ನಿಮಗೆ ಗೊತ್ತೇ? ಅರಮನೆಯಲ್ಲಿರುವ ಎಲ್ಲಾ ಕಾರುಗಳ ನಂಬರ್ 1953..!
ಮೈಸೂರು, ಅಕ್ಟೋಬರ್. 18: ಇಂದು ಗುರುವಾರ ಆಯುಧ ಪೂಜೆಯ ಹಿನ್ನೆಲೆಯಲ್ಲಿ ಎಲ್ಲರೂ ಬೆಳಗ್ಗೆಯೇ ಎದ್ದು ತಮ್ಮ ವಾಹನಗಳನ್ನು ಶುಭ್ರವಾಗಿ ಸ್ವಚ್ಛಗೊಳಿಸಿ, ಪೂಜಿಸಿ, ಸಿಂಗರಿಸಿ ಸಂತಸಪಡುತ್ತಾರೆ. ಮೈಸೂರಿನ ಅರಮನೆಯಲ್ಲಿಯೂ ಸಹ ರಾಜರು ಬಳಸಿದ ಶಸ್ತ್ರಾಸ್ತ್ರಗಳು, ಫಿರಂಗಿಗೆ ಹಾಗೂ ಪಟ್ಟದ ಪ್ರಾಣಿಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

ಅಂದಹಾಗೆ ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಖಾಸಗಿ ವಾಹನಗಳ ಪೂಜೆ ನಡೆಯುವುದು ವಾಡಿಕೆ . ಅವರ ಎಲ್ಲಾ ಕಾರುಗಳನ್ನು ಸಾಲಿಗೆ ನಿಲ್ಲಿಸಿ ಪೂಜೆ ಮಾಡಲಾಗುತ್ತದೆ. ವಿಶೇಷವೆಂದರೆ ಅವರ ಎಲ್ಲಾ ಕಾರುಗಳ ಸಂಖ್ಯೆಯೂ 1953 ಎಂಬ ನಂಬರ್ ನಲ್ಲಿದೆ.

ಹೌದು, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಕಾರುಗಳ ಬಗ್ಗೆ ಬಲು ವ್ಯಾಮೋಹ. ದುಬಾರಿ ಕಾರುಗಳನ್ನು ಖರೀದಿಸುವುದು ಅವರ ಹವ್ಯಾಸವಾಗಿತ್ತು. ಅವರ ಬಳಿ ಬಿಎಂಡಬ್ಲ್ಯೂ ಕಾರಿನ ಎಲ್ಲಾ ಮಾಡೆಲ್ ಗಳು ಹಾಗೂ ಮರ್ಸಿಡೆಸ್ ಬೆಂಝ್ ಕಾರು ಸೇರಿದಂತೆ ಇಂಡಿಯನ್ ಕಾರುಗಳು ಇದ್ದವು.

ಮತ್ತೊಂದು ಕುತೂಹಲದ ವಿಷಯ ಅಂದ್ರೆ ಈ ಎಲ್ಲಾ ಕಾರಿನ ಸಂಖ್ಯೆ 1953. 1953ರಲ್ಲಿ ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜನಿಸಿದ ವರ್ಷ. ಆದ್ದರಿಂದಲೇ ಅವರ ಕಾರಿನ ಸಂಖ್ಯೆಗಳು ಸಹ ಇದೇ ಆಗಿದೆ. ಜತೆಗೆ ಅವರು ಬಳಸುತ್ತಿದ್ದ ದೂರವಾಣಿಗಳು ಸಹ ಇದೇ ಸಂಖ್ಯೆಯನ್ನು ಒಳಗೊಂಡಿತ್ತು ಎಂಬುದು ಕೌತುಕ.












Click it and Unblock the Notifications