Kabini-Hemavati Dam Level: ವಿಪರೀತ ಮಳೆಗೆ ಈ ಜಲಾಶಯಗಳ ಒಳಹರಿವು ಭಾರೀ ಏರಿಕೆ, ಇಂದಿನ ವಿವರ
ಮೈಸೂರು, ಜೂನ್ 29: ಕರ್ನಾಟಕದ ಮಲೆನಾಡು ಭಾಗದ ಕೆಲ ಜಿಲ್ಲೆಗಳು, ಕೇರಳ-ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ಒಂದು ವಾರದಿಂದ ನಿರಂತರವಾಗಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೇರಳ ಮೂಲದಲ್ಲಿ ಹುಟ್ಟು ಕರ್ನಾಟಕಕ್ಕೆ ಹರಿಯುವ ಕಪಿಲಾ ನದಿ ಮೈದುಂಬಿಕೊಂಡಿದ್ದು, ಕಬಿನಿ ಜಲಾಶಯದ (Kabini Dam Water level)ಒಳಹರಿವು ದಿನೇ ದಿನೇ ಹೆಚ್ಚಾಗುತ್ತಿದೆ.
ಇನ್ನೂ ಸುಮಾರು 2800 ಚದರ ಕಿಲೋ ಮೀಟರ್ ಜಲಾನಯನ ಪ್ರದೇಶಗಳಲ್ಲಿ ಬಿದ್ದ ಭಾರೀ ಮಳೆಗೆ ಹೇಮಾವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಇದಕ್ಕೆ ಅಡ್ಡಲಾಗಿ ಹಾಸನ ಜಿಲ್ಲೆಯ ಗೋರೂರಿನಲ್ಲಿ ನಿರ್ಮಿಸಲಾಗಿರುವ 'ಹೇಮಾವತಿ ಜಲಾಶಯ'ದಲ್ಲಿ (Hemavati Reservoir level) ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಶನಿವಾರದ ವರದಿಯಲ್ಲಿ ತಿಳಿಸಿದೆ. ಈ ಎರಡು ಜಲಾಶಯಗಳ ಇಂದಿನ (ಜೂನ್ 29) ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯಿರಿ.

ಕಬಿನಿ ಜಲಾಶಯ ಒಳಹರಿವು ಭಾರೀ ಹೆಚ್ಚಳ
ಕಳೆದ ವಾರ ನಿರಂತರ ಮಳೆ ಆಗಿದ್ದು, ಶನಿವಾರಕ್ಕೆ ತಕ್ಕ ಮಟ್ಟಿಗೆ ಮಳೆ ಕಡಿಮೆ ಆಗುವ ಲಕ್ಷಣ ಕಂಡು ಬಂದಿದೆ. ಸದ್ಯ ಕಪಿಲಾ ನದಿ ಜಲಾನಯನ ಪ್ರದೇಶಗಳಲ್ಲಿ ಜೋರು ಮಳೆ ಆದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು 17,873 ಕ್ಯೂಸೆಕ್ಸ್ ನಷ್ಟಿದೆ.
2000 ಕ್ಯೂಸೆಕ್ ನೀರನ್ನು ಬಿಡುಗಡೆ (ಹೊರ ಹರಿವು) ಮಾಡಲಾಗುತ್ತಿದೆ. ಈ ಕಬಿನಿ ಜಲಾಶಯದ ಒಟ್ಟು ಸಾಮರ್ಥ್ಯದಲ್ಲಿ (19.52 TMC) ಅಂದರೆ 2284 ಅಡಿಯಲ್ಲಿ ಪೈಕಿ ಈವರೆಗೆ ಜಲಾಶಯದಲ್ಲಿ 2274.93 ಅಡಿಯಷ್ಟು ನೀರು ಭರ್ತಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಣೆಕಟ್ಟು ಪೂರ್ತಿಯಾಗಿ ಭರ್ತಿಯಾಗಲಿದೆ. ಸದ್ಯ ಒಟ್ಟು ಶೇಕಡಾ 73ರಷ್ಟು ನೀರಿನ ಸಂಗ್ರಹವಾಗಿದೆ ಎಂದು ಉಸ್ತುವಾರಿ ಕೇಂದ್ರ (KSNDMC) ಇಂದಿನ ಅಂಕಿ ಸಂಖ್ಯೆಗಳ ಮೂಲಕ ಖಚಿತ ಪಡಿಸಿದೆ.

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
ಇನ್ನೂ ಪಶ್ಚಿಮ ಘಟ್ಟಗಳಲ್ಲಿ, ಕಣಿವೆ ಭಾಗದಲ್ಲಿ ಹುಟ್ಟಿ ಕರ್ನಾಟಕದ ಹಾಸನ ಕಡೆಗೆ ಹರಿದು ಬರುವ ಹೇಮಾವತಿ ನದಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದನ್ನು ಕಾವೇರಿ ನದಿಯ ಉಪನದಿ ಅಂತಲೂ ಕರೆಯಲಾಗುತ್ತದೆ. ಈ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹೇಮಾವತಿ ಜಲಾಯಶದಲ್ಲಿ ಒಳಹರಿವಿನ ಪ್ರಮಾಣ ಇಂದು 5862 ಕ್ಯೂಸೆಕ್ಸ್ ಇದೆ.
ಈ ಆಣೆಕಟ್ಟಿನಲ್ಲಿ ಹೆಚ್ಚು ನೀರಿನ ಸಂಗ್ರಹ ಮಾಡುತ್ತಿರುವ ಕಾರಣ ಹೊರ ಹರಿವು ಕೇವಲ 250 ಕ್ಯೂಸೆಕ್ಸ್ ಇದೆ. ಈ ಜಲಾಶಯವು ಒಟ್ಟು ಸಾಮರ್ಥ್ಯ 37,103 TMC ಇದ್ದು, ಈ ಪೈಕಿ ಸದ್ಯ 8.390 TMC ನೀರಿನ ಸಂಗ್ರಹವಾಗಿದೆ ಎಂದು ಉಸ್ತುವಾರಿ ಕೇಂದ್ರ ತಿಳಿಸಿದೆ.
ಈ ವಾರವು ಪಶ್ಚಿಮ ಘಟ್ಟಗಳು ಸೇರಿದಂತೆ ಮಲೆನಾಡಿನ ಒಂದಷ್ಟು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನ ಮುಂಗಾರು ಚುರುಕಿನಿಂದ ಕೂಡಿರಲಿದೆ. ಹೀಗಾಗಿ ಈ ಮೇಲಿನ ಎರಡು ಜಲಾಶಯಗಳಲ್ಲಿ ಹೊರಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications