ಬೌದ್ಧ ಸಂಪ್ರದಾಯದಂತೆ ವಿ.ಶ್ರೀನಿವಾಸ ಪ್ರಸಾದ್ ಅಂತ್ಯಸಂಸ್ಕಾರ
ಮೈಸೂರು: ಸ್ವಾಭಿಮಾನಿ, ನಿಷ್ಕಳಂಕ, ಪ್ರಾಮಾಣಿಕ ರಾಜಕಾರಣಿ ಎಂದೇ ಜನಜನಿತರಾಗಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಅಂತ್ಯಕ್ರಿಯೆ ಬೌದ್ಧಧರ್ಮದ ಸಂಪ್ರದಾಯದಂತೆ ಮಂಗಳವಾರ ನೆರವೇರಿತು.
ಬೆಂಗಳೂರಿನ ಥೇರಾ ಮಹಾಬೋಧಿ ಸೊಸೈಟಿಯ ಆನಂದ್ ಭಂತೇಜಿ ನೇತೃತ್ವದಲ್ಲಿ ಸುಮಾರು 20 ಬೌದ್ಧ ಬಿಕ್ಕುಗಳು ಬೌದ್ಧ ಧಮ್ಮದ ವಿಧಿ ವಿಧಾನಗಳನ್ನು ನೆರವೇರಿಸಿದರು. ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ಕಲಾವಿದರು ರಾಷ್ಟ್ರಗೀತೆ ನುಡಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಮರ್ಪಿಸಲಾಯಿತು.

ಶ್ರೀನಿವಾಸ ಪ್ರಸಾದ್ ಅವರ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಅಂತ್ಯಸಂಸ್ಕಾರ ನಡೆದ ಸ್ಥಳಕ್ಕೆ ಕೊಂಡೊಯ್ಯವ ಮುನ್ನ ಅಶೋಕಪುರಂನ ಎನ್‌ಟಿಎಂ ಶಾಲಾ ಆವರಣದಿಂದ ಅಂತಿಮ ಯಾತ್ರೆಯ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಅಂತಿಮ ಯಾತ್ರೆ ಆರಂಭಿಸಿ ಅಶೋಕಪುರಂನ ಪ್ರಮುಖ ಬೀದಿಗಳಲ್ಲಿ ಪ್ರಸಾದ್ ಅವರ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು.
ಹಲವು ಗಣ್ಯರಿಂದ ಅಂತಿಮ ನಮನ
ಶ್ರೀನಿವಾಸ ಪ್ರಸಾದ್ ಅವರ ಅಂತಿಮ ದರ್ಶನಕ್ಕೆ ಎನ್‌ಟಿಎಂ ಶಾಲಾ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರವೂ ಸಾವಿರಾರು ಜನರು ಮೃತರ ಅಂತಿಮ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಶಾಲೆಯತ್ತ ಆಗಮಿಸಿದ ಹಲವು ಗಣ್ಯರು, ಜನಸಾಮಾನ್ಯರು ಪ್ರಸಾದ್ ಅವರ ಪಾರ್ಥೀವ ಶರೀರದ ದರ್ಶನ ಮಾಡುವ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
ಲೋಕಸಭಾ ಚುನಾವಣೆಯ ಪ್ರಚಾರದ ನಡುವೆಯೂ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸಾದ್ ಅವರ ಪಾರ್ಥೀವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.












Click it and Unblock the Notifications