ಆಗಸ್ಟ್ 29ರಂದು ನಾಡಹಬ್ಬ ದಸರಾ ಗಜಪಯಣಕ್ಕೆ ಸ್ವಾಗತ
ಮೈಸೂರು, ಆಗಸ್ಟ್ 27: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ಈ ಮಧ್ಯೆ, ಕೊಡಗು ಜಿಲ್ಲೆಯಲ್ಲಿನ ಪ್ರಾಕೃತಿಕ ವಿಕೋಪದಿಂದಾಗಿ ಮುಂದೂಡಲಾಗಿದ್ದ ಗಜಪಯಣ ಕಾರ್ಯಕ್ರಮ ಈಗ ಆ.29ಕ್ಕೆ ನಿಗದಿಯಾಗಿದೆ.
ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಗಜಪಯಣ ಆರಂಭವಾಗಲಿದ್ದು, ಅರಣ್ಯ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲಿರುವ 12 ಆನೆಗಳ ಪೈಕಿ 6 ಆನೆಗಳ ಮೊದಲ ತಂಡ ಆ.29ರಂದು ಮೈಸೂರಿನತ್ತ ಹೆಜ್ಜೆ ಹಾಕಲಿವೆ.
ಈ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಬಳ್ಳೆ ಆನೆ ಶಿಬಿರದಿಂದಲೂ, ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಕಾವೇರಿ, ವಿಜಯ ಆನೆಗಳು ತಿತಿಮತಿ ಶಿಬಿರದಿಂದಲೂ ಆಗಮಿಸಲಿವೆ.

ಜಿಲ್ಲಾಡಳಿತದಿಂದ ಗಜ ಪಡೆಗೆ ಸ್ವಾಗತ ಸಮಾರಂಭ ಏರ್ಪಡಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಅರ್ಜುನ ನೇತೃತ್ವದ ಗಜ ಪಡೆಗೆ ಹಣ್ಣು, ಬೆಲ್ಲ, ಕಬ್ಬು ನೀಡಿ ಸ್ವಾಗತ ಕೋರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೊದಲು ಬಲರಾಮ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊರುತ್ತಿದ್ದ. ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನ ಕಳೆದ 6 ವರ್ಷಗಳಿಂದ ದಸರಾ ಜಂಬೂ ಸವಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾನೆ.
ಈ ಬಾರಿಯೂ ಅವನೇ ಗಜಪಡೆಯನ್ನು ಮುನ್ನಡೆಸಲಿದ್ದಾನೆ. ಈ ಹಿಂದೆ ಆಗಸ್ಟ್ 23 ಕ್ಕೆ ಗಜಪಯಣ ನಿಗದಿಯಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದ ಆ. 23ರಂದು ನಿಗದಿಯಾಗಿದ್ದ ಗಜಪಯಣವನ್ನು ಮುಂದೂಡಲಾಗಿತ್ತು.
ಕಳೆದ ದಸರಾದಲ್ಲಿ ಭಾಗಿಯಾಗಿದ್ದ 3 ಆನೆಗಳನ್ನು ಈ ಬಾರಿ ಕೈಬಿಡಲಾಗಿದೆ. ಅತಿ ಕಿರಿಯ ಆನೆ ಭೀಮಾ ಈ ಬಾರಿ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿಲ್ಲ. 4 ಹೆಣ್ಣಾನೆಗಳು ಭಾಗವಹಿಸಲಿವೆ.
3 ಹೊಸ ಆನೆಗಳೂ ಸೇರ್ಪಡೆಯಾಗಲಿವೆ ಎಂದು ಹೇಳಲಾಗಿದೆ.
ದಸರಾ ಉತ್ಸವಕ್ಕೆ 55 ದಿನ ಮೊದಲು ಆನೆಗಳಿಗೆ ತರಬೇತಿ ಆರಂಭಿಸಲಾಗುತ್ತಿತ್ತು. ಆದರೆ ತಾಲೀಮಿಗೆ 40-42 ದಿನಗಳಷ್ಟೇ ದೊರೆಯಲಿವೆ.












Click it and Unblock the Notifications