ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ; ಸಂಸದ
ಮೈಸೂರು, ಡಿಸೆಂಬರ್ 29; "ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ ಬರಲಿದೆ" ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ಕಾಯ್ದೆ ವಾಪಸ್ಸು ಪಡೆಯುವ ಕುರಿತು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
"ಕಾಂಗ್ರೆಸ್ ನಾಯಕರ ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಒಂದೊಮ್ಮೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ ಬರಲಿದ್ದು, ಇದು ಜನರಿಗೆ ಗೊತ್ತಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ" ಎಂದು ಭವಿಷ್ಯ ನುಡಿದರು.

"ಮತಾಂತರ ಕಾಯ್ದೆಯನ್ನು ಕಿತ್ತೊಗೆಯುವ ಅಥವಾ ಕಿತ್ತು ಹಾಕುವ ಅವಕಾಶವನ್ನು ಜನರು ನಿಮಗೆ ಕೊಡುವುದಿಲ್ಲ. ಈಗಾಗಲೇ ಅವರ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವು ಪರಿಸ್ಥಿತಿ ಬಂದಿದೆ' ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಟೀಕೆ ಮಾಡಿದರು.
"ಜನರನ್ನು ಮಂಗ್ಯಾ ಮಾಡಿ ಮತಾಂತರ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆಕೊಡಿಸಿ ರೋಗ ವಾಸಿ ಮಾಡಿಸುವ ಅವರು, ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣ ಆಯ್ತು ಅಂತಾ ಮೋಸದಿಂದ ಮತಾಂತರ ಮಾಡುತ್ತಾರೆ. ಹಾಗಿದ್ದರೆ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿ, ಬರೀ ಏಸುವಿನ ದೇವಾಲಯ ಕಟ್ಟಿಸಿ" ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.
"ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ಥ ಧರ್ಮ ನೆಲ ಕಚ್ಚುತ್ತಿದೆ. ಅಲ್ಲಿ ಚರ್ಚ್‌ಗಳಿಗೆ ಯಾರು ಹೋಗುತ್ತಿಲ್ಲ. ಅಲ್ಲಿನ ಚರ್ಚ್‌ಗಳು ಮಾರಾಟಕ್ಕಿವೆ. ಹೀಗಾಗಿ ಇಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರ" ಎಂದು ಸಂಸದರು ಹೇಳಿದರು.
ಸಿಎಂ ಬದಲಾವಣೆ; ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, "ವಿಧಾನ ಸಭೆಯ ಕಟ್ಟಡದಲ್ಲಿ ವಾಸ್ತು ದೋಷವಿದೆ. ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ಇದೇ ಕಾರಣಕ್ಕೆ ಆಗ್ಗಾಗ ಇಂತಹ ಮಾತುಗಳು ಕೇಳಿ ಬರುತ್ತವೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಂಡಿ ನೋವಿದೆ ಎಂಬ ಕಾರಣದಿಂದ ಸಿಎಂ ಬದಲಾಯಿಸಲು ಸಾಧ್ಯವಿಲ್ಲ" ಎಂದರು.
"ಮಂಡಿ ನೋವಿಗೆ ಅವರು ಚಿಕಿತ್ಸೆ ಪಡೆಯಲಿದ್ದಾರೆ ಹೊರತು, ಸಿಎಂ ಬದಲಾಯಿಸುವುದಿಲ್ಲ" ಎಂದರು. ಮಾಜಿ ಪ್ರಧಾನಿ ವಾಜಪೇಯಿ ಉದಾಹರಣೆ ನೀಡಿದ ಪ್ರತಾಪ್ ಸಿಂಹ, "ವಾಜಪೇಯಿ ಅವರಿಗೆ ಎರಡು ಮಂಡಿ ನೋವಿತ್ತು. ಅಂದು ಪ್ರಧಾನಿಯನ್ನೇ ಬದಲಾಯಿಸದ ನಾವು ಈಗ ಮುಖ್ಯಮಂತ್ರಿಯನ್ನು ಬದಲಾಯಿಸುತ್ತೇವಾ?" ಎಂದು ಪ್ರಶ್ನಿಸಿದರು.
