ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಮೈಸೂರಿನ ಶಿಕ್ಷಕ ಅರೆಸ್ಟ್‌

ಮೈಸೂರು, ಏಪ್ರಿಲ್‌ 11: ಇತ್ತೀಚೆಗಿನ ದಿನಗಳಲ್ಲಿ ಗುರುವಿನ ಸ್ಥಾನದಲ್ಲಿದ್ದು ಪಾಠ ಮಾಡಬೇಕಾದ ಶಿಕ್ಷಕರೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಗುರು ದೇವೋ ಭವ ಎನ್ನುವ ಬದಲು ಶಿಕ್ಷಕರನ್ನು ಕೂಡ ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಎದುರಾಗುತ್ತಿದೆ.

ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದ ಕಾರಣದಿಂದಾಗಿ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ. ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿರುವುದರಿಂದ ಶಿಕ್ಷಣ ಸಂಸ್ಥೆಗಳು ಪುರುಷ ಶಿಕ್ಷಕರನ್ನು ನೌಕರಿಗೆ ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

Harassment On Girls Students Case Against Teacher in Mysore Arrested

ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇನ್ಯಾರೋ ಕಷ್ಟ ಅನುಭವಿಸುವಂತಾಗಿದೆ. ಬಹಳಷ್ಟು ಕಡೆಗಳಲ್ಲಿ ವಿದ್ಯಾರ್ಥಿನಿಯರು ಭಯದಿಂದ ತಮಗೆ ತೊಂದರೆಯಾದರೂ ಯಾರಿಗೂ ಹೇಳದೆ ಸಹಿಸಿಕೊಂಡು ಹೋಗುತ್ತಿರುವುದೇ ಇಂತಹ ಘಟನೆಗಳು ಆಗಾಗ್ಗೆ ನಡೆಯಲು ಕಾರಣವಾಗುತ್ತಿವೆ.
ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದ್ದು, ದೌರ್ಜನ್ಯ ಎಸಗಿದ ಶಿಕ್ಷಕನನ್ನು ಬಂಧಿಸಲಾಗಿದೆ.

ಮೈಸೂರಿನ ವಿಜಯ ನಗರದಲ್ಲಿವ ಅನುದಾನಿತ ಪ್ರೌಢಶಾಲೆಯೊಂದರ ಶಿಕ್ಷಕ ಮೂಲತಃ ತಿ.ನರಸೀಪರ ನಿವಾಸಿ, ತೋಟಗಾರಿಕಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಎಂ.ಶಿವಮೂರ್ತಿ ಎಂಬಾತನೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾದ ಶಿಕ್ಷಕ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರು ನೀಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ನಾನವನಲ್ಲ... ನಾನವನಲ್ಲ ಎಂದ ಶಿಕ್ಷಕ ಶಿವಮೂರ್ತಿ

ಈ ಪ್ರಕರಣದಲ್ಲಿ ಹೆಚ್.ಎಂ.ಶಿವಮೂರ್ತಿ ಕೃತ್ಯದ ಬಗ್ಗೆ ವಿದ್ಯಾರ್ಥಿನಿಯರು ನೀಡಿದ ದೂರನ್ನು ಆಧರಿಸಿ ಶಿಕ್ಷಕಿಯರು ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತರದೇ ಇದ್ದಿದ್ದರಿಂದ ಮುಖ್ಯ ಶಿಕ್ಷಕ ಮುರಳೀಧರ ರಾವ್ ಎಂಬಾತನ ವಿರುದ್ಧವೂ ದೂರು ದಾಖಲಾಗಿದೆ. ಶಿಕ್ಷಕ ಹೆಚ್.ಎಂ ಶಿವಮೂರ್ತಿಗೆ ಸಹಾಯ ಮಾಡಲು ಹೋದ ಮುಖ್ಯ ಶಿಕ್ಷಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಷ್ಟಕ್ಕೂ ಆಗಿದ್ದೇನು..? ಶಿಕ್ಷಕ ಹೆಚ್.ಎಂ ಶಿವಮೂರ್ತಿ ಸಿಕ್ಕಿಬಿದ್ದೇಗೆ..? ವಿದ್ಯಾರ್ಥಿನಿಯರ ಆರೋಪ ಏನು ಎನ್ನುವುದರ ವಿವರ ಇಲ್ಲಿದೆ. ಪ್ರೌಢಶಾಲೆ ವ್ಯಾಸಂಗಕ್ಕಾಗಿ ಬಿಸಿಎಂ ಹಾಗೂ ಇನ್ನಿತರ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಉಳಿದುಕೊಂಡಿದ್ದ ವಿದ್ಯಾರ್ಥಿನಿಯರು ಮೈಸೂರಿನ ವಿಜಯ ನಗರದಲ್ಲಿವ ಅನುದಾನಿತ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕಳೆದ ಕೆಲ ದಿನಗಳ ಹಿಂದಿನಿಂದಲೂ ಶಿಕ್ಷಕ ಶಿವಮೂರ್ತಿ ಬೇರೆ, ಬೇರೆ ನೆಪವೊಡ್ಡಿ ವಿದ್ಯಾರ್ಥಿನಿಯರಿಗ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮಾರ್ಚ್ 14 ರಂದು ಅಲ್ಲಿನ ಸುಮಾರು 20 ವಿದ್ಯಾರ್ಥಿನಿಯರು ಶಾಲೆಯ ಶಿಕ್ಷಕಿಯ ಗಮನಕ್ಕೆ ತಂದು, ತಮಗಾದ ಕಿರುಕುಳವನ್ನು ಹೇಳಿಕೊಂಡಿದ್ದಾರೆ. ಅವರು ತಕ್ಷಣವೇ ಮುಖ್ಯ ಶಿಕ್ಷಕ ಮುರಳೀಧರ ರಾವ್ ಎನ್ನುವವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಸಂತ್ರಸ್ತ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ವರದಿ ನೀಡುವಂತೆ ಮುಖ್ಯ ಶಿಕ್ಷಕರು ಕೆಲ ಶಿಕ್ಷಕಿಯರಿಗೆ ಜವಾಬ್ದಾರಿ ನೀಡಿದ್ದಾರೆ. ಅದರಂತೆ ಅವರು ಮಾರ್ಚ್‌ 17 ರಂದು ಮುಖ್ಯ ಶಿಕ್ಷಕರಿಗೆ ವರದಿ ಸಲ್ಲಿಸಿದ್ದಾರೆ. ಈ ವೇಳೆ ಆರೋಪ ಹೊತ್ತಿದ್ದ ಶಿಕ್ಷಕ ಶಿವಮೂರ್ತಿ ಅವರು ವಿದ್ಯಾರ್ಥಿನಿಯರು ಮಾಡಿದ್ದ ಆರೋಪವನ್ನು ಅಲ್ಲಗಳೆದಿದ್ದಾರೆ.

ವಿದ್ಯಾರ್ಥಿನಿಯರಿಂದ ಮಕ್ಕಳ ಸಹಾಯವಾಣಿಗೆ ದೂರು

ಈ ಸಂಬಂಧ ಮುಖ್ಯಶಿಕ್ಷಕ ಮುರಳೀಧರ ರಾವ್ ಅವರು ಸಂಸ್ಥೆಯ ಆಡಳಿತ ಮಂಡಳಿಗೆ ಮಕ್ಕಳು ಬರೆದಿದ್ದ ದೂರು ಪತ್ರ ಹಾಗೂ ಶಿಕ್ಷಕಿಯರು ನೀಡಿದ್ದ ವರದಿಯನ್ನು ಸಲ್ಲಿಸಿದ್ದಾರೆ. ಆದರೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಿರಲಿಲ್ಲ. ಹೀಗಾಗಿ ಶಾಲಾ ವಿದ್ಯಾರ್ಥಿನಿಯರ ಪೈಕಿ ಕೆಲವರು ಮಕ್ಕಳ ಸಹಾಯವಾಣಿಗೆ ವಿಚಾರ ಮುಟ್ಟಿಸಿದ್ದರು. ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಡಿಡಿಪಿಐಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಡಿಡಿಪಿಐ ಜವರೇಗೌಡ ಅವರು ಸಂಬಂಧಪಟ್ಟ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅವರಿಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.

ಫೋಕ್ಸೋ ಕಾಯ್ದೆಯಡಿ ಆರೋಪಿ ಶಿಕ್ಷಕನ ಬಂಧನ

ಯಾವಾಗ ಶಿಕ್ಷಣಾಧಿಕಾರಿಗಳು ಶಾಲೆಗೆ ದೌಡಾಯಿಸಿ ತನಿಖೆ ಆರಂಭಿಸಿದರೋ ಆಗಲೇ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಸರಿಯಾದ ಸಮಯಕ್ಕೆ ವಿಚಾರ ಮುಟ್ಟಿಸದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ಏಪ್ರಿಲ್‌ 4 ರಂದು ಶಿಕ್ಷಕ ಶಿವಮೂರ್ತಿ ಹಾಗೂ ಮುಖ್ಯ ಶಿಕ್ಷಕ ಮುರಳೀಧರ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಶಿಕ್ಷಕ ಶಿವಮೂರ್ತಿ ಅವರ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ನಡೆದು ವಾರ ಕಳೆಯುತ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರಿಗ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಕಠಿಣ ಶಿಕ್ಷೆಗೆ ಆಗ್ರಹ

ಇನ್ನು ಶಾಲೆಯ ಶಿಕ್ಷಕನಾಗಿ ಗೌರವಯುತವಾದ ಸ್ಥಾನದಲ್ಲಿದ್ದುಕೊಂಡು ಈ ರೀತಿಯ ಕೃತ್ಯ ಎಸೆಗಿರುವ ಶಿಕ್ಷಕ ಶಿವಮೂರ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ. ಅನುದಾನಿತ ಶಾಲೆಯಾದ ಕಾರಣ ನಾವು ನೇರವಾಗಿ ಕ್ರಮ ತಗೆದುಕೊಳ್ಳಲು ಬರುವುದಿಲ್ಲ. ಹೀಗಾಗಿ ಬಿಇಒ ನೀಡಿರುವ ವರದಿಯ ಅನ್ವಯ ಶಿವಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳವಂತೆ ಆ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆಯಲಾಗುತ್ತದೆ. ಅವರ ಆತನ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ನಮಗೆ ವರದಿ ಮೂಲಕ ತಿಳಿಸಲಿದ್ದಾರೆ ಎಂದು ಡಿಡಿಪಿಐ ಎಸ್.ಟಿ.ಜವರೇಗೌಡ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ. ಇಲ್ಲದೆ ಹೋದರೆ ಶಿವಮೂರ್ತಿಯಂತಹ ಶಿಕ್ಷಕರು ಎಲ್ಲೆಡೆ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳ್ಳುವ ಸಾಧ್ಯತೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+