ಸುಶಿಕ್ಷಿತರ ಸಂಖ್ಯೆ ಅಧಿಕ: ಮೈಸೂರಿನಲ್ಲಿ ಅಂತರ್ಜಾತಿ ವಿವಾಹ ಹೆಚ್ಚಳ
ಮೈಸೂರು, ನವೆಂಬರ್ 22: ಜಿಲ್ಲೆಯಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತರ್ಜಾತಿ ವಿವಾಹವೂ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ.
ಕಳೆದ ಮೂರು ವರ್ಷದಲ್ಲಿ ಮೈಸೂರಿನಲ್ಲಿ 900ಕ್ಕೂ ಹೆಚ್ಷು ದಂಪತಿಗಳು ವಿವಿಧ ವಿವಾಹಗಳ ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವಿವಿಧ ವಿವಾಹ ಯೋಜನೆಯಡಿ ನಾನಾ ಸೌಲಭ್ಯಗಳನ್ನು ನೀಡುತ್ತಿದೆ. ಪರಿಣಾಮ ಹೆಚ್ಚು ಹೆಚ್ಚು ಮಂದಿ ಸರಕಾರ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.

ಕಳೆದ ಮೂರು ವರ್ಷದ ಅಂಕಿ ಅಂಶ ಗಮನಿಸಿದರೆ ಒಟ್ಟು 1089 ಮಂದಿ ವಿವಿಧ ವಿವಾಹಗಳ ಯೋಜನೆ ಅಡಿ ಅರ್ಜಿ ಹಾಕಿದ್ದು, ಅದರಲ್ಲಿ 906 ದಂಪತಿಗೆ ಪ್ರೋತ್ಸಾಹಧನ ದೊರೆತಿದೆ. ಸರಕಾರದಿಂದ 20 ಕೋಟಿ ರೂ.ಬಿಡುಗಡೆಯಾಗಿದ್ದು, ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಲಾಖೆಯು ತನ್ನದೆ ಕೊಡುಗೆಯನ್ನು ನೀಡುತ್ತಿದೆ.
ಮೈಸೂರಿಗೆ ಮೂರನೇ ಸ್ಥಾನ: ಅಂತರ್ಜಾತಿ ವಿವಾಹ ಆಗುವವರಲ್ಲಿ ಹಾಗೂ ಪ್ರೋತ್ಸಾಹಧನ ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯದಲ್ಲೇ ಬೆಂಗಳೂರು ನಗರಕ್ಕೆ (4581 ಅರ್ಜಿ) ಮೊದಲ ಸ್ಥಾನ ಸಿಕ್ಕಿದೆ. ಶಿವಮೊಗ್ಗಕ್ಕೆ (1603) ಎರಡನೇ ಸ್ಥಾನ. ಮೈಸೂರಿಗೆ ಮೂರನೇ ಸ್ಥಾನ ದೊರೆತಿದೆ. ತುಮಕೂರು, ಹಾಸನ ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನ ಪಡೆದುಕೊಂಡಿವೆ.
ಯುವತಿಯರೇ ಮುಂದು: ಸರಕಾರದಿಂದ ಪ್ರೋತ್ಸಾಹಧನ ಪಡೆಯುವವರಲ್ಲಿ ಪರಿಶಿಷ್ಟ ಜಾತಿ ಯುವತಿಯರೇ ಹೆಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿ ಯುವತಿಯರು ಹೆಚ್ಚು ವಿದ್ಯಾವಂತರಾಗುತ್ತಿದ್ದುಘಿ, ಅಸ್ಪೃಶ್ಯತೆ, ಜಾತೀಯತೆಯಿಂದ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಷ್ಟೋ ಮಂದಿ ಅಂತರ್ಜಾತಿ ವಿವಾಹವಾಗಿ ಸರಕಾರದ ಪ್ರೋತ್ಸಾಹಧನದಿಂದ ಹೊಸ ಉದ್ಯಮ, ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸರಕಾರದಿಂದ ಸಿಗುತ್ತಿರುವ ಪ್ರೋತ್ಸಾಹಧನವೂ ಅವರನ್ನು ಗಟ್ಟಿಗೊಳಿಸುತ್ತಿದೆ ಎಂದು
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ತಿಳಿಸಿದ್ದಾರೆ.
2022-23ನೇ ಸಾಲಿನ ವಿವಿಧ ವಿವಾಹ ಯೋಜನೆಗಳ ಪ್ರಗತಿ
| ಕ್ರಮ ಸಂಖ್ಯೆ | ಯೋಜನೆ ಹೆಸರು | ಸ್ವೀಕರಿಸಿದರು ಅರ್ಜಿ | ಮಂಜೂರಾದ ಅರ್ಜಿ | ಮಂಜೂರಾದ ಮೊತ್ತ |
| 1 | ಅಂತರ್ಜಾತಿ ವಿವಾಹಿತ | 320 | 200 | 5.4 ಕೋಟಿ |
| 2 | ದಂಪತಿಗೆ ಪ್ರೋತ್ಸಾಹಧನ ಒಳ ಸಮುದಾಯದೊಳಗೆ | 6 | 6 | 12 ಲಕ್ಷ |
| 3 | ಅಂತರ್ಜಾತಿ ವಿವಾಹಿತ ದಂಪತಿಗೆ ಪ್ರೋತ್ಸಾಹಧನ ವಿಧವಾ ಮರುವಿವಾಹಕ್ಕೆ ಪ್ರೋತ್ಸಾಹಧನ | 3 | 3 | 6 ಲಕ್ಷ |
| 4 | ಸಾಮೂಹಿಕ ಸರಳ ವಿವಾಹಿತ ದಂಪತಿಗೆ ಪ್ರೋತ್ಸಾಹಧನ | 16 | 16 | 8 ಲಕ್ಷ |
| 5 | ಮಾಜಿ ದೇವದಾಸಿಯರ ವಿವಾಹಿತ ಮಕ್ಕಳಿಗೆ ಪ್ರೋತ್ಸಾಹಧನ | 1 | 1 | 5 ಲಕ್ಷ |
| 6 | ಒಟ್ಟು | 346 | 226 | 5.71 ಕೋಟಿ |












Click it and Unblock the Notifications