ಮೈಸೂರು : ದಸರಾ ಆನೆಗಳಿಗೆ ವಿಮೆ ಸುರಕ್ಷೆ
ಮೈಸೂರು, ಅ.1 : ಐತಿಹಾಸಿಕ ದಸರಾ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ದಸರಾದಲ್ಲಿ ಭಾಗವಹಿಸುವ ಆನೆಗಳ ಸುರಕ್ಷತೆಗಾಗಿ ಅವುಗಳಿಗೆ ವಿಮೆ ಮಾಡಿಸಲಾಗಿದೆ. ಮಾವುತರು ಮತ್ತು ಕಾವಾಡಿಗಳು ಈ ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ.
ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ನಾಗರಾಜ್ ಈ ಕುರಿತು ಹೇಳಿಕೆ ನೀಡಿದ್ದು, 2004ರಿಂದ ಪ್ರತಿ ವರ್ಷ ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೂ ವಿಮೆ ಮಾಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೆ ಮೂರು ಲಕ್ಷ ರೂ.ಗಳ ವಿಮೆ ಮಾಡಿಸಲಾಗಿದೆ ಎಂದು ನಾಗರಾಜ್ ಹೇಳಿದರು. 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಸರಳಾ ಮತ್ತು ವರಲಕ್ಷ್ಮೀ ಆನೆಗಳಿಗೆ 2 ಲಕ್ಷ ರೂ. ವಿಮೆ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನ್ಯೂ ಇಂಡಿಯಾ ಆಶ್ಯೂರೆನ್ಸ್ ಕಂಪನಿ ಮೂಲಕ ಎಲ್ಲಾ ಆನೆಗಳಿಗೆ ವಿಮೆ ಮಾಡಿಸಲಾಗಿದೆ. ಮೊದಲು ಆನೆಗಳ ವಿಮಾ ಸೌಲಭ್ಯ ಕಡಿಮೆ ಇತ್ತು. ದಸರಾ ಉತ್ಸವದಲ್ಲಿ ಅಪಘಾತ ಸಂಭವಿಸಿದರೆ, ಅನುಕೂಲವಾಗುತ್ತದೆ ಎಂದು ವಿಮಾ ಮೊತ್ತವನ್ನು ಈ ಬಾರಿ ಹೆಚ್ಚಿಸಲಾಗಿದೆ ಎಂದರು.
ಆನೆಗಳ ಜೊತೆಗೆ ಕಾವಾಡಿಗಳು ಮತ್ತು ಮಾವುತರು ಸಹ ಒಂದು ಲಕ್ಷ ರೂ.ಗಳ ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ. ದಸರಾ ಉತ್ಸವ ನಡೆಯುವಾಗ ಆನೆಗಳಿಗೆ, ಮಾವುತರಿಗೆ ಯಾವುದೇ ಅಪಘಾತ ಸಂಭವಿಸಿದರೂ ವಿಮಾ ಹಣ ದೊರೆಯಲಿದೆ ಎಂದು ಹೇಳಿದರು.
ಜಂಬೂ ಸವಾರಿ ನಡೆಯುವ ಸ್ಥಳದಲ್ಲಿರುವ ವಿದ್ಯುತ್ ತಂತಿಗಳಿಂದ ಆನೆಗಳಿಗೆ ಅಪಾಯ ಉಂಟಾದರೆ, ಈ ವಿಮೆ ಹಣ ಉಪಯೋಗಕ್ಕೆ ಬರಲಿದೆ. ಜಂಬೂ ಸವಾರಿ ನಡೆಯುವ ರಸ್ತೆಯಲ್ಲಿನ ಆಸ್ತಿಗಳಿಗೆ ಹಾನಿಯಾಗದಂತೆ ಜಿಲ್ಲಾಡಳಿತ ಸಹ ವಿಮೆ ಮಾಡಿಸುತ್ತದೆ.












Click it and Unblock the Notifications