Heavy Rain: ಮೈಸೂರು ಮಳೆಗೆ ಧರೆಗುರುಳಿದ 410 ವಿದ್ಯುತ್ ಕಂಬಗಳು; ವಿದ್ಯುತ್ ಕಡಿತ, ನೀರು ಪೂರೈಕೆಯಲ್ಲಿ ವ್ಯತ್ಯಯ
ಶುಕ್ರವಾರ ರಾತ್ರಿ ಮೈಸೂರಿನಲ್ಲಿ ಸುರಿದ ಮಳೆಗೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗುಳಿದಿದ್ದವು. ಪರಿಣಾಮ ನಗರದ 30ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ನೀರು ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಯಿತು.
ಶುಕ್ರವಾರ ಸುರಿದ ಗುಡುಗು, ಬಿರುಗಾಳಿ ಸಹಿತ ಮಳೆಯಿಂದಾಗಿ 410 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದಲ್ಲದೇ 16 ಟ್ರಾನ್ಸ್‌ಫಾರ್ಮರ್ (ಟಿಸಿ) ಸುಟ್ಟುಹೋದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ಅಸ್ತವ್ಯಸ್ತವಾಗಿದೆ. ಇದರಿಂದ ಅಂದಾಜು 80 ಲಕ್ಷ ರೂ. ನಷ್ಟವಾಗಿದೆ.

ವಿದ್ಯುತ್ ಕಂಬ ದುರಸ್ತಿ ಹಿನ್ನೆಲೆಯಲ್ಲಿ ನಗರಪಾಲಿಕೆ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರದೆಲ್ಲೆಡೆ ನೀರು ಪೂರೈಕೆ ಮಾಡಲು ಪರದಾಡಿದರು. ಕುವೆಂಪು ನಗರ, ರಾಮಕೃಷ್ಣ ನಗರ, ಟಿ.ಕೆ.ಲೇಔಟ್, ಸರಸ್ವತಿಪುರಂ, ಹೆಬ್ಬಾಳು, ವಿಜಯ ನಗರ, ನಜರ್‌ಬಾದ್, ವಿದ್ಯಾರಣ್ಯಪುರಂ, ಜೆಪಿ ನಗರ ಸೇರಿದಂತೆ ಸಾಕಷ್ಟು ಬಡಾವಣೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಪರದಾಡಿದ ಸಾರ್ವಜನಿಕರು
ವಿದ್ಯುತ್ ಸ್ಥಗಿತದಿಂದಾಗಿ ಸಾಕಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಸಿಗದೇ ಸಾರ್ವಜನಿಕರು ಪರದಾಡುವಂತಾಯಿತು. ಅಂಗಡಿ- ಬೇಕರಿಗಳಲ್ಲಿ ಕ್ಯಾನ್ ಮತ್ತು ಬಾಟಲ್‌ಗಳಿಂದ ನೀರು ತಂದು ಬಳಕೆ ಮಾಡುವಂತಾಯಿತು. ಶುಕ್ರವಾರ ರಾತ್ರಿಯಿಂದಲ್ಲೇ ಕರೆಂಟ್ ಕಟ್ ಆಗಿದ್ದರಿಂದ ಸಂಪ್‌ನಲ್ಲಿದ್ದ ನೀರು ಬಳಕೆ ಮಾಡಲು ಸಾಧ್ಯವಾಗದೇ ನಿವಾಸಿಗಳು ಪರದಾಡಿದರು.
ಶುಕ್ರವಾರ ಸಂಜೆ ಅರ್ಧ ಗಂಟೆ ಬಿದ್ದ ಮಳೆಗೆ ಮೈಸೂರಿನ ಯುಜಿಡಿ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ಮ್ಯಾನ್‌ಹೋಲ್ ಉಕ್ಕಿ ಹರಿಯುತ್ತಿವೆ. ಅಜೀಜ್‌ಶೇಠ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಚರಂಡಿಗಳಲ್ಲಿರುವ ಕಸಕಡ್ಡಿ, ಕೊಳಚೆ ಪದಾರ್ಥದ ರಾಡಿ ರಸ್ತೆಗೆ ಬಂದಿದೆ. ಈ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ.
ನಗರ ವ್ಯಾಪ್ತಿಯಲ್ಲಿ 200, ಗ್ರಾಮಾಂತರ ಭಾಗದಲ್ಲಿ 210 ಸೇರಿ ಒಟ್ಟು ಜಿಲ್ಲೆಯಲ್ಲಿ 410 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದಲ್ಲದೇ ಮಳೆ ನೀರು ಟಿಸಿ ಇರುವ ಜಾಗದಲ್ಲಿ ಬೀಳುವುದು ಸೇರಿದಂತೆ ಇನ್ನಿತರ ಕಾರಣಗಳಿಗೆ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ 16 ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿವೆ.












Click it and Unblock the Notifications