿಕೊಂಡು ಬಂದ ಈ ಆನೆ ನೋಡಲು ಅರ್ಜುನನಂತೆ ಕಾಣಿಸುತ್ತಿದೆ. ಹೀಗಾಗಿ ಇದನ್ನು ನೋಡಿದವರು ಖುಷಿಪಡುತ್ತಿದ್ದಾರೆ.

ಕಬಿನಿಯಲ್ಲಿ ನೀರಿನ ಪ್ರಮಾಣ ಕೂಡ ಪಾತಾಳಕ್ಕಿಳಿದಿದೆ. ಇದರ ನೀರು ಮನುಷ್ಯರ ಬಳಕೆಗೆ ಎಷ್ಟು ಉಪಯೋಗವಾಗುತ್ತಿದೆಯೋ ಅದಕ್ಕಿಂತ ಹೆಚ್ಚಾಗಿ ಪ್ರಾಣಿಪಕ್ಷಿಗಳು ಇದನ್ನು ಅವಲಂಭಿಸಿವೆ. ಅದರಲ್ಲೂ ಕಳೆದ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ಅರಣ್ಯದ ನಡುವೆಯಿದ್ದ ಕೆರೆಕಟ್ಟೆಗಳು ಭರ್ತಿಯಾಗಿರಲಿಲ್ಲ. ಹೀಗಾಗಿ ಬೇಸಿಗೆಯ ಆರಂಭದಲ್ಲಿಯೇ ಬತ್ತಿ ಹೋಗಿವೆ. ಹೀಗಾಗಿ ಪ್ರಾಣಿ ಪಕ್ಷಿಗಳು ನೀರನ್ನು ಹುಡುಕಿಕೊಂಡು ಕಬಿನಿ ಹಿನ್ನೀರಿಗೆ ಬರುವುದು ಅನಿವಾರ್ಯವಾಗಿದೆ. ಸದ್ಯ ಇಲ್ಲಿಗೆ ಸ್ಥಳೀಯ ಪ್ರಾಣಿಗಳು ಮಾತ್ರವಲ್ಲದೆ, ಕೇರಳದ ಕಡೆಯಿಂದಲೂ ಕಾಡಾನೆಗಳು ಬರುತ್ತಿವೆ ಎಂದು ಹೇಳಲಾಗುತ್ತಿದ್ದು, ಹೀಗೆ ಬಂದ ಕಾಡಾನೆಗಳು ಇಲ್ಲಿಯೇ ಠಿಕಾಣಿ ಹೂಡಿ ಜಲಕ್ರೀಡೆಯಾಡುತ್ತಿವೆ.

Junior Arjuna Found In The Mysore Kabini Backwaters

ಅರ್ಜುನನಿಂದ ಹುಟ್ಟಿದ್ದಾ ಈ ಆನೆ?

ಇದೀಗ ಅರ್ಜುನನ್ನು ಹೋಲುವ ಜೂನಿಯರ್ ಅರ್ಜುನ ನೀರು ಕುಡಿದು ದಾಹ ತಣಿಸುವ ಸಲುವಾಗಿ ಇತ್ತ ಬಂದಿದ್ದಾನೆ. ಬಹುಶಃ ಇದು ಅರ್ಜುನ ಆನೆಯಿಂದಲೇ ಜನಿಸಿರಬಹುದು. ಬಳ್ಳೇ ಆನೆ ಶಿಬಿರದಲ್ಲಿದ್ದ ಅರ್ಜುನ ಈತನ ತಂದೆಯಾಗಿರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಅರಣ್ಯ ಇಲಾಖೆ ಮೂಲಗಳು ಕಲೆ ಹಾಕಬೇಕಾಗಿದೆ. ಸದ್ಯಕ್ಕೆ ಅರ್ಜುನ ಆನೆಯನ್ನು ಹೋಲುವಂತೆ ಇರುವುದರಿಂದ ಅರ್ಜುನನ ನೆನಪು ಉಳಿಯುತ್ತಿದೆಯಲ್ಲ ಅಷ್ಟೆ ಸಾಕು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಕಾರಣ ಜತೆಗೆ ಅರಣ್ಯದೊಳಗಿರುವ ಕೆರೆಗಳು ಬತ್ತಿ ಹೋಗಿರುವುದರಿಂದ ಕಬಿನಿ ಹಿನ್ನೀರಿನಲ್ಲಿ ಕಾಡಾನೆಗಳು ಜಲಕ್ರೀಡೆಯಾಡುತ್ತಿವೆ. ಜತೆಗೆ ಇಲ್ಲಿಯೇ ಹಸಿರು ಮೇವು ತಿಂದುಕೊಂಡು ನೆಲೆಯೂರುತ್ತಿವೆ. ಹಿಂದೆ ಬೇಸಿಗೆಯ ಸಮಯದಲ್ಲಿ ಧೈತ್ಯ ಸಲಗ ಕಾಣಿಸಿಕೊಳ್ಳುತ್ತಿದ್ದ. ಆತನನ್ನು ನೋಡಲು ಜನ ಇಷ್ಟಪಡುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಆತ ಇಹಲೋಕ ತ್ಯಜಿಸಿದ್ದನು.

ಇದೊಂದು ಖುಷಿಕೊಡುವ ವಿಚಾರ

ಒಟ್ಟಾರೆ ಕಬಿನಿ ಹಿನ್ನೀರು ಹಲವು ಪ್ರಾಣಿ ಪಕ್ಷಿಗಳಿಗೆ ಜೀವಜಲ ನೀಡುವ ತಾಣವಾಗಿದ್ದು, ಪಕ್ಷಿ ಪ್ರಾಣಿಗಳು ಇಲ್ಲಿಗೆ ಬಂದು ದಾಹ ತೀರಿಸಿಕೊಳ್ಳುತ್ತಿವೆ. ಅದರಂತೆ ಅರ್ಜುನ ಆನೆಯನ್ನು ಹೋಲುವ ಜೂನಿಯರ್ ಅರ್ಜುನ ಬಂದಿದ್ದು, ಒಂದು ವೇಳೆ ಅರಣ್ಯದೊಳಕ್ಕೆ ಹೋದರೆ ಮತ್ತೆ ಪ್ರತ್ಯಕ್ಷವಾಗುವುದು ಕಷ್ಟವೇ.. ಅದು ಏನೇ ಇರಲಿ ಅರ್ಜುನನ ಹೋಲುವ ಆನೆಯೊಂದು ಕಾಡಲ್ಲಿದೆ ಎಂಬುದೇ ಎಲ್ಲರಿಗೂ ಖುಷಿಕೊಡುತ್ತಿರುವ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+