ಮೈಸೂರಿನಲ್ಲಿ ಅಪ್ರಾಪ್ತ ಯುವಕರಿಂದ ಹಿಟ್ ಅಂಡ್ ರನ್ ಘಟನೆ
ಮೈಸೂರು, ಆಗಸ್ಟ್ 13 : ಮೈಸೂರಿನಲ್ಲಿ ಹಿಟ್ ಅಂಡ್ ಪ್ರಕರಣವು ಆ.13ರ ಮಂಗಳವಾರ ದಾಖಲಾಗಿದೆ. ಅಪ್ರಾಪ್ತ ಕಾರು ಚಾಲಕ ಯುವತಿಯರಿಗೆ ಗುದ್ದಿ ಗಾಯಗೊಳಿಸಿದ್ದಲ್ಲದೆ ಗಾಡಿಯೊಂದನ್ನು ಜಖಂ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಪೃಥ್ವಿರಾಜ್ ಮತ್ತು ಅನೂಪ್ ಎಂಬುವವರೇ ಸರಣಿ ಅಪಘಾತವೆಸಗಿ ಗೂಸಾ ತಿಂದವರು. ಈ ಹಿಂದೆ ಕುಟುಂಬದವರ ಜೊತೆ ತಲಕಾಡಿಗೆ ಹೋಗಲು ಮಂಜುನಾಥ್ ಎಂಬುವವರು ವಾಹನ ಪಡೆದಿದ್ದರು. ಈ ನಡುವೆ ಮಂಜುನಾಥ್ ಅವರ ಬಳಿ ಕಾರು ಪಕ್ಕಕ್ಕೆ ನಿಲ್ಲಿಸುವುದಾಗಿ ಹೇಳಿ, ಅನೂಪ್ ಕಾರು ಪಡೆದುಕೊಂಡು, ನಂತರ ಯುವರಾಜ ಕಾಲೇಜಿನಲ್ಲಿದ್ದ ಪೃಥ್ವಿರಾಜ್ ನನ್ನು ಕರೆತಂದು ಕಾರಿನಲ್ಲಿ ತೆರಳಿದ್ದಾರೆ.

ಇದೇ ಕಾರಿನಲ್ಲಿ ಬೆಳಗ್ಗೆ ಮುಡಾ ವೃತ್ತದ ಬಳಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು, ಗಾಯಗೊಳಿಸಿದ್ದಾರೆ ಈ ಯುವಕರು. ಆ ವಿದ್ಯಾರ್ಥಿನಿಯರನ್ನು ಮಹಾರಾಣಿ ಕಾಲೇಜಿನ ಪ್ರೇಮಾ ಹಾಗೂ ಅಶ್ವಿನಿ ಎಂದು ಗುರುತಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಅಶ್ವಿನಿ ಪ್ರಜ್ಞೆ ತಪ್ಪಿದ್ದು ವಿದ್ಯಾರ್ಥಿಗಳು ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು. ಸಾರ್ವಜನಿಕರು ವಿದ್ಯಾರ್ಥಿಗಳ ಬೆನ್ನಟ್ಟಿ, ಮಹಾರಾಜ ಕಾಲೇಜಿನ ಬಳಿ ಅಡ್ಡಗಟ್ಟಿದರು. ಇದಕ್ಕೂ ಮುಂಚೆ ಮುಡಾ ಬೊಲೆರೋ ಕಾರಿಗೆ ಪೃಥ್ವಿರಾಜ್ ಡಿಕ್ಕಿ ಹೊಡೆದಿದ್ದ.

ಅಪಘಾತವೆಸಗಿ ತೆರಳುತ್ತಿದ್ದವರನ್ನು ಹಿಂಬಾಲಿಸಿದ ಸಾರ್ವಜನಿಕರು, ಹಿಡಿದು ಸಕತ್ ಗೂಸಾ ನೀಡಿದ್ದರಲ್ಲದೆ ಪೃಥ್ವಿರಾಜ್ ಓಡಿಸುತ್ತಿದ್ದ ಕಾರನ್ನು ಜಖಂಗೊಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೆ.ಆರ್ ಟ್ರಾಫಿಕ್ ಪೊಲೀಸರು ಪೃಥ್ವಿರಾಜ್ ಹಾಗೂ ಅನೂಪ್ ನನ್ನು ವಶಕ್ಕೆ ಪಡೆದರು.
ಸದ್ಯ ಅಪಘಾತಕ್ಕೀಡಾದ ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಪೃಥ್ವಿರಾಜ್ ಮೇಲೆ ಸೆಕ್ಷನ್ 279, 338 ಅಡಿಯಲ್ಲಿ ವೇಗದ ಚಾಲನೆ ಹಾಗೂ ಹಿಟ್ ಅಂಡ್ ರನ್ ಕೇಸುಗಳು ದಾಖಲಾಗಿವೆ.












Click it and Unblock the Notifications