ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಸಚಿವ ಜಿ.ಟಿ.ದೇವೇಗೌಡ ಗರಂ
ಮೈಸೂರು, ಫೆಬ್ರವರಿ 21: "ನಿಮ್ಮ ಸಮಸ್ಯೆ ಕೇಳೋಕೆ, ನೀವೇನು ನನಗೆ ಮತ ಹಾಕಿದ್ರಾ"? ಎಂದು ಮೈಸೂರು ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಸ್ಥರಿಗೆ ಆವಾಜ್ ಹಾಕಿದ ಘಟನೆ ನಡೆದಿದೆ.
ಈ ಹಿಂದೆ ಉತ್ತರ ಕರ್ನಾಟಕ ಭಾಗದ ಜನರಿಗೆ "ನೀವೇನು ನನಗೆ ಮತ ಹಾಕಿದ್ದೀರಾ"? ಎಂದು ಕೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಯಾಗಿದ್ದರು. ಈಗ ಅವರದೇ ಪಕ್ಷದ ಸಚಿವರು ಕೂಡ ತಮ್ಮ ಕ್ಷೇತ್ರದ ಜನರಿಗೆ "ನೀವೇನು ನನಗೆ ಮತ ಹಾಕಿದ್ದೀರಾ" ? ಎಂದು ಅದೇ ವರಸೆ ಮುಂದುವರೆಸಿದ್ದಾರೆ.
ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಸಚಿವ ಜಿ.ಟಿ.ದೇವೇಗೌಡ ಗರಂ ಆಗಿದ್ದಾರೆ. ಜಿಟಿ ದೇವೇಗೌಡ ಅವರಿಗೆ ಸಾಲುಂಡಿ ಗ್ರಾಮದಲ್ಲಿನ ಸಮಸ್ಯೆ ಹೇಳಿಕೊಳ್ಳಲು ಗ್ರಾಮಸ್ಥರು ಮುಂದಾಗಿದ್ದರು.

ಆಗ "ನೀವೇನು ನನಗೆ ಮತ ಹಾಕಿದ್ದೀರಾ?" ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿಡಿ ಉತ್ತರಿಸಿದ್ದಾರೆ. ಜಿಟಿ ದೇವೇಗೌಡ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಜನರು ಸಚಿವರ ಜೊತೆ ವಾಗ್ವಾದಕ್ಕೆ ಇಳಿದ ಘಟನೆಯೂ ನಡೆಯಿತು.
"ತಮ್ಮ ಗ್ರಾಮದೊಳಗೆ ದುರ್ವಾಸನೆ ಬರುತ್ತಿದೆ. ಬಂದು ಪರಿಶೀಲಿಸಿ" ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಚಿವರು, "ನೀವ್ ಏನ್ ನಂಗೆ ವೋಟ್ ಹಾಕಿದ್ದೀರಾ? ನೀವೆಲ್ಲಾ ಸಿದ್ದರಾಮಯ್ಯಗೆ ವೋಟ್ ಹಾಕಿರೋದು. ನಾನ್ಯಾಕೆ ಬಂದ್ ನೋಡಲಿ" ಎಂದು ಗರಂ ಆಗಿ ಉತ್ತರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದೇವೇಗೌಡರ ಮಾತಿನಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭಗೊಂಡು ಘಟನೆ ಉದ್ವಿಘ್ನಗೊಂಡಿತು. ಗಲಾಟೆ ಜೋರಾದ ಹಿನ್ನಲೆಯಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಇದಾದ ಬಳಿಕ ಜಿ.ಟಿ ದೇವೇಗೌಡ ಅವರು, ನಾನು ಅಧಿಕಾರಿಗಳ ಸಮೇತವಾಗಿ ಬಂದು ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆ. ಈಗ ನಾನು ಕೆಲಸದ ಮೇಲೆ ಹೊರ ಹೋಗುತ್ತಿದ್ದೇನೆ. ಈ ಸಮಸ್ಯೆ ಬಗೆಹರಿಸಲು ಮತ್ತೊಂದು ದಿನ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತರು.












Click it and Unblock the Notifications