ರೋಹಿಣಿ ಸಿಂಧೂರಿ ಒಬ್ಬರೇ ಪ್ರಾಮಾಣಿಕರಾ? ಗೌಡರಿಗೆ ಸಿದ್ದು ತಿರುಗೇಟು
ಮೈಸೂರು, ಜನವರಿ 23 : ಆಡಳಿತಾತ್ಮಕ ದೃಷ್ಟಿಯಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡುವುದು ಸರಕಾರದ ಅಧಿಕಾರ. ಅಷ್ಟಕ್ಕೂ ರೋಹಿಣಿ ಸಿಂಧೂರಿ ಒಬ್ಬರೇ ಪ್ರಾಮಾಣಿಕರಾಗಿ ಕಂಡರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಮಂಗಳವಾರ ಇಲ್ಲಿ ಪ್ರಶ್ನಿಸಿದ್ದಾರೆ.
ಕಲೆಕ್ಷನ್ ಗೆ ಅವಕಾಶ ಮಾಡಿಕೊಡದಿದ್ದಕ್ಕೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದ ಎಚ್.ಡಿ ದೇವೇಗೌಡರ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ತಮ್ಮ ಸಂಪುಟ ಸಹೋದ್ಯೋಗಿ ಎ.ಮಂಜು ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಬಂದಿತ್ತು. ನಾನಾ ಪಕ್ಷದವರು ವರ್ಗಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ರಾಜ್ಯ ಪ್ರವಾಸದಲ್ಲಿ ಯಾವ ಸಮಸ್ಯೆಗಳು ಕಂಡಿಲ್ಲ. ಬಜೆಟ್ ಮಂಡನೆ ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಸಂವಿಧಾನದಲ್ಲಿ ಈ ರೀತಿ ಎಲ್ಲಾದರೂ ಹೇಳಿದ್ದಾರಾ? ಸಂವಿಧಾನವನ್ನು ಓದಿಕೊಳ್ಳಬೇಕಲ್ಲವೇ? ಯಡಿಯೂರಪ್ಪ ಅವರಿಗೆ ಯಾವ ಸಂವಿಧಾನದಲ್ಲಿ ಹೇಳಿದೆಯಂತೆ ಎಂದು ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸಿದರಲ್ಲವಾ?
ಜಗದೀಶ ಶೆಟ್ಟರ್ ಕೂಡ ಚುನಾವಣೆ ವರ್ಷದಲ್ಲಿ ಬಜೆಟ್ ಮಂಡಿಸಿದ್ದರಲ್ಲಾ, ಅದಕ್ಕೇನೂ ಹೇಳ್ತೀರಿ? ಜಗದೀಶ್ ಶೆಟ್ಟರ್ ಭ್ರಷ್ಟ, ಬಿಜೆಪಿ ನಾಶ ಮಾಡುವುದು ನನ್ನ ಉದ್ದೇಶ ಅಂದಿದ್ದರು ಯಡಿಯೂರಪ್ಪ. ಬಿಜೆಪಿಯವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ, ಬಿಜೆಪಿ ಈಗಾಗಲೇ ಸೋತು ಆಗಿದೆ ಎಂದು ವ್ಯಂಗ್ಯವಾಡಿದರು.

ಎಸಿಬಿ ಮೂಲಕ ಹಗರಣ ಮುಚ್ಚಿ ಹಾಕಲು ಸಾಧ್ಯವಾ?
ನನ್ನ ಮೇಲೆ ಕೇಸ್ ಇದ್ದರೆ ಕೋರ್ಟ್ ಗೆ ಹೋಗಲಿ. ಸುಮ್ಮನೆ ಪುಂಗಿ ಊದುತ್ತಾರೆ. ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಒಂದೇ ಒಂದು ಸತ್ಯ ಹೇಳಿಲ್ಲ. ಹಗರಣವನ್ನು ಎಸಿಬಿ ಮೂಲಕ ಮುಚ್ಚಿ ಹಾಕಲು ಸಾಧ್ಯವಾ ಎಂದು ಪ್ರಶ್ನಿಸಿದ ಅವರು, ನಾನು ವಕೀಲ ಆಗಿದ್ದವನು. ಕಾನೂನು ಓದದೆ ಇರುವವರೆಲ್ಲ ಆ ಬಗ್ಗೆ ತಿಳಿದುಕೊಳ್ಳಬಾರದು ಎಂದಿಲ್ಲ ಎಂದು ಹೇಳಿದರು.

ಅಮಿತ್ ಶಾಗೂ ಒಳ್ಳೆ ಚಾರಿತ್ರ್ಯವಿಲ್ಲ
ಮರ್ಡರ್ ಕೇಸ್ ಗೆ ಜೀವಾವಧಿ ಶಿಕ್ಷೆ ಇದೆ. ಅದು ನನಗೆ ಗೊತ್ತಿರಲಿಲ್ಲ ಅಂತ ಹೇಳಿದ್ರೆ ಶಿಕ್ಷೆಯಿಂದ ವಿಮುಖ ಮಾಡ್ತಾರಾ? ಅಮಿತ್ ಶಾ ಕೂಡ ಸುಳ್ಳು ಹೇಳ್ತಾರೆ. ಅವರಿಗೂ ಒಳ್ಳೆ ಚಾರಿತ್ರ್ಯವಿಲ್ಲ ಎಂದು ಕಿಡಿ ಕಾರಿದರು.

ಕನ್ನಡ ಚಳವಳಿ ಹೋರಾಟಗಾರರು ಪಕ್ಷದವರ ಮಾತು ಕೇಳ್ತಾರಾ?
ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರಿಗಿರುವ ಅಜ್ಞಾನಕ್ಕೆ ನಗಬೇಕೋ, ಅಳಬೇಕೋ? ಕನ್ನಡ ಚಳವಳಿ ಹೋರಾಟಗಾರರು ಪಕ್ಷಗಳನ್ನು ಕೇಳಿ ಪ್ರತಿಭಟನೆ ಮಾಡ್ತಾರಾ? ಪ್ರತಿಭಟನೆಯಿಂದ ರಾಜ್ಯ ಸರಕಾರಕ್ಕೆ ಅಲ್ಲವೇ ತೊಂದರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಲೇವಡಿ ಮಾಡಿದರು.












Click it and Unblock the Notifications