ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ ಎಚ್.ವಿಶ್ವನಾಥ್
ಮಾಜಿ ಸಂಸದ ಎಚ್. ವಿಶ್ವನಾಥ್ ಜೆಡಿಎಸ್ ಸೇರುತ್ತಾರಂತೆ ಎಂಬ ಗಾಸಿಪ್ ಹರಿದಾಡುತ್ತಿರುವ ಬೆನ್ನಲ್ಲೇ, ಅವರು ಕಾಂಗ್ರೆಸ್ ನಾಯಕರನ್ನು ಬಹಿರಂಗವಾಗಿ ತೆಗಳಿರುವುದು ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಮೈಸೂರು, ಏಪ್ರಿಲ್ 25: ರಾಜ್ಯ ಕಾಂಗ್ರೆಸ್ ನಾಯಕರಿಂದ ನನ್ನ ಮೂಲೆ ಗುಂಪು ಮಾಡುವ ಪ್ರಯತ್ನ ನಡೆದಿದೆ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್. ಆರೋಪಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಎದುರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಲವತ್ತು ವರ್ಷಗಳಿಂದ ನಾನು ಕಾಂಗ್ರೆಸ್ ನಲ್ಲಿದ್ದೆ. ನನಗೆ ಸಾಕಷ್ಟು ನೋವಾಗಿದ್ದರೂ ಯಾವೊಬ್ಬ ನಾಯಕರೂ ಸಮಾಧಾನ ಮಾಡಲಿಲ್ಲ. ಆದರೆ ನಲವತ್ತು ವರ್ಷದಿಂದ ಸಾರ್ವಜನಿಕ ಜೀವನದಲ್ಲಿರೋ ನನಗೆ ರಾಜ್ಯದ ಜನರು ಸಮಾಧಾನ ಮಾಡುತ್ತಿದ್ದಾರೆ' ಎಂದರು.[ಮೇ 10 ರಂದು ಎಚ್.ವಿಶ್ವನಾಥ್ ಜೆಡಿಎಸ್ ಗೆ?!]

ಸಚಿವ ಡಾ.ಎಚ್.ಸಿ. ಮಹದೇವಪ್ಪ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಬಂದು ಮುಖ್ಯಮಂತ್ರಿಗಳು ನೋಡಿದ್ದಾರೆ. ಅವರ ಆರೋಗ್ಯ ವಿಚಾರಿಸಿದ್ದಾರೆ. ಆದರೆ ನಾನು ಅನಾರೋಗ್ಯದಿಂದ ಕೊಯಮತ್ತೂರಿನಲ್ಲಿದ್ದಾಗ ಮುಖ್ಯಮಂತ್ರಿಗಳು ಒಂದು ಫೋನ್ ಕಾಲ್ ಕೂಡ ಮಾಡಿಲ್ಲ ಎಂದು ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ನಡೆ ಕುರಿತು ಸ್ನೇಹಿತರು ಹಿತೈಷಿಗಳಿಂದ ಸಲಹೆ ಪಡೆಯುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿರುವವರಿಗೆ ಯಾರು ಹೋದರೇನು, ಬಿಟ್ಟರೇನು? ಅವರ ಸ್ಥಾನ ಭದ್ರವಾಗಿದೆಯಲ್ಲ ಎಂದು ವ್ಯಂಗ್ಯವಾಡಿದರು.
ಯಾರೂ ಮುಖ್ಯಮಂತ್ರಿ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಅಸಹಾಯಕರಾಗಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ, ಕರ್ನಾಟಕ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ನಲ್ಲಿ ನಾನು ಇರಲಿ ಬಿಡಲಿ ಕಾಂಗ್ರೆಸ್ ಇಸ್ ಕಾಂಗ್ರೆಸ್. ಮುಂದಿನ ನಡೆ ಬಗ್ಗೆ ಸದ್ಯವೇ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.












Click it and Unblock the Notifications