Ganesh Chaturthi 2023: ಮೈಸೂರಿನಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಕಡಿವಾಣಕ್ಕೆ ದಂಡ ಪ್ರಯೋಗ
ಮೈಸೂರು, ಸೆಪ್ಟೆಂಬರ್, 17: ನಗರದಲ್ಲಿ ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈ ಬಾರಿ ಪರಿಸರ ಸ್ನೇಹಿ ಹಾಗೂ ಮಣ್ಣಿನ ಗಣಪತಿ ಕೂರಿಸಲು ಜಿಲ್ಲಾಡಳಿತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪಿಒಪಿ ಗಣಪತಿಗಳ ಮಾರಾಟಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮಾರಾಟಗಾರರಿಗೆ ದಂಡ ವಿಧಿಸುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿ ಮಾರ್ಗದರ್ಶನದಲ್ಲಿ ವಲಯ ಆಯುಕ್ತರು, ಪರಿಸರ ಇಂಜಿನಿಯರ್, ರೆವೆನ್ಯೂ ಇನ್‌ಸ್ಪೆಕ್ಟರ್, ಆರೋಗ್ಯ ಪರಿವೀಕ್ಷಕರನ್ನು ಒಳಗೊಂಡಂತೆ ಪಾಲಿಕೆ ವಲಯವಾರು ಅಧಿಕಾರಿಗಳ 9 ತಂಡ ರಚನೆ ಮಾಡಲಾಗಿದೆ. ಈಗಾಗಲೇ ನಗರದಾದ್ಯಂತ ದಾಳಿ ಆರಂಭಿಸಿರುವ ಈ ವಿಶೇಷ ತಂಡ 25 ಪಿಒಪಿ ಗಣಪತಿ ಮೂರ್ತಿಗಳನ್ನು ವಶಪಡಿಸಿಕೊಂಡಿದೆ.

"ಎಲ್ಲರೂ ಖುಷಿಯಿಂದ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಬೇಕು. ಆದರೆ, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪತಿಯನ್ನು ನಿಷೇಧಿಸಿರುವುದರಿಂದ ಸಾರ್ವಜನಿಕರು ಮಣ್ಣಿನ ಗಣಪತಿಗೆ ಆದ್ಯತೆ ನೀಡಬೇಕು. ಆ ಮೂಲಕ ಸ್ವಚ್ಛ ಮೈಸೂರು ನಿರ್ಮಾಣಕ್ಕೆ ಕೈ ಜೋಡಿಸಬೇಕು," ಎಂದು ನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಷ್ ತಿಳಿಸಿದ್ದಾರೆ.
ಆರೋಗ್ಯಾಧಿಕಾರಿ ಹರ್ಷ ಅವರ ನೇತೃತ್ವದ ಪಾಲಿಕೆ ಅಧಿಕಾರಿಗಳ ತಂಡ ಹೆಬ್ಬಾಳ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಪಿಒಪಿಯಿಂದ ತಯಾರಿಸಲಾದ ಚಿಕ್ಕದಾದ 4, ಆರು ಅಡಿ ಎತ್ತರದ ಮೂರು ಮೂರ್ತಿಗಳನ್ನು ವಶಪಡಿಸಿಕೊಂಡಿದೆ. ಒಂಟಿಕೊಪ್ಪಲಿನ ಮಾತೃಮಂಡಳಿ ವೃತ್ತದ ಬಳಿ 8ರಿಂದ 10 ಅಡಿ ಎತ್ತರದ 3 ಮೂರ್ತಿಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮಾರಾಟಗಾರರ ಯಾರು ಎಂಬುದು ತಿಳಿದುಬಂದಿಲ್ಲ. ದಾಳಿಯ ವೇಳೆ ಎಲ್ಲರೂ ತಪ್ಪಿಸಿಕೊಂಡಿದ್ದಾರೆ.
ಕಳೆದ 5 ವರ್ಷಗಳಿಂದ ಪಿಒಪಿ ಗಣಪತಿ ಮಾರಾಟ ನಿಷೇಧಿಸಲಾಗಿದೆ. ಜಿಲ್ಲಾಡಳಿತ ಅಥವಾ ನಗರ ಸ್ಥಳೀಯ ಸಂಸ್ಥೆಗಳು ಆರಂಭದಿಂದ ಹಬ್ಬ ಸಮೀಪಿಸುವವರೆಗೂ ಪ್ಲಾಸ್ಟರ್ ಪಿಒಪಿ ಗಣಪತಿ ಮೂರ್ತಿಗಳ ತಯಾರಿ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿರುತ್ತವೆ. ಆದರೆ, ಕೊನೆಯ ಒಂದೆರಡು ದಿನಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳನ್ನು ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಈ ಹಂತದಲ್ಲಿ ಹೆಚ್ಚಾಗಿ ದಾಳಿ ನಡೆಸಿ ಅಕ್ರಮ ತಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮೈಸೂರು ಮಾರುಕಟ್ಟೆಗೆ ಪಿಒಪಿ ಗಣಪತಿಗಳ ಪ್ರವೇಶವಾಗಿರುವುದನ್ನು ಮನಗಂಡ ಜಿಲ್ಲಾಡಳಿತ ಕೂಡಲೇ ಮಾರಾಟವನ್ನು ತಡೆಗಟ್ಟಲು ಕ್ರಮ ಕೈಗೊಂಡಿತು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಕೂಡಲೇ ತಂಡ ರಚಿಸಿಕೊಂಡು ದಾಳಿ ನಡೆಸಿ ಪಿಒಪಿ ಮೂರ್ತಿಗಳ ಮಾರಾಟ ನಿಯಂತ್ರಿಸುವಂತೆ ಸೂಚನೆ ನೀಡಿದ್ದಾರೆ.
ದಂಡ ಪ್ರಯೋಗ ಹೇಗೆ?
1. ನಗರ ಪ್ರದೇಶ- 25,000 ರೂಪಾಯಿ
2. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ-10,000 ರೂಪಾಯಿ
3. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5000 ರೂಪಾಯಿ












Click it and Unblock the Notifications