ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ 1 ಸಾವಿರ ಕೋಟಿ ರೂ. ಘೋಷಿಸಲಿ: ಮೇಯರ್ ಶಿವಕುಮಾರ್
ಮೈಸೂರು, ಡಿಸೆಂಬರ್, 23: ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ಬಜೆಟ್‌ನಲ್ಲಿ 1 ಸಾವಿರ ಕೋಟಿ ಮೀಸಲಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಬಳಿ ಶೀಘ್ರದಲ್ಲೇ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಇದ್ದಾರೆ. ಹಾಗಾಗಿ ಅವರನ್ನು ಭೇಟಿ ಮಾಡಲು ಸಮಯವನ್ನು ನೀಡುವಂತೆ ಕೋರಿದ್ದೇವೆ. ಅವರು ಬೆಳಗಾವಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಹಾಗಾಗಿ ಇನ್ನೆರಡು ಮೂರು ದಿನಗಳಲ್ಲಿ ಬೆಳಗಾವಿಗೆ ನಿಯೋಗ ಹೊರಡಲಾಗುವುದು. ಜೊತೆಗೆ ಸದ್ಯ 300 ಕೋಟಿ ಅನುದಾನ ನೀಡುವಂತೆ ಹಾಗೂ ಬಜೆಟ್‌ನಲ್ಲಿ 1 ಸಾವಿರ ಕೋಟಿ ಮೀಸಲಿಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಈಗಾಗಲೇ ಚಿತ್ರ ಸಹಿತ ವರದಿಯನ್ನು ಸಿಎಂ ಮೈಸೂರಿಗೆ ಬಂದಾಗ ತಲುಪಿಸುವ ಕೆಲಸವನ್ನು ಮಾಡಿದ್ದೇನೆ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಮನಕ್ಕೂ ತಂದಿದ್ದೇನೆ. ಮುಂದಿನ ಪೀಳಿಗೆಗೂ ಪಾರಂಪರಿಕತೆ ಉಳಿಯಬೇಕು. ಈ ಮೂಲಕ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ನಶಿಸಿ ಹೋಗದಂತೆ ತಡೆಯಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಕೂಡ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಸಚಿವ ಆನಂದ್ ಸಿಂಗ್ ಕೂಡ ವರದಿ ನೀಡುವಂತೆ ಸೂಚಿಸಿದ್ದಾರೆ. ಸದ್ಯ ನಾನು ತಜ್ಞರ ಜೊತೆ ಮೂರು ಬಾರಿ ಸಭೆ ನಡೆಸಿದ್ದೇನೆ. ಡಿಪಿಆರ್ ಕೂಡ ಸಿದ್ಧವಾಗಿದೆ. ಸಿಎಂ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಿಸುವ ನಿರೀಕ್ಷೆ ಇದೆ. ಮೈಸೂರಿನಲ್ಲಿ 213 ಪಾರಂಪರಿಕ ಕಟ್ಟಡಗಳಿವೆ. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಡಿಸೆಂಬರ್ 24ರಿಂದ ಫಲಪುಷ್ಪ ಪ್ರದರ್ಶನ
ದಸರಾ ಮಹೋತ್ಸವ ಹಾಗೂ ಬಹುರೂಪಿ ರಂಗೋತ್ಸವದ ನಂತರ ಇದೀಗ ಅರಮನೆ ನಗರದಲ್ಲಿ ಮಾಗಿ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ವರ್ಷಾಂತ್ಯದಲ್ಲಿ ಅರಮನೆ ಆವರಣದಲ್ಲಿ ಡಿಸೆಂಬರ್ 24ರಿಂದ ಜನವರಿ 2ರವರೆಗೆ ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಗೊಂಬೆ ಪ್ರದರ್ಶನ ಏರ್ಪಡಿಸಿದೆ.

ಅನುದಾನ ದೊರೆತರೆ ಮಾಗಿ ಉತ್ಸವ
ಮಹಾಮಾರಿ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಮೈಸೂರಿನಲ್ಲಿ ಯಾವುದೇ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿರಲಿಲ್ಲ. ಆದರೆ, ಈ ವರ್ಷ ಕೊರೊನಾ ಕ್ಷೀಣಿಸಿರುವುದರಿಂದ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು. ಆದರೆ, ಬಹುರೂಪಿಗೆ ಮಳೆ ಕಾಟ ಇರುವುದರಿಂದ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸಿದೆ. ಈ ನಡುವೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಾಗಿ ಉತ್ಸವ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. "ಮಾಗಿ ಉತ್ಸವ ನಡೆಸಲು 50 ಲಕ್ಷ ರೂಪಾಯಿ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಗಮನಕ್ಕೂ ತರಲಾಗಿದೆ. ಜನಪ್ರತಿನಿಧಿಗಳ ಮೂಲಕವೂ ಯತ್ನಿಸಲಾಗುತ್ತಿದೆ. ಅನುದಾನ ದೊರೆತರೆ ಡಿಸೆಂಬರ್ ಕೊನೆಯ ವಾರ ಮಾಗಿ ಉತ್ಸವ ನಡೆಸಲಾಗುವುದು,'' ಎಂದು ಡಿಸಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಸಂಜೆ 7ರಿಂದ 9ರವರೆಗೆ ವಿದ್ಯುತ್ ದೀಪಾಲಂಕಾರ
ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿದ್ಯುತ್ ದೀಪಾಲಂಕಾರ, ಪೊಲೀಸ್ ಬ್ಯಾಂಡ್, ಶಬ್ಧರಹಿತ ಪಟಾಕಿ ಸಿಡಿಸುವುದೂ ಸೇರಿದಂತೆ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಂಜೆ 7ರಿಂದ 9ರವರೆಗೆ ಅರಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿರುತ್ತದೆ.

ಗಮನ ಸೆಳೆಯಲಿರುವ ವಿವಿಧ ಬಗೆಯ ಹೂವುಗಳು
ಸುಮಾರು 25,000 ಬಗೆಯ ಅಲಂಕಾರಿಕ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. (ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸ್ವಿಲೋಷಿಯ, ನಸ್ಪರ್‌ಸಿಯಂ, ಆಂಟಿರೈನಂ, ಬೋನ್ಸಾತ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡ) ಹಾಗೂ ಅಂದಾಜು 4 ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೈಸಾಂಥಿಯಮ್, ಪಿಂಗ್ ಪಾಂಗ್, ಕಾರ್ನೆಷನ, ಆಸ್ಪ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಸೇರಿ ನಾನಾ ಬಗೆಯ ಅಲಂಕಾರಿಕ ಹೂಗಳಿಂದ ಅಲಂಕರಿಸಲಾಗುತ್ತದೆ. ಹೂಗಳಲ್ಲಿ ಅರಳಲಿರುವ ಕಾಶಿ ವಿಶ್ವನಾಥ ದೇವಾಸ್ಥಾನ ಮಾದರಿ ಈ ಬಾರಿ ಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ಆಗಲಿದೆ.












Click it and Unblock the Notifications