"ಸಿದ್ದರಾಮಯ್ಯ ಬರೀ ಹಿಟ್ ಅಂಡ್ ರನ್ ಮಾಡಲಿದ್ದು, ಒಂದು ವಿಚಾರ ತೆಗೆದುಕೊಂಡು ಅದನ್ನು ಅರ್ಧಕ್ಕೆ ಬಿಡುತ್ತಾರೆ. ಮತ್ತೆ ಅಲ್ಲಿಂದ ಓಡಿ ಹೋಗುತ್ತಾರೆ. ಮತಾಂತರ ನಿಷೇಧ ಕಾಯ್ದೆಗೆ ಅವರೇ ಸಹಿ ಹಾಕಿದ್ದರು. ಈಗ ಇಲ್ಲ ಅಂತಾ ಹೇಳಿ ಅಲ್ಲೂ ಸಿಕ್ಕಿಕೊಂಡರು. ನಂತರ ಕಣ್ಣು ತಪ್ಪಿನಿಂದ ಅದು ಇದು ಅಂತಾ ಹೇಳಿದರು. ಸಿದ್ದರಾಮಯ್ಯ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಮಹಾರಾಷ್ಟ್ರಕ್ಕೆ ಹೆದರಿಕೊಳ್ಳುವ ಕಾಂಗ್ರೆಸ್‌ನಿಂದ ನಮಗೆ ಪಾಠ ಕಲಿಯುವ ಅವಶ್ಯಕತೆ ಇಲ್ಲ" ಎಂದು ತಿಳಿಸಿದರು.
ಮೈಸೂರಿನ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆ ಹಾಗೂ ಒತ್ತಾಯಗಳ ವಿಚಾರದ ಬಗ್ಗೆ ಮಾತನಾಡಿದ ಅವರು, "ರಂಗಾಯಣದಲ್ಲಿ ಬಹು ಕಾಲದಿಂದಲೂ ಎಡ-ಬಲ ಎಂಬ ಗೊಂದಲವಿದ್ದು, ಇದು ಎಡಪಂಥೀಯರ ಸ್ವತ್ತು ಅನ್ನುವ ರೀತಿಯಾಗಿತ್ತು. ಮಾರ್ಕ್ಸ್ ವಾದ, ಟೆರರಿಸ್ಟ್ ಮನಸ್ಥಿತಿಯನ್ನು ಬಿಡಿ. ಈ ರೀತಿಯ ಅಪಪ್ರಚಾರ ಮಾಡಬೇಡಿ. ನಿಮಗೆ ಅವಕಾಶ ಸಿಗುತ್ತಿಲ್ಲ ಅಂದರೆ ಅವಕಾಶ ಕೊಡಿಸುತ್ತೇವೆ. ರಂಗಾಯಣದಲ್ಲಿ ಎಡಪಂಥ ಬಲಫಂಥ, ಮಧ್ಯಪಂಥ ಎಲ್ಲದಕ್ಕೂ ಅವಕಾಶ ಸಿಗಬೇಕು" ಎಂದರು.
ರಂಗಾಯಣದ ನಿರ್ದೇಶಕರ ವಿರುದ್ದದ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರ ಬೆಂಬಲ ವಿಚಾರವಾಗಿಯೂ ಕಿಡಿಕಾರಿದ ಪ್ರತಾಪ್ ಸಿಂಹ, "ಈ ಹಿಂದೆ ಟೆರರಿಸ್ಟ್‌ಗಳಿಗೆ ಬೆಂಬಲ ಕೊಟ್ಟವರು ಇವರಿಗೆ ಕೊಡದೆ ಇರುತ್ತಾರಾ?. ಎಲ್ಲಾ ದೇಶ ವಿರೋಧಿ ಚಟುವಟಿಕೆ ಹಿಂದೆ ಕಾಂಗ್ರೆಸ್ ಇರುತ್ತದೆ" ಎಂದು ಟೀಕಿದರು.












Click it and Unblock the Notifications