ಜೆಡಿಎಸ್ ತೊರೆದ ಸಂದೇಶ ಸ್ವಾಮಿ, ಕುಮಾರಸ್ವಾಮಿ ಹೇಳಿದ್ದೇನು?
Recommended Video

ಮೈಸೂರು, ಮಾರ್ಚ್ 29 : ಮಾಜಿ ಮೇಯರ್ ಸಂದೇಶ್ ಸ್ವಾಮಿ ಜೆಡಿಎಸ್ ತೊರೆದಿದ್ದಾರೆ. ಸಂದೇಶ್ ಸ್ವಾಮಿ ಈ ಬಾರಿಯ ಚುನಾವಣೆಗೆ ನರಸಿಂಹರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅಬ್ದುಲ್ಲಾ ಅವರನ್ನು ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ.
ಗುರುವಾರ ಫ್ಯಾಕ್ಸ್ ಮೂಲಕ ಸಂದೇಶ್ ಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಸಲ್ಲಿಸಿದರು. 'ಅತ್ಯಂತ ನೋವಿನಿಂದ ಜೆಡಿಎಸ್ ತೊರೆಯುತ್ತಿದ್ದೇನೆ' ಎಂದು ಅವರು ಹೇಳಿದ್ದಾರೆ.
ಸಂದೇಶ್ ಸ್ವಾಮಿ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅವರು ಪಕ್ಷ ತೊರೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಾಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಸಂದೇಶ್ ಸಹೋದದರಿಂದ ಪಕ್ಷಕ್ಕೇನೂ ಲಾಭವಾಗಿಲ್ಲ. ನಮ್ಮಿಂದ ಅವರಿಗೆ ಲಾಭವಾಗಿದೆಯಷ್ಟೇ. ಪಕ್ಷ ಬಿಟ್ಟು ಹೋಗುವಾಗ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಹೋಗುವುದು ಸರಿಯಲ್ಲ' ಎಂದು ವಾಗ್ದಾಳಿ ನಡೆಸಿದರು.
'ಮೊದಲಿನಿಂದಲೂ ಅವರು ಪಕ್ಷದಲ್ಲಿ ಪ್ರಾಮಾಣಿಕವಾಗಿ ಇರಲಿಲ್ಲ. ಕಳೆದ ಚುನಾವಣೆಯಲ್ಲಿ ಸ್ವಾಮಿಗೆ ಟಿಕೆಟ್ ನೀಡಲು ವಿರೋಧವಿದ್ದರೂ ಟಿಕೆಟ್ ನೀಡಿದ್ದೆವು. ಟಿಕೆಟ್ ಕೈ ತಪ್ಪಿದ್ದಕ್ಕೆ ಸಾ.ರಾ.ಮಹೇಶ್ ವಿರೋಧ ಮಾಡಿದ್ದರು ಎಂದಿದ್ದಾರೆ. ಆದರೆ, ಅವರಿಗೆ ಎಂಎಲ್‌ಸಿ ಟಿಕೆಟ್ ಸಿಗಲು ಸಾ.ರಾ.ಮಹೇಶ್ ಕಾರಣ. ಈಗ ಅವರ ಬಗ್ಗೆಯೇ ಆರೋಪ ಮಾಡುತ್ತಿರುವುದು ಸರಿಯಲ್ಲ' ಎಂದರು.
'ನನಗೆ ಈ ಜಿಲ್ಲೆಯಲ್ಲಿ ಯಾರು ಯಾವ ಮಟ್ಟದಲ್ಲಿ ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆ ಎಂಬ ಅರಿವಿದೆ. ಹಾಗೆಯೇ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂಬುದು ಗೊತ್ತಿದೆ. ಈ ಬಾರಿ ಟಿಕೆಟ್ ನೀಡಿದ್ದರೆ ಸಾ.ರಾ. ಮಹೇಶ್ ಒಳ್ಳೆಯವರಾಗುತ್ತಿದ್ದರು. ಕೊಟ್ಟಿಲ್ಲವಾದ್ದರಿಂದ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದರು.
'ವಿಧಾನಪರಿಷತ್‌ನಲ್ಲಿ ಮೈಸೂರಿನವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳುವವರಿಗೆ ಟಿಕೆಟ್ ನೀಡಬೇಕಾ?. ನಾವು ಚುನಾವಣೆಯಲ್ಲಿ ಗೆಲ್ಲುವ ವಿಚಾರವಾಗಿ ಅಧ್ಯಯನ ಮಾಡಿ ಟಿಕೆಟ್ ನೀಡಿದ್ದೇವೆ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
'ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಮೆಸೇಜ್ ಕೊಡುತ್ತಿದ್ದರು. ಜೆಡಿಎಸ್‌ನಲ್ಲಿ ಏನೆಲ್ಲ ಬೆಳವಣಿಗೆ ಆಗುತ್ತಿದೆ ಅನ್ನುವುದನ್ನು ಕಾಂಗ್ರೆಸ್‌ಗೆ ಸಂದೇಶ್ ಸಹೋದರರು ತಲುಪಿಸುತ್ತಿದ್ದರು. ಅಂತಹವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅವಮಾನ' ಎಂದು ಕಿಡಿಕಾರಿದರು.












Click it and Unblock the Notifications