ಸಿಗದ ನರಭಕ್ಷಕ ಹುಲಿ, ಸಿಡಿದೆದ್ದ ಹೆಡಿಯಾಲ ಗ್ರಾಮಸ್ಥರು
ಹೆಡಿಯಾಲ (ಮೈಸೂರು), ನವೆಂಬರ್ 18 : ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮಗಳ ರೈತರ ಪಾಲಿಗೆ ನರಭಕ್ಷಕನಾಗಿ ಕಾಡುತ್ತಿರುವ ಹುಲಿಯನ್ನು ಸೆರೆಹಿಡಿದು ಅಮಾಯಕರ ಪ್ರಾಣ ರಕ್ಷಣೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಡಿಯಾಲ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೆಡಿಯಾಲ ಸಮೀಪದ ಹಾದನೂರು ಗ್ರಾಮದ ರೈತ ಶಿವಣ್ಣ ಎಂಬುವರು ಮಂಗಳವಾರ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತಿದ್ದ ಸಂದರ್ಭ ಹುಲಿ ದಾಳಿ ಮಾಡಿ ಹತ್ಯೆಗೈದಿತ್ತು. ಶವವನ್ನು ಕಾಡಿನೊಳಕ್ಕೆ ಎಳೆದೊಯ್ದು, ಸ್ವಲ್ಪ ಭಾಗವನ್ನು ತಿಂದು ಹಾಕಿತ್ತು.
ಹುಲಿಯನ್ನು ನೋಡಲು ತೆರಳಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೃಷ್ಣ ಎಂಬಾತನ ಮೇಲೆರಗಿ ಗಾಯಗೊಳಿಸಿ ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುಲಿಯನ್ನು ಓಡಿಸಿ ದೇಹವನ್ನು ಕಾಡಿನಿಂದ ಹೊರತಂದಿದ್ದರು. [ದನ ಮೇಯಿಸುತ್ತಿದ್ದವ ಹುಲಿ ದಾಳಿಗೆ ಬಲಿ]

ಹುಲಿಯ ದಾಳಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳದಲ್ಲೇ ಅರಣ್ಯ ಇಲಾಖೆಯ ಮೇಲೆ ಹರಿಹಾಯ್ದಿದ್ದರು. ಹುಲಿಯನ್ನು ಜೀವಂತ ಸೆರೆ ಹಿಡಿಯಬೇಕು ಅಥವಾ ಕೊಲ್ಲಬೇಕು ಇಲ್ಲದಿದ್ದರೆ ಮೃತದೇಹವನ್ನು ಕಾಡಿನಿಂದ ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಬಿಗುವಿನ ವಾತಾವರಣ ನಿರ್ಮಾಣವಾಗಬಹುದೆಂಬ ಆತಂಕದಿಂದ ಶಿವಣ್ಣನ ಮೃತದೇಹವನ್ನು ಹೆಡಿಯಾಲ ಅರಣ್ಯ ಇಲಾಖೆಯ ಕಚೇರಿಗೆ ರಾತ್ರಿಯೇ ರವಾನಿಸಿದ್ದರು.
ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ಬೆಳಿಗ್ಗೆ ಹಾದನೂರು ಮತ್ತು ಸುತ್ತಮುತ್ತಲ 45ಕ್ಕೂ ಹೆಚ್ಚು ಗ್ರಾಮಗಳ ರೈತರು ಹೆಡಿಯಾಲ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರತನಕ ಬೃಹತ್ ಪ್ರತಿಭಟನೆ ಮಾಡಿ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. [ನರಭಕ್ಷಕ ಹುಲಿಗೆ ಹೆದರಿದ ನಂಜನಗೂಡು ಗ್ರಾಮಸ್ಥರು]

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಚ್.ಡಿ.ಕೋಟೆ ತಾಲೂಕಿನ ಶಾಸಕ ಚಿಕ್ಕಮಾದು ಅವರು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಮುಂದಾದರು. ಕೆರಳಿದ ಪ್ರತಿಭಟನಾಕಾರರು ಇನ್ನಷ್ಟು ಆಕ್ರೋಶಗೊಂಡರು. ಅರಣ್ಯದಂಚಿನ 45ಕ್ಕೂ ಹೆಚ್ಚು ಗ್ರಾಮದ ರೈತರು ರಾತ್ರಿ ಹಗಲು ಎನ್ನದೆ ಜೀವಭಯದಿಂದಲೇ ಬದುಕು ಸಾಗಿಸುತ್ತಿದ್ದೇವೆ ಎಂದು ಪ್ರತಿಭಟನಾನಿರತರು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಬೇಡಿಕೆಗಳು : ನರಭಕ್ಷಕ ಹುಲಿಯ ದಾಳಿಯಿಂದ ಮೃತ ಪಟ್ಟಿರುವ ಕುಟುಂಬಗಳಿಗೆ ಸರ್ಕಾರ 20 ಲಕ್ಷ ಪರಿಹಾರ ನೀಡಬೇಕು ಮತ್ತು ಪುನರ್ ವಸತಿ ಕಲ್ಪಿಸಿಕೊಡಬೇಕು. ಅನಾಥವಾಗಿರುವ ಕುಟುಂಬದ ಒಬ್ಬರಿಗೆ ಸರ್ಕಾರಿ ಹುದ್ದೆ ನೀಡಬೇಕು. ಸರ್ಕಾರದಿಂದ ಸ್ಥಳದಲ್ಲೇ 5 ಎಕರೆಯ ಭೂಮಿಯನ್ನು ಮಂಜೂರು ಮಾಡಬೇಕು - ಇವು ಅವರ ಪ್ರಮುಖ ಬೇಡಿಕೆಗಳು.

ನರಭಕ್ಷಕ ಹುಲಿಗಳನ್ನು ಗುಂಡಿಕ್ಕಿ ಕೊಲ್ಲಬೇಕು, ಇರುವ ಸೌರಶಕ್ತಿ ಬೇಲಿಗಳನ್ನು ಪುನಶ್ಚೇತನಗೊಳಿಸಿ ಆನೆ ಕಂದಕಗಳನ್ನು ತೋಡಿಸಿ ರೈಲು ಕಂಬಿಗಳನ್ನು ಅಳವಡಿಸಬೇಕು. ಅರಣ್ಯ ಕಾಯದ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಗೊಳಿಸಬೇಕು ಮತ್ತು ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿ ಮಾತನಾಡಿದ ಶಾಸಕ ಚಿಕ್ಕಮಾದು ಹುಲಿಯನ್ನು ಸೆರೆಹಿಡಿಯುವ ಅಥವಾ ಗುಂಡಿಕ್ಕಿ ಕೊಲ್ಲುವ ಕುರಿತ ಆದೇಶದ ಬಗ್ಗೆ ತಿಳಿಸಿದರಲ್ಲದೆ, ಸ್ಥಳದಲ್ಲಿದ್ದ ಮೃತ ಶಿವಣ್ಣನ ಪತ್ನಿ ಪುಟ್ಟವೆಂಕಟಮ್ಮರವರಿಗೆ 2 ಲಕ್ಷ ರೂ. ಪರಿಹಾರ ಚೆಕ್ಕನ್ನು ನೀಡಿದರು. ಇನ್ನುಳಿದ 3 ಲಕ್ಷ ರೂ.ಗಳನ್ನು ತಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು. [ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?]












Click it and Unblock the Notifications