ಲೋಕಸಭಾ ಚುನಾವಣೆ: ಊಹಾಪೋಹಗಳ ಬಗ್ಗೆ ಉತ್ತರ ನೀಡಿದ ಪ್ರತಾಪ್ ಸಿಂಹ
ಮೈಸೂರು, ಜನವರಿ 6: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಸಂಸದ ನಾನೇ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು ಮಾಧ್ಯಮಗಳಲ್ಲಿ ಇಲ್ಲದ ಊಹಾಪೋಹಗಳು ಸೃಷ್ಟಿಯಾಗುತ್ತಿವೆ. ಪ್ರಮೋದಾದೇವಿ ಒಡೆಯರ್ ಗೆ ಬಿಜೆಪಿ ಲೋಕಸಭಾ ಟಿಕೆಟ್ ಎಂದು ಹೇಳಲಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಮೈಸೂರಿಗೆ ಬಂದು ನನ್ನ ಕೆಲಸ ನೋಡಿ ಹೊಗಳಿದ್ದಾರೆ. ಕೆಲವರು ತಲೆಯಲ್ಲಿ ಕಸ ತುಂಬಿಕೊಂಡು ಅದನ್ನು ಪತ್ರಿಕೆಯಲ್ಲಿ ಬರೆದರೆ ಅದನ್ನೇ ದೃಶ್ಯ ಮಾಧ್ಯಮಗಳು ಸ್ಟೋರಿ ಮಾಡುತ್ತಿವೆ. ನನಗೆ ಕಲ್ಲು ಹೊಡೆದರೆ ಅದರಲ್ಲಿ ನಾನು ಫೌಂಡೇಶನ್ ನಿರ್ಮಿಸುತ್ತೇನೆ ಎಂದು ಪ್ರತಾಪ್ ಸಿಂಹ ಖಡಕ್ ಆಗಿ ಉತ್ತರಿಸಿದರು.
ನಾವು ಹಾಲಿ 15 ಜನ ಬಿಜೆಪಿ ಸಂಸದರು ಇದ್ದೇವೆ. 15 ಜನರು ಸ್ಪರ್ಧೆ ಮಾಡಿ 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈಗಾಗಲೇ ಎಲ್ಲಾ ಹಾಲಿ ಎಂಪಿಗಳಿಗೆ ಟಿಕೆಟ್ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮೇಲಿಂದಲೂ ಸಹ ಕಾರ್ಯ ಸೂಚನೆ ಬಂದಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲವಿರುವುದು ಮೈತ್ರಿ ಸರ್ಕಾರದಲ್ಲಿ ಎಂದು ವ್ಯಂಗ್ಯವಾಡಿದರು.

ಇದು ಯಾವ ಲೆಕ್ಕ?
ಇನ್ನು ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತರ ಬಳಿ ಸಿಕ್ಕ 25 ಲಕ್ಷ ರೂ. ಹಣದ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಯನ್ನು ಕುಟುಕಿದ ಪ್ರತಾಪ್ ಸಿಂಹ, ಸ್ಟೀಲ್ ಬ್ರಿಡ್ಜ್ ಸೇರಿ ನಾನಾ ಕಾಮಗಾರಿಗಳಲ್ಲಿ ಕೋಟ್ಯಂತರ ಹಣ ಪಡೆಯುತ್ತಿರುವವರಿಗೆ ಇದು ಯಾವ ಲೆಕ್ಕ ಎಂದರು.

ಈಗ ರಾಜೀನಾಮೆ ಪಡೆಯುವುದಿಲ್ಲ
ಆಂಜನೇಯ ಅವರು ಸಚಿವರಾಗಿದ್ದಾಗ ಅವರ ಪತ್ನಿಯ ಬಳಿ ಕೋಟ್ಯಂತರ ರೂ. ಹಣ ಪತ್ತೆ ಆಗಿತ್ತು. ಆಗ ಅವರ ರಾಜೀನಾಮೆ ಪಡೆಯದ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಈಗ ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಪಡೆಯುವುದಿಲ್ಲವೆಂದು ಪ್ರತಾಪ್ ಸಿಂಹ ಟೀಕಿಸಿದರು.

ಇವರೇನು ಭಕ್ತರೋ ಅಥವಾ ಕಳ್ಳರೋ?
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹೆಣ್ಣು ಮಕ್ಕಳ ಪ್ರವೇಶ ಕುರಿತಂತೆ ಮಾತನಾಡಿದ ಪ್ರತಾಪ್ ಸಿಂಹ ನಮ್ಮ ಅಯ್ಯಪ್ಪ ಸ್ವಾಮಿ ಬೆಟ್ಟದಲ್ಲಿ ಮುಸ್ಲಿಮರಿಗೂ, ಕ್ರಿಶ್ಚಿಯನ್ನರಿಗೂ ಏನು ಸಂಬಂಧವಿದೆ ? ಏಕೆ ಅವರು ಹೋಗಬೇಕು ? ನಮ್ಮನ್ನು ಮಸೀದಿಗೆ ಹೋಗಲು ಬಿಡುತ್ತಾರೆಯೇ ? ಏಕೆ ಆ ಮಹಿಳೆಯರನ್ನು ಅಲ್ಲಿಗೆ ಹೋಗಲು ಬಿಟ್ಟರು ? ನಿಷೇಧಿತ ಸ್ಥಳ ಎಂದು ಗೊತ್ತಿದ್ದರೂ ಬುರ್ಖಾ ಹಾಕಿಕೊಂಡು ಕಳ್ಳರಂತೆ ಹೋಗುವ ಇವರೇನು ಭಕ್ತರೇ ಅಥವಾ ಕಳ್ಳರೋ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ನಾವೇ ನಾಶ ಮಾಡಲಿದ್ದೇವೆ
ಕಮ್ಯೂನಿಸ್ಟ್ ಸರ್ಕಾರ ಜನರಿಗಿಂತ ನಂಬಿಕೆಯನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಅವರಿಗೆ ಅನ್ಯ ಧರ್ಮದವರು ಸಹಕಾರ ಕೊಡುತ್ತಿದ್ದಾರೆ. ಈ ಸರ್ಕಾರ ನಾಶವಾಗುವ ಕಾಲ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ನಾಶವಾಯಿತು. ತ್ರಿಪುರದಲ್ಲಿ ಬಿಜೆಪಿಯೇ ನಾಶ ಮಾಡಿದೆ. ಕೇರಳದಲ್ಲಿಯೂ ಸಹ ನಾವೇ ನಾಶ ಮಾಡಲಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದರು.












Click it and Unblock the Notifications