ಮೈಸೂರಿನ ಕಲಾಮಂದಿರದಲ್ಲಿ ತಲೆಎತ್ತಲಿದೆ ಹೆರಿಟೇಜ್ ಪಾರ್ಕ್
ಮೈಸೂರು, ಮೇ 29: ಮೈಸೂರು ಸಾಂಸ್ಕೃತಿಕ, ಹಾಗೆಯೇ ಅರಮನೆ ನಗರಿ. ಇಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು ಮೈಸೂರಿನ ಕಲಾಮಂದಿರ. ಈಗ ಈ ಕಲಾಮಂದಿರವನ್ನು ಮತ್ತಷ್ಟು ಸುಂದರಗೊಳಿಸಲು ಪಕ್ಕದಲ್ಲಿ ಉದ್ಯಾನವನವನ್ನು ರೂಪಿಸುವ ಕಾರ್ಯಕ್ಕೆ ಭರಪೂರ ತಯಾರಿ ನಡೆಯುತ್ತಿದೆ.
ಭಾರತೀಯ ನೋಟು ಮುದ್ರಣಾಲಯದ ಸಿಎಸ್ಆರ್ ಅನುದಾನದಡಿ ಕಲಾಮಂದಿರದ ಆವರಣವನ್ನು ಸುಂದರ ಜಾಗವನ್ನಾಗಿ ಪರಿವರ್ತಿಸಲು ಪೂರ್ವ ತಯಾರಿ ನಡೆಯುತ್ತಿದೆ. ಕಲಾಮಂದಿರದ ಆವರಣವನ್ನು ಜನಾಕರ್ಷಣೆಯ ಕೇಂದ್ರವಾಗಿ ರೂಪಾಂತರಗೊಳಿಸುವ ಕಾರ್ಯ ಸಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾರತ ನೋಟು ಮುದ್ರಣಾಲಯ ನೀಡಿದ ಮೊದಲ ಹಂತದ ಸಿಎಸ್ಆರ್ ಅನುದಾನ 20 ಲಕ್ಷ ರೂಪಾಯಿ ಹಣದಲ್ಲಿ ಕಲಾಮಂದಿರದ ಆವರಣವನ್ನು ಅಭಿವೃದ್ಧಿ ಮಾಡುವ ಕಾರ್ಯ ಆರಂಭಿಸಿದೆ. ಇದರೊಟ್ಟಿಗೆ ಕೃತಕ ಜಲಪಾತವನ್ನು ನಿರ್ಮಿಸಲು ತಯಾರಿ ನಡೆಯುತ್ತಿದೆ.

ಸಿಎಸ್ಆರ್ ಅನುದಾನದಲ್ಲಿ 41 ಲಕ್ಷ ರೂಪಾಯಿಗಳನ್ನು ಈಗಾಗಲೇ ಈ ಉದ್ಯಾನವನದ ನಿರ್ಮಾಣಕ್ಕೆ ನೀಡಲಾಗಿದೆ. ಈ ಹಣದಲ್ಲಿ ಕಲಾಮಂದಿರದ ಎದುರಿನ ಉದ್ಯಾನವನ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಅವರು, ಕಲಾಮಂದಿರದ ಉದ್ಯಾನವನ್ನು ಪಾರಂಪರಿಕ ಉದ್ಯಾನವನವನ್ನಾಗಿಸುವ ಗುರಿಯನ್ನು ಹೊಂದಿದ್ದಾರೆ.
ಈ ಉದ್ಯಾನವನ ನಿರ್ಮಾಣವಾದರೆ ಕಲಾಮಂದಿರದ ಆವರಣ ಹಸಿರಿನಿಂದ ನಳನಳಿಸುತ್ತದೆ. ಉದ್ಯಾನವನ ಡ್ರೈ ಗಾರ್ಡನ್ ವಿನ್ಯಾಸದಲ್ಲಿದೆ. ಉದ್ಯಾನದ ಮಧ್ಯಭಾಗದಲ್ಲಿ ಕಲ್ಲಿನಿಂದ ವಿನ್ಯಾಸಗೊಳಿಸಲಾಗುತ್ತದೆ. ಕಲಾಮಂದಿರ ಪ್ರವೇಶಿಸುವವರಿಗೆ ಮುಂದಿನ ದಿನಗಳಲ್ಲಿ ಸಂಗೀತವೂ ಜೊತೆಯಾಗಲಿದೆ.
ಭಾರತ ನೋಟು ಮುದ್ರಣಾಲಯ ಕಲಾಮಂದಿರ ಆವರಣ ಮತ್ತು ಉದ್ಯಾನವನ ಅಭಿವೃದ್ಧಿಗೆ ಒಟ್ಟು 61 ಲಕ್ಷ ರೂಗಳ ನೆರವು ನೀಡಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಜೊತೆಗೆ ಕಲಾಮಂದಿರದ ಒಳಾಂಗಣವನ್ನು ಉನ್ನತೀಕರಣ ಮಾಡಲು, ಶೌಚಾಲಯ, ಆಧುನೀಕರಣ ವ್ಯವಸ್ಥೆಗಳು ಮತ್ತು ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳಲು ಅನುದಾನ ನೀಡುವಂತೆಯೂ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ.












Click it and Unblock the Notifications