"ಯಾರು ಏನೇ ಹೇಳಲಿ, ರಾಜ್ಯದಲ್ಲಿ 3 ವರ್ಷ ಯಡಿಯೂರಪ್ಪ ಸರ್ಕಾರ ಗ್ಯಾರಂಟಿ"
ಮೈಸೂರು, ಜನವರಿ 26: "ಏನೇ ಆಗಲಿ ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಉಳಿದವರು ಆಸೆ ಇಟ್ಟುಕೊಳ್ಳಬೇಡಿ" ಎಂದು ಬಿಎಸ್ ವೈ ಪರ ಶಾಸಕ ಜಿ.ಟಿ.ದೇವೇಗೌಡ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರಿಗೆ ಬಂದಿದ್ದ ಅವರು ಯಡಿಯೂರಪ್ಪ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. "ಬಿಜೆಪಿ ಸರ್ಕಾರ ಉಳಿಯಲ್ಲ, ಉಪಚುನಾವಣೆಯಲ್ಲಿ ಬಹುಮತ ಬರಲ್ಲ, ಸಚಿವ ಸಂಪುಟ ರಚನೆ ಆಗಲ್ಲ ಅಂತ ಏನೇನೋ ಹೇಳಿದ್ರು. ಯಾರು ಏನೇ ಹೇಳಲಿ, ಏನೇ ಆಗಲಿ, ಯಡಿಯೂರಪ್ಪ ರಾಜ್ಯಕ್ಕೆ ಮೂರು ವರ್ಷ ಸುಭದ್ರ ಸರ್ಕಾರ ಕೊಡುತ್ತಾರೆ. ಎಲ್ಲರೂ ಅವರಿಗೆ ಸಹಕಾರ ಕೊಡಬೇಕು" ಎಂದು ಹಾಡಿ ಹೊಗಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, "ಎಲ್ಲರಿಗೂ ಸಚಿವ ಸ್ಥಾನ ಸಿಗದೇ ಇರಬಹುದು. ಆದರೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಯಾರಿಗೆ ಯಾವ ಹುದ್ದೆ ನೀಡಬೇಕು, ನಿಗಮ- ಮಂಡಳಿ ನೀಡಬೇಕು ಅಂತ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ" ಎಂದು ಹೇಳಿದ್ದಾರೆ.

"ರಾಜೀನಾಮೆ ಕೊಟ್ಟು ಬಂದವರೂ ಸಾಕಾಗಿ ಹೋಗಿದ್ದಾರೆ. ಸಚಿವ ಸ್ಥಾನ ಸಿಕ್ಕರೂ, ಸಿಗದೇ ಇದ್ದರೂ ಏನೂ ಮಾಡಲು ಸಾಧ್ಯವಿಲ್ಲ. ಇದು ಅಲ್ಲಿರುವ ಎಲ್ಲರಿಗೂ ಗೊತ್ತು" ಎಂದು ಪರೋಕ್ಷವಾಗಿ ವಿಶ್ವನಾಥ್‌ಗೆ ಟಾಂಗ್ ನೀಡಿದ್ದಾರೆ.












Click it and Unblock the Notifications