ಸಿದ್ದರಾಮಯ್ಯ ಆಯೋಜಿಸಿದ್ದ ಜಾಗದಲ್ಲೇ ಕುಮಾರಸ್ವಾಮಿ ಇಫ್ತಾರ್ ಕೂಟ!
ಮೈಸೂರು, ಏಪ್ರಿಲ್ 25: ಮುಸ್ಲಿಮರ ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ಆಯೋಜಿಸಲಾಗುವ ಇಫ್ತಾರ್ ಕೂಟವು, ಈ ಬಾರಿ ಚುನಾವಣಾ ವರ್ಷವಾಗಿರುವುದರಿಂದ, ರಾಜಕೀಯ ವಾಸನೆ ಬಡಿಯಲಾರಂಭಿಸಿದೆ. ಕೆಲವು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು.
ಮೈಸೂರಿನ ಬನ್ನಿ ಮಂಟಪದ ಭಾಗದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ನಲ್ಲಿ ಸಿದ್ದರಾಮಯ್ಯ ಮತ್ತು ತನ್ವೀರ್ ಸೇಠ್ ಭಾಗವಹಿಸಿದ್ದರು. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಇಫ್ತಾರ್ ಅನ್ನು ಆಯೋಜಿಸಿರಲಿಲ್ಲ. ಹಾಗಾಗಿ, ಒಂದು ವಾರದ ಕೆಳಗೆ ನಡೆದ ಈ ಕೂಟದಲ್ಲಿ ಸಿದ್ದರಾಮಯ್ಯ ಆಪ್ತರೂ ಭಾಗವಹಿಸಿದ್ದರು.
ಈಗ ಅದೇ ಜಾಗದಲ್ಲಿ (ಮಿಲನ್ ಫಂಕ್ಷನ್ ಹಾಲ್) ಆಯೋಜಿಸಲಾಗಿದ್ದ ಕೂಟದಲ್ಲಿ ಭಾನುವಾರ (