ಮೈಸೂರು ದಸರಾ ಉದ್ಘಾಟನೆಗೆ ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್
ಸಂಭ್ರಮದ ದಸರಾ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷ ಕೂಡ ದಸರಾ ಕ್ರೀಡಾಕೂಟ ನಡೆಯಲಿದ್ದು, ಕ್ರೀಡಾಕೂಟ ಉದ್ಘಾಟಿಸಲು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಟ್ಟ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಆಗಮಿಸುತ್ತಿದ್ದಾರೆ. ಭಾರತಕ್ಕೆ ಪದಕ ಗೆದ್ದುಕೊಟ್ಟ ಹಾಕಿ ತಂಡದ ನಾಯಕ ಮೈಸೂರಿಗೆ ಆಗಮಿಸುತ್ತಿದ್ದು, ಉದ್ಘಾಟನೆ ದಿನ ಅಪಾರ ಕ್ರೀಡಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮದ ಮಾಹಿತಿ ನೀಡಲು ದಸರಾ ಕ್ರೀಡಾಕೂಟ ಉಪಸಮಿತಿ ಕಾರ್ಯಾಧ್ಯಕ್ಷ ಡಾ. ಜಿತೇಂದ್ರ ಶೆಟ್ಟಿ ಮಾಧ್ಯಮಗೋಷ್ಠಿ ಕರೆದಿದ್ದರು. ದಸರಾ ಸಿಎಂ ಕಪ್ ಕ್ರೀಡಾಕೂಟ ಉದ್ಘಾಟನೆಗೆ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕಲಬುರ್ಗಿ ಮತ್ತು ಮೈಸೂರು ವಿಭಾಗಗಳಿಂದ ಸುಮಾರು 3000 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಹಾಗೂ 800 ತಾಂತ್ರಿಕ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಏನೆಲ್ಲಾ ಕ್ರೀಡೆಗಳು ನಡೆಯಲಿದೆ?
ರಾಜ್ಯದ ವಿವಿಧ 7 ಅಥವಾ 8 ಜಿಲ್ಲೆಗಳನ್ನು ಒಂದುಗೂಡಿಸಿ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಂಗಳೂರು, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳು ಸೇರಿವೆ. ಬೆಂಗಳೂರು ನಗರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯನ್ನು ಮಾತ್ರ ಸೇರಿಸಲಾಗಿದೆ.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿವಿ ಕ್ಯಾಂಪಸ್, ಡಿ. ದೇವರಾಜ ಅರಸು ಕುಸ್ತಿ ಅಖಾಡ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಭಾರ ಎತ್ತುವುದು, ಚೆಸ್, ದೇಹದಾರ್ಢ್ಯ, ಬಾಕ್ಸಿಂಗ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಮೂರು ಹಂತಗಳಲ್ಲಿ ದಸರಾ ಕ್ರೀಡಾಕೂಟ ನಡೆಯಲಿದೆ. ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ದಸರಾ ಸಿ.ಎಂ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಸಮವಸ್ತ್ರ ಮತ್ತು ಕ್ರೀಡಾಕೂಟ ಮುಕ್ತಾಯವಾಗುವವರೆಗೂ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.












Click it and Unblock the Notifications