ಆಷಾಢ ಶುಕ್ರವಾರ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭರ್ಜರಿ ಸಿದ್ಧತೆ, ಭಕ್ತರಿಗೆ ಉಚಿತ ಬಸ್ ಸೇವೆ, ದಿನಾಂಕಗಳ ವಿವರ ತಿಳಿಯಿರಿ
ಮೈಸೂರು, ಜೂನ್, 13: ಆಷಾಢ ಶುಕ್ರವಾರ ಹಾಗೂ ವರ್ಧಂತ್ಯುತ್ಸವದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ಮಾದರಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಜರುಗುವ ಆಷಾಢ ಶುಕ್ರವಾರದ ವಿಶೇಷ ಪೂಜಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಬಾರಿ ಜೂನ್ 23, 30, ಜುಲೈ 7, 14ರಂದು ಆಷಾಢ ಶುಕ್ರವಾರವಿದ್ದು, ಜುಲೈ 10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ನಡೆಯಲಿದೆ. ಈ ಐದು ದಿನ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ರಾಜ್ಯದ ವಿವಿಧೆಡೆಯಿಂದಷ್ಟೇ ಅಲ್ಲ, ಹೊರ ರಾಜ್ಯಗಳಿಂದಲೂ ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಿ
ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಗಣ್ಯ ವ್ಯಕ್ತಿಗಳಿಗೆ ವಾಹನ ಪಾಸ್ ನೀಡಬೇಕು. ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಆಷಾಢ ಶುಕ್ರವಾರದಂದು ಹಿಂದಿನ ಹಾಗೂ ಮಾರನೇ ದಿನ ಸ್ವಚ್ಛತೆ ಕಾಪಾಡುವುದು, ಸಂಚಾರ ಶೌಚಾಲಯ ವ್ಯವಸ್ಥೆಯನ್ನಯ ಮಾಡಬೇಕು. ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಚಾಮುಂಡೇಶ್ವರಿ ದೇಗುಲದ ಹೈ ಮಾಸ್ಟ್ ದೀಪವನ್ನು ಕೂಡಲೇ ದುರಸ್ತಿಪಡಿಸಿ ಎಂದು ಸೂಚಿಸಿದರು. ಸೆಸ್ಕ್ ವತಿಯಿಂದ ಚಾಮುಂಡಿ ಬೆಟ್ಟದ ದೇಗುಲದ ಸುತ್ತ, ದೇವೀಕೆರೆ ಹಾಗೂ 1,000 ಮೆಟ್ಟಿಲುಗಳ ಬಳಿಯ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸಬೇಕು. ಅಷ್ಟೇ ಅಲ್ಲದೇ ಬೆಟ್ಟದಲ್ಲಿರುವ ದೇವಾಲಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಶೇಷ ದೀಪಾಲಂಕಾರ, ಎಲ್‌ಇಡಿ ದೀಪಗಳ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.
ಭಕ್ತರಿಗೆ ಉಚಿತ ಬಸ್ ಸೇವೆ
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಬಸ್ ಸೇವೆಗೆ ಕೆಎಸ್‌ಆರ್‌ಟಿಸಿಗೆ ಹಣವನ್ನು ದೇವಾಲಯದ ನಿಧಿಯಿಂದ ಕಲ್ಪಿಸಿಕೊಡಬೇಕು. ಹಾಗೆಯೇ ಬಸ್‌ನಲ್ಲಿ ಸಂಚರಿಸುವ ಜನರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ದೇವಾಲಯ ಸಮಿತಿಯವರು ದೇವಾಲಯದ ಆವರಣದಲ್ಲಿ ಪ್ರಸಾದ ವಿತರಣೆ, ದೇವರ ದರ್ಶನ, ಊಟದ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಸೂಚನೆ ನೀಡಿದರು.
ಪ್ರತಿಯೊಬ್ಬ ಅಧಿಕಾರಿಯೂ ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಕ್ಷೇತ್ರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ತನ್ಮೂಲಕ ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಂತೆ ಮಾಡಬೇಕು. 3 ತಿಂಗಳಲ್ಲಿ ಜನರಿಗೆ ನಮ್ಮ ಸರ್ಕಾರದಿಂದ ಆಗುವ ಅನುಕೂಲ ಹಾಗೂ ಉತ್ತಮ ಆಡಳಿತದ ಬಗ್ಗೆ ಅರಿವಾಗುವಂತೆ ಮಾಡಬೇಕು ಎಂದರು.
ಹಾಗೆಯೇ ಪ್ರತಿಯೊಬ್ಬರೂ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಕೆಲಸ ಮಾಡಿ ತೋರಿಸಬೇಕು. ಇದಕ್ಕೆ ಬದ್ಧವಾಗಿ ಕೆಲಸ ಮಾಡುವವರನ್ನು ಪುರಸ್ಕರಿಸುತ್ತೇವೆ. ಕೆಲಸ ಮಾಡದವರು ತಮಗಿಷ್ಟವಾದ ಜಾಗಕ್ಕೆ ಹೋಗಬಹುದು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಶಾಸಕರಾದ ತನ್ವಿರ್ ಸೇಠ್, ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications