Darshan Dhruvanarayan; ನಂಜನಗೂಡಲ್ಲಿ ಜೆಡಿಎಸ್ ಬೆಂಬಲ ದರ್ಶನ್‌ಗೆ?
ಮೈಸೂರು, ಏಪ್ರಿಲ್ 07; ಕರ್ನಾಟಕದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೇ 10ರಂದು ನಡೆಯಲಿರುವ ಚುನಾವಣೆಗೆ ಜೆಡಿಎಸ್ ಈಗಾಗಲೇ 93 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಮಾಡಿದೆ. ಕಾಂಗ್ರೆಸ್ 124 ಮತ್ತು 42 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ ಕಾಂಗ್ರೆಸ್ ಅಭ್ಯರ್ಥಿ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಧ್ರುವನಾರಾಯಣ ಪುತ್ರ ದರ್ಶನ್ ಧ್ರುವನಾರಾಯಣ. ಮಾರ್ಚ್ 11ರಂದು ಧ್ರುವನಾರಾಯಣ ವಿಧಿವಶರಾಗಿದ್ದರು. ಏಪ್ರಿಲ್ 7ರ ಶುಕ್ರವಾರ ಅವರ ಪತ್ನಿ ವೀಣಾ ಧ್ರುವನಾರಾಯಣ ನಿಧನ ಹೊಂದಿದ್ದಾರೆ. ಧ್ರುವನಾರಾಯಣ ಕುಟುಂಬ ದುಖಃದಲ್ಲಿರುವ ಸಂದರ್ಭದಲ್ಲಿಯೇ ಚುನಾವಣೆ ಎದುರಿಸುವುದು ಸಹ ಅನಿವಾರ್ಯವಾಗಿದೆ.

ದಿ. ಧ್ರುವನಾರಾಯಣ ಅವರ ಅಭಿಮಾನಿಗಳ, ಪಕ್ಷದ ಕಾರ್ಯಕರ್ತರ ಒತ್ತಾಸೆಯಂತೆ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಮೈಸೂರಿನ ನಂಜನಗೂಡು ಕ್ಷೇತ್ರಕ್ಕೆ ದರ್ಶನ್ ಧ್ರುವನಾರಾಯಣ ಅಭ್ಯರ್ಥಿ ಎಂದು ಮೊದಲ ಪಟ್ಟಿಯಲ್ಲಿಯೇ ಘೋಷಣೆ ಮಾಡಿತ್ತು. ತಂದೆಯ ಸಾವಿನ ದುಖಃದ ನಡುವೆಯೇ ಅವರು ಪ್ರಚಾರದಲ್ಲಿ ತೊಡಗಿದ್ದರು. ಶುಕ್ರವಾರ ತಾಯಿಯನ್ನು ಕಳೆದುಕೊಂಡು ಅವರು ಮತ್ತಷ್ಟು ಕುಗ್ಗಿ ಹೋಗಿದ್ದಾರೆ.
ತಂದೆ-ತಾಯಿಯನ್ನು ಕಳೆದುಕೊಂಡು ದುಖಃದಲ್ಲಿರುವ ದರ್ಶನ್ ಧ್ರುವನಾರಾಯಣಗೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲ ನೀಡಲು ಜೆಡಿಎಸ್ ಪಕ್ಷ ಮುಂದಾಗಿದೆ. ಮೈಸೂರು ಭಾಗದ ಜೆಡಿಎಸ್‌ನ ಪ್ರಭಾವಿ ನಾಯಕರು ಈ ಕುರಿತು ಸುಳಿವು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆ ಈ ಕುರಿತು ಮಾತುಕತೆ ನಡೆಸಿದ್ದು, ಅವರು ಸಹ ಒಪ್ಪಿಗೆ ನೀಡಿದ್ದಾರೆ. ದರ್ಶನ್ ಧ್ರುವನಾರಾಯಣ ಎದುರು ಅಭ್ಯರ್ಥಿ ಹಾಕದೇ ಅವರನ್ನು ಬೆಂಬಲಿಸಲಾಗುತ್ತದೆ ಎಂಬ ಸುದ್ದಿ ಇದೆ. ಈ ಕುರಿತು ಅಧಿಕೃತ ಘೋಷಣೆಯಾಗಬೇಕಿದೆ.

ಶಾಸಕರ ಹೇಳಿಕೆ; ಶುಕ್ರವಾರ ದರ್ಶನ್ ಧ್ರುವನಾರಾಯಣ ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮಾಧ್ಯಮಗಳ ಜೊತೆ ಮಾತನಾಡಿದರು. "ಆರ್. ಧ್ರುವನಾರಾಯಣ ಮಕ್ಕಳು ಅನಾಥರಾಗಿದ್ದಾರೆ. ಅವರ ಇಬ್ಬರು ಮಕ್ಕಳು ಲವ-ಕುಶ ರೀತಿ ಕಾಣುತ್ತಿದ್ದಾರೆ. ತಂದೆ ಕಳೆದುಕೊಂಡ ನೋವು ಇರುವಾಗಲೇ ತಾಯಿಯನ್ನೂ ಸಹ ಕಳೆದುಕೊಂಡಿದ್ದಾರೆ. ಇಂತಹ ದುಖಃದಲ್ಲಿರುವವರ ಎದುರು ಸ್ಪರ್ಧಿಸಲು ನಮಗೆ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಸ್ಪರ್ಧೆ ಮಾಡಬೇಕಾ?, ಬೇಡವಾ? ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ" ಎಂದರು.
ಕೆ. ಆರ್. ನಗರ ಶಾಸಕ ಸಾ. ರಾ. ಮಹೇಶ್ ಸಹ ಈ ಕುರಿತು ಮಾತನಾಡಿದ್ದು, "ಆರ್. ಧ್ರುವನಾರಾಯಣ ಅಗಲಿಕೆ ಹಿನ್ನೆಲೆ ದರ್ಶನ್‌ಗೆ ಬೆಂಬಲ ಕೊಡಲು ನಿರ್ಧಾರ ಮಾಡಲಾಗಿದೆ. ಕಳೆದ ವಾರ ಈ ಕುರಿತು ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಮೈಸೂರು ಭಾಗದ ಶಾಸಕರ ಜೊತೆ ಮಾತುಕತೆ ನಡೆಸಿದ್ದರು. ಈಗ ತಾಯಿಯನ್ನೂ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಖಂಡಿತವಾಗಿ ದರ್ಶನ್‌ಗೆ ಬೆಂಬಲ ನೀಡುತ್ತಾರೆ" ಎಂದುದ ಹೇಳಿದರು.
ಕ್ಷೇತ್ರದ ಕುರಿತು; ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರದಲ್ಲಿ ಇದುವರೆಗೂ ಉಪ ಚುನಾವಣೆ ಸೇರಿ 15ಕ್ಕೂ ಹೆಚ್ಚು ಚುನಾವಣೆ ನಡೆದಿದ್ದು, 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮೂರು ಬಾರಿ ಜೆಡಿಎಸ್ ಮತ್ತು ಎರಡು ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ ಒಂದು ಬಾರಿ ಜಯಗಳಿಸಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಹರ್ಷವರ್ಧನ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈಗಾಗಲೇ ಮಂಡ್ಯದ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡಿದೆ. ಇದೇ ಮಾದರಿಯಲ್ಲಿ ನಂಜನಗೂಡಿನಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಈ ಕುರಿತು ಪಕ್ಷ ಅಧಿಕೃತವಾಗಿ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.












Click it and Unblock the Notifications