ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..
ಮೈಸೂರು, ಅಕ್ಟೋಬರ್. 11: ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ವಿಶ್ವ ವಿಖ್ಯಾತ ದಸರಾ ಸಂಭ್ರಮ ಗರಿಗೆದರಿದರಿದ್ದು, ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಗೆ ಸಚಿವೆ ಜಯಮಾಲ ಚಾಲನೆ ನೀಡಿದರು.
ಅರಮನೆ ಆವರಣದಲ್ಲಿ ನಡೆಯುತ್ತಿರುವ ಎರಡನೇ ದಿನದ ದಸರಾ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಸ್ಪರ್ಧೆಗೆ ಸುಮಾರು 80 ಮಂದಿಯ ಹೆಸರು ನೋಂದಣಿಯಾಗಿದ್ದು, ಜಿಲ್ಲೆಯ ವಿವಿಧ ಭಾಗಗಳ ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಜಯಮಾಲ, ರಂಗೋಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಬಹುದೊಡ್ಡ ಕಲೆ. ರಂಗೋಲಿ ಮಧ್ಯದಲ್ಲಿ ದೇವರು ಬಂದು ಕೂರುತ್ತಾರೆ ಎಂಬ ನಂಬಿಕೆ ಇದೆ. ರಂಗೋಲಿಗೆ ಕೆಟ್ಟ ಶಕ್ತಿಗಳನ್ನು ದೂರ ಮಾಡುವ ಶಕ್ತಿ ಇದೆ. ಆದ್ದರಿಂದ ಮನೆ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಈ ಬಾರಿ ದಸರಾದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿರುವುದು ಖುಷಿ ನೀಡಿದೆ. ನಾನು ಕೂಡ ಮನೆಯಲ್ಲಿ ರಥಸಪ್ತಮಿ, ದೀಪಾವಳಿ ಸಂದರ್ಭದಲ್ಲಿ ರಂಗೋಲಿ ಬಿಡಿಸುತ್ತೇನೆ ಎಂದು ಸಂತೋಷ ವ್ಯಕ್ತಪಡಿಸಿದರು.
ದಸರಾ ಪ್ರಯುಕ್ತ 'ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ನಗರದ ಪುರಭವನದ ಬಳಿ ಬೆಳಗ್ಗೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು.

ಪಾರಂಪರಿಕ ಉಡುಗೆಯಾದ ರೇಷ್ಮೆ ಪಂಚೆ, ಶರ್ಟ್ ಹಾಗೂ ಶಲ್ಯ ಧರಿಸಿ ಬಂದ ಸಚಿವರು ಎಲ್ಲರ ಗಮನ ಸೆಳೆದರು. ಬಾಲಕರಿಂದ ವೃದ್ಧರವರೆಗೂ ಪಾರಂಪರಿಕ ಉಡುಗೆ ತೊಟ್ಟು ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡರು .
ಮೈಸೂರು ಪೇಟಾ , ಸಿಲ್ಕ್ ಪಂಚೆ , ಸಿಲ್ಕ್ ಸೀರೆ ತೊಟ್ಟು ನಾಗರಿಕರು ಮಿಂಚಿದರು. ಮೈಸೂರಿನ ಪುರಭವನದಿಂದ ಪ್ರಾರಂಭವಾದ ನಡಿಗೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಅಲ್ಲದೆ ಪಾರಂಪರಿಕ ಕಟ್ಟಡಗಳ ಸುತ್ತಲೂ ಸಂಚಾರ ಆರಂಭಿಸಿ ಪ್ರವಾಸಿಗರಿಗೆ ಮೈಸೂರಿನ ಪರಂಪರೆಯ ಬಗ್ಗೆ ಮಾಹಿತಿ ನೀಡಿದರು.












Click it and Unblock the Notifications