ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ; ಮೈಸೂರಿನಲ್ಲಿ ಎಚ್‌ಡಿಕೆ ವಿಶ್ವಾಸ
ಮೈಸೂರು, ಅಕ್ಟೋಬರ್, 20: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರುವಾರ (ಅಕ್ಟೋಬರ್ 20) ರಂದು ಕುಟುಂಬ ಸಮೇತ ಮೈಸೂರಿಗೆ ಆಗಮಿಸಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ನಂತರ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಸಂಭವನೀಯ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರ ಜೊತೆ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಾಯಿ ಚಾಮುಂಡೇಶ್ವರಿಯನ್ನು ಬೇಡಿಕೊಂಡಿದ್ದೇನೆ. ಹಾಗೂ ತಾಯಿ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತವಾಗಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಸ್ವಾವಲಂಬಿ ಯೋಜನೆ, ಪ್ರತಿಯೊಬ್ಬರಿಗೂ ಸೂರು, ನೀರಾವರಿ ಕಾರ್ಯಕ್ರಮದ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಇದನ್ನೆಲ್ಲಾ ಅನುಷ್ಠಾನಕ್ಕೆ ತರಲು ಎಲ್ಲಾ ಸವಾಲನ್ನು ಸ್ವೀಕರಿಸಿದ್ದೇನೆ. ಹಾಗೆಯೇ ಈ ಮೂಲಕ ಜನಸಾಮಾನ್ಯರಿಗೆ ಉತ್ತಮ ಬದುಕು ಕಟ್ಟಿಕೊಡುತ್ತೇನೆ. ಇದಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುವಂತೆ ಕೋರಿದ್ದೇನೆ. ಒಂದು ವೇಳೆ ಈ ಯೋಜನೆಗಳು ಅನುಷ್ಠಾನ ಮಾಡದಿದ್ದರೆ ಪಕ್ಷವನ್ನು ವಿಸರ್ಜಜಿಸುವುದಾಗಿ ಮಾಡುವುದುದಾಗಿ ಹೇಳಿದರು.

ನುಡಿದಂತೆ ನಡೆದುಕೊಂಡಿದ್ದೆ
ಕಳೆದ ಬಾರಿ ನಾನು ಸಿಎಂ ಆಗಿದ್ದಾಗ ಕ್ಲಿಯರ್ ಮೆಜಾರಿಟಿ ಬರದಿದ್ದರೂ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದುಕೊಂಡಿದ್ದೆ. ಸಂಪೂರ್ಣ ಒಂದು ಸರ್ಕಾರ ಹೇಗೆ ನಡೆಸಬಹುದು ಅಂತಾ ಬೇರೆಯವರಿಗೂ ತೋರಿಸುವ ಮೂಲಕ ಸವಾಲು ಸ್ವೀಕರಿಸಿದ್ದೇನೆ. ಹೊಂದಾಣಿಕೆ ಅಥವಾ ಮೈತ್ರಿ ಸರ್ಕಾರ ಮಾಡಿದರೆ ಜನಪರ ಯೋಜನೆ ಅನುಷ್ಠಾನ ಮಾಡಲು ಆಗಲ್ಲ. ಆ ಕಾರಣ ಪಕ್ಷ ವಿಸರ್ಜನೆ ಬಗ್ಗೆ ಹೇಳಿದೆ ಎಂದರು. ಜನಪರ ಯೋಜನೆಯನ್ನು ಚಾಚೂ ತಪ್ಪದೆ ಜಾರಿಗೊಳಿಸಲು 123 ಸೀಟ್ ಪಡೆಯುವುದು ನನ್ನ ಗುರಿ ಆಗಿದೆ. ಜೆಡಿಎಸ್ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪಂಚರತ್ನ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತಿದ್ದು, ಎಲ್ಲರಿಂದ ಮಾಹಿತಿ ಪಡೆಯಲು ಸಿದ್ದವಾಗಿದ್ದೇನೆ. ನಮ್ಮ ಪಕ್ಷದವರೆ ಅಲ್ಲ, ಎಲ್ಲಾ ಪಕ್ಷದವರಲ್ಲಿ ಮೈತ್ರಿ ಸರ್ಕಾರ ಬರುತ್ತದೆ ಎಂಬ ನಿಲುವಿದೆ. ಆದರೆ ಜೆಡಿಎಸ್ ಪೂರ್ಣ ಪ್ರಮಾಣದ ಸರ್ಕಾರ ರಚಿಸಲಿದೆ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿಯವರಿಂದ ಕೆಸರೆರಚಾಟ
ಕಾಂಗ್ರೆಸ್ ಮತ್ತು ಬಿಜೆಪಿಯವರು ಕೆಸರೆರಚಾಟದಲ್ಲಿ ತೊಡಗಿದ್ದು, ಆದರೆ ಜೆಡಿಎಸ್ ಬಗ್ಗೆ ಎರಡು ಪಕ್ಷದವರು ಚಕಾರ ಎತ್ತುತ್ತಿಲ್ಲ. ಏಕೆಂದರೆ ಮುಂದೆ ಮೈತ್ರಿ ಸರ್ಕಾರದ ಅನಿವಾರ್ಯ ಪರಿಸ್ಥಿತಿ ಬಂದರೆ ಅನುಕೂಲ ಆಗುತ್ತದೆ ಎಂದು ಜೆಡಿಎಸ್ ಬಗ್ಗೆ ಯಾರೂ ಟೀಕೆ ಮಾಡುತ್ತಿಲ್ಲ. ಇನ್ನು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕನ್ನಡಿಗರಾದ ನಮಗೆ ಸಂತೋಷದ ಸಂಗತಿ, ಅಸೂಹೆ ಪಡಬಾರದು ಎಂದರು. ಆದರೆ ಈ ಮೂಲಕ ಮತ್ತೊಂದು ಪವರ್ ಸೆಂಟರ್ ಆಗುತ್ತದೆ. ಈಗ ಖರ್ಗೆ ಅವರಿಗೆ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಬಿಟ್ಟು ಅವರನ್ನು ಹೇಗೆ ನಡೆಸಿಕೊಳ್ಳುತ್ತದೆಯೋ ಅನ್ನುವ ಕುತೂಹಲ ಇದೆ. ಹಾಗೆಯೇ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಶಾಸಕರ 126 ಸೀಟ್ ಗೆಲ್ಲಿಸುವ ಮೂಲಕ ಜೆಡಿಎಸ್ ಸರ್ಕಾರ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಆದರೆ 126ರಲ್ಲಿ ನಿಖಿಲ್ ಕೂಡ ಇರಬಹುದು ಎಂದರು.












Click it and Unblock the Notifications