ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆ ಮೇಲೆ ಐಟಿ ದಾಳಿ: ಗಿಡದಲ್ಲಿ ನೇತು ಹಾಕಿದ್ದ ಕೋಟಿ ಹಣ ವಶ
ಮೈಸೂರು, ಮೇ 03: ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಪಿಸುತ್ತಿರುವ ಹೊತ್ತಿನಲ್ಲೇ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಗೆ ಆದಾಯ ತೆರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸಹೋದರನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ದಾಳಿ ನಡೆಸಿ, ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ನೇತು ಹಾಕಿದ್ದ ಒಂದು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಐಟಿ ದಾಳಿಗೆ ಒಳಗಾಗಿರುವ ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಸಹೋದರ ಎಂದು ತಿಳಿದು ಬಂದಿದೆ.
ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಫೈಟ್
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಹೈವೋಲ್ಟೇಜ್ ಕ್ಷೇತ್ರವಾಗಿದೆ. ಬಿಜೆಪಿ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನಡುವೆ ಜಟಾಪಟಿಯಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಈ ಬಾರಿ ಹೊಸ ಮುಖ ಅಶೋಕ್ ಕುಮಾರ್ ರೈಗೆ ಟಿಕೆಟ್ ನೀಡಿದೆ. ಮೂಲತಃ ಬಿಜೆಪಿಯವರೇ ಆದ ಅಶೋಕ್ ಕುಮಾರ್ ರೈ ಕ್ಷೇತ್ರದಲ್ಲಿ ಸಮಾಜ ಸೇವೆಯಿಂದಲೇ ಹೆಸರುಗಳಿಸಿದ್ದಾರೆ. ಅಶೋಕ್ ರೈ ಈವರೆಗೆ ಸುಮಾರು 22 ಸಾವಿರ ಜನರಿಗೆ ನೆರವಾಗಿದ್ದಾರೆ. ಹೀಗಾಗಿ ಅವರೆಲ್ಲರ ಮತ ಅಶೋಕ್ ಕುಮಾರ್ ಅವರ ಮತ ಬ್ಯಾಂಕ್‌ನಲ್ಲಿದ್ದು, ಕಾಂಗ್ರೆಸ್ ಕ್ಷೇತ್ರದಲ್ಲಿ ಸುಲಭ ಜಯಗಳಿಸುವ ವಿಶ್ವಾಸದಲ್ಲಿ ಇದ್ದಾರೆ.
ಸಿಹಿ ತಿಂಡಿ ಮಾರಾಟ ಮಳಿಗೆಯ ಮೇಲೆ ಐಟಿ ದಾಳಿ
ಇನ್ನು ಮೈಸೂರಿನ ಸಿಹಿ ತಿಂಡಿ ಮಾರಾಟ ಮಳಿಗೆಯ ಮೇಲೆ ಕೂಡ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನಿಲ್ ಎನ್ನುವವರ ಮಾಲೀಕತ್ವದಲ್ಲಿರುವ ಮೈಸೂರಿನ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಬಾಂಬೆ ಟಿಫಾನಿಸ್ ಅನೆಕ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೈಸೂರಿನ ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್‌ಟಿಒ ಕಚೇರಿ ಬಳಿ ಇರುವ ಅನಿಲ್ ನಿವಾಸಗಳ ಮೇಲೂ ಏಕಕಾಲದಲ್ಲಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ದೇವರಾಜ ಅರಸು ರಸ್ತೆ, ಸಿದ್ದಾರ್ಥನಗರ, ಜೆ.ಪಿ ನಗರದಲ್ಲಿರುವ ಬಾಂಬೆ ಟಿಫಾನಿಸ್ ಅನೆಕ್ಸ್ ಶಾಖೆಗಳು ಹಾಗೂ ತಯಾರಿಕಾ ಘಟಕಗಳಲ್ಲೂ ತೀವ್ರ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications