ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
ಮೈಸೂರು, ಅಕ್ಟೋಬರ್ 9: "ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂಬುದು ಕೇವಲ ಊಹಾಪೋಹ, ಈ ಬಗ್ಗೆ ನಾನೆಂದು ಯೋಜನೆ ಕೂಡ ಮಾಡಿಲ್ಲ," ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಕೇವಲ ಊಹಾಪೋಹವಷ್ಟೇ. ಈ ವಿಚಾರವಾಗಿ ಸೋನಿಯಾಗಾಂಧಿಯವರು ನನ್ನನ್ನು ಕರೆದಿಲ್ಲ ಹಾಗೂ ಆ ಬಗ್ಗೆ ಚರ್ಚೆಯೂ ಆಗಿಲ್ಲ. ಇದೆಲ್ಲ ಕೇವಲ ಊಹಾಪೋಹವಾಗಿದ್ದು, ಈ ವಿಷಯದ ಕುರಿತು ಚರ್ಚೆಗಳು ಬೇಡ. ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ನಾನು ಎಂದೂ ಯೋಚನೆ ಮಾಡಿಲ್ಲ. ಹೀಗಾಗಿ ಆ ಬಗ್ಗೆ ಚರ್ಚೆ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ," ಎಂದರು.
"ರಾಜ್ಯದಲ್ಲಿ ನಡೆದ ಐಟಿ ದಾಳಿ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಐಟಿ ದಾಳಿಯಲ್ಲಿ ರಾಜಕೀಯ ಇದೆ ಎಂಬುದು ನನ್ನ ಅನುಮಾನ. ಕೇವಲ ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪ್ತರನ್ನೇ ಸೆಲೆಕ್ಟ್ ಮಾಡಿಕೊಂಡು ದಾಳಿ ಮಾಡಿರುವುದು ನನಗೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ," ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಐಟಿ ದಾಳಿಯಲ್ಲಿ ರಾಜಕೀಯದ ವಾಸನೆ ಬರುತ್ತಿದೆ
ಸದ್ಯ ನಡೆಯಲಿರುವ ಉಪ ಚುನಾವಣೆಗಳ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹಾಗಂತ ಉಪ ಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಂತ ಹೇಳುವುದಿಲ್ಲ, ಹಾಗೇ ಹೇಳುವುದಕ್ಕೂ ಸಾಧ್ಯವಿಲ್ಲ. ಆದರೆ ಈ ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತದೆ. ಜನ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ
ಇದೇ ವೇಳೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ, "ಜೆಡಿಎಸ್‌ನವರು ಒಳ್ಳೆಯ ಉದ್ದೇಶದಿಂದಂತೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ವಿಂಗಡಿಸುವುದೇ ಅವರ ಉದ್ದೇಶವಾಗಿದ್ದು, ಜನ ಬುದ್ಧಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದು ಕಿಡಿಕಾರಿದರು. ಒಂದು ವೇಳೆ ಅಲ್ಪಸಂಖ್ಯಾತರನ್ನು ಗೆಲ್ಲಿಸಲೇಬೇಕು ಅನ್ನುವ ಉದ್ದೇಶವಿದ್ದರೆ ಚನ್ನಪಟ್ಟಣ, ಹಾಸನದಲ್ಲಿ ಟಿಕೆಟ್ ಕೊಡಲಿ. ಮೈಸೂರು ಭಾಗದಲ್ಲಿ ಟಿಕೆಟ್ ಕೊಡಲ್ಲ, ಉತ್ತರ ಕರ್ನಾಟಕದಲ್ಲಿ ಟಿಕೆಟ್ ಕೊಡುತ್ತಾರೆ ಅಂದ್ರೆ ಏನರ್ಥ?," ಎಂದು ಪ್ರಶ್ನಿಸಿದರು.

ಜನರ ಬದುಕು ನರಕವಾಗಿದೆ
ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, "ಜನರಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಸರ್ಕಾರ ಬಂದರೆ ಸ್ವರ್ಗ ಮಾಡುತ್ತೇವೆ ಅಂದಿದ್ದರು. ಈಗ ಬೆಲೆ ಏರಿಕೆಯಿಂದ ಜನರ ಬದುಕು ನರಕ ಆಗಿದೆ. ಹೀಗಾಗಿ ಕಾಂಗ್ರೆಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೈ ಎಲೆಕ್ಷನ್ ಹೊಸ್ತಿಲಲ್ಲೇ ವಿಧಾನ ಪರಿಷತ್ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಲಾಬಿ ಶುರುವಾಗಿದೆ. ಈ ಸಂಬಂಧ ಮೈಸೂರು ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ಆದಿಜಾಂಬವ ಮುಖಂಡರು, ದಲಿತ ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದರು. ಅಲ್ಲದೇ ಬಹುಮುಖ್ಯವಾಗಿ ಡಾ.ಡಿ. ತಿಮ್ಮಯ್ಯಗೆ ಮೈಸೂರು- ಚಾಮರಾಜನಗರ ವಿಧಾನ ಪರಿಷತ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಮತ್ತೆ ಕೇಳಿತು ಸಿದ್ದರಾಮಯ್ಯ ಮುಂದಿನ ಸಿಎಂ ಕೂಗು
ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಂದಿನ ಮುಖ್ಯಮಂತ್ರಿ ಕೂಗು, ಮೈಸೂರಿನಲ್ಲಿ ಮತ್ತೊಮ್ಮೆ ಕೇಳಿಬಂದಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು, ಕೈ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು. ಅಭಿಮಾನಿಗಳು ಹಾಗೂ ಬೆಂಬಲಿಗರ ಘೋಷಣೆಯಿಂದ ಫುಲ್ ಖುಷ್ ಆದ ಸಿದ್ದರಾಮಯ್ಯ, ಬೆಂಬಲಿಗರತ್ತ ಕೈ ಬೀಸುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು.












Click it and Unblock the Notifications