ಮೈಸೂರಿನಲ್ಲಿ ಗುಂಬಜ್ ವಿವಾದ: ನನಗೆ ಕಿರುಕುಳ ಆಗುತ್ತಿದೆ ಎಂದ ಬಿಜೆಪಿ ಶಾಸಕ ರಾಮದಾಸ್
ಮೈಸೂರು, ನವೆಂಬರ್, 17: ಮೈಸೂರಿನಲ್ಲಿ ಗುಂಬಜ್ ವಿಚಾರ ಜೋರಾಗಿ ಸದ್ದು ಮಾಡುತ್ತಿದ್ದು, ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್‌ಸಿಂಹ ನಡುವೆ ಮಾತಿನ ಚಕಮಕಿ ಮುಂದುವರೆದಿದೆ.
ಗುರುವಾರ ಮೈಸೂರಿನಲ್ಲಿ ಗುಂಬಜ್ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮದಾಸ್, ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾನೇನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು. ನಾನು 30 ವರ್ಷದ ಹಿಂದೆ ರಾಜಕೀಯಕ್ಕೆ ಬಂದಾಗ 11 ಜನ ಬಿಜೆಪಿ ಶಾಸಕರು ಇದ್ದರು. ಇದೀಗ ಹಲವು ಕಿರುಕುಳದಿಂದ 10 ಜನ ಪಕ್ಷವನ್ನು ಬಿಟ್ಟಿದ್ದಾರೆ. ನನ್ನನ್ನು ಪಕ್ಷದಿಂದ ಬಿಡಿಸುವ ಹುನ್ನಾರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಪ್ರತಾಪ್‌ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ದಯಮಾಡಿ ನನ್ನನ್ನು ಬಿಟ್ಟು ಬಿಡಿ, ಏನು ಪ್ರಶ್ನೆ ಕೇಳಬೇಡಿ. ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್ ಸ್ಮಶಾನಗಳ ಅಭಿವೃದ್ಧಿ ನನ್ನ ಕನಸಾಗಿದೆ. ಸಾಯುವ ಮುನ್ನ ಸಾಧನೆ ಮಾಡಬೇಕು ಅನ್ನುವುದು ನನ್ನ ಗುರಿಯಾಗಿದೆ. ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ಬದ್ದ ಎಂದರು.

ರಾಮದಾಸ್ ಹೇಳಿಕೆಗೆ ಸಂಸದ ಪ್ರತಿಕ್ರಿಯೆ
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರತಾಪ್‌ಸಿಂಹ, "ರಾಮದಾಸ್ ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯಾರು ಏನೇ ಅಂದರೂ ಹಿಂದೆ ಸರಿಯುವ ಮಾತೇ ಇಲ್ಲ. ಕೆಆರ್‌ಡಿಐಎಲ್ ಮಾದರಿಯಂತೆ ಬಸ್ ನಿಲ್ದಾಣ ರೂಪಿಸಬೇಕು. ಪ್ರಾಧಿಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಒಂದು ಗಿಡ ನೀಡಬೇಕಾದರೂ ಅವರ ಅನುಮತಿ ಪಡೆಯಬೇಕಿತ್ತು," ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಬಸ್ ನಿಲ್ದಾಣವನ್ನು ಮೂಲವಿನ್ಯಾಸಕ್ಕೆ ಅನುಗುಣವಾಗಿ ಕಟ್ಟಲಿ ನನ್ನದೇನು ತಕರಾರಿಲ್ಲ. ಇಲ್ಲಿನ ಎಲ್ಲಾ ಅಭಿವೃದ್ಧಿ ಕೆಲಸಗಳು ಕೂಡ ಮಹಾರಾಜರ ಹೆಸರಿನಲ್ಲಿವೆ. ಅದು ಮಹಾರಾಜರ ಪರಂಪರೆಗೆ ಪೂರಕವಾಗಿರಬೇಕು ಎಂದರು.

ಸಂಸದ, ರಾಮದಾಸ್ ನಡುವೆ ವಾಕ್ಸಮರ
ರಾಮದಾಸ್ ಅವರು ನಮ್ಮ ಹಿರಿಯ ನಾಯಕರಾಗಿದ್ದಾರೆ. ಗುಂಬಜ್ ಹೊಡೆದರೆ ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆದಂತಾಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನಿಸುವುದಿಲ್ಲ. ರಾಮದಾಸ್ ಯಾವ ಅರ್ಥದಲ್ಲಿ ತಮಗೆ ಕಿರುಕುಳ ಆಗಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು. ಅವರಿಗೆ ಕಿರುಕುಳ ಕೊಡುವಷ್ಟು ಶಕ್ತಿ ನನ್ನಲಿಲ್ಲ. ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜೊತೆ ಸೇರಿಕೊಂಡು ವ್ಯವಹಾರ ಮಾಡುವ ಅವಶ್ಯಕತೆ ಇಲ್ಲ. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದರು.

ಬಸ್ ನಿಲ್ದಾಣದ ಕೆಲಸ ರಾತ್ರಿ ಯಾಕೆ?
"ರಾತ್ರಿ ಕೆಲಸ ಮಾಡುವುದು ಕಳ್ಳರದಾಗಿರುತ್ತದೆ. ರಾತ್ರಿ ಯಾಕೆ ಬಸ್ ನಿಲ್ದಾಣದ ಕಾಮಗಾರಿ ಮಾಡಬೇಕು? ಬಸ್ ನಿಲ್ದಾಣಕ್ಕೆ ಹೆಸರಿಡಲು ಕಾನೂನು ಇದೆ. ಈ ವಿಚಾರದಲ್ಲಿ ಎಲ್ಲಾ ಕಾನೂನು ಉಲ್ಲಂಘನೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದೆ. ಅವರೇ ಅನಧಿಕೃತ ಕಟ್ಟಡ ಎಂದು ಹೇಳಿದ್ದಾರೆ. ಅವರು ಬಸ್ ನಿಲ್ದಾಣವನ್ನು ತೆರವು ಮಾಡಬಹುದು. ಮೂಲ ವಿನ್ಯಾಸದ ರೀತಿ ಗುಂಬಜ್ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್ ಇದೆ. ಆ ನಕ್ಷೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಟ್ಟ ಗಡುವು ಮುಗಿದ ಮೇಲೆ ಏನಾಗುತ್ತದೆಯೋ ನೋಡೋಣ," ಎಂದರು.

ಕೊಟ್ಟ ಮಾತಿಗೆ ನಾನು ತಪ್ಪುವುದಿಲ್ಲ
"ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಈ ಹಿಂದೆ ಟಿಪ್ಪು ಏಕ್ಸ್‌ಪ್ರೆಸ್ ಬದಲಾಯಿಸುತ್ತೇನೆ ಎಂದು ಹೇಳಿದ್ದೆ, ಹೇಳಿದಂತೆಯೇ ನಡೆದುಕೊಂಡು ಬದಲಾಯಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ಕೊಟ್ಟ ಮಾತಿಗೆ ಬದ್ಧನಾಗಿರುತ್ತೇನೆ. ಬಸ್ ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್ ತೆರವು ಮಾಡಲೇಬೇಕು. ಮೈಸೂರಿನ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೇ ಹೊರತು ಅವರ ಶತೃಗಳ ಹೆಸರಲ್ಲ. ಗುಂಬಜ್ ಬಗ್ಗೆ ಪರಿಶೀಲನೆಗೆ ಹೊಸ ತಜ್ಞರ ಸಮಿತಿಯ ಅವಶ್ಯಕತೆ ಇಲ್ಲ. ಕೆಆರ್‌ಐಡಿಎಲ್‌ನ ತಜ್ಞರೇ ಮೂಲ ನಕ್ಷೆಗೆ ಅನುಮತಿ ಕೊಟ್ಟಿದ್ದಾರೆ," ಎಂದರು.












Click it and Unblock the Notifications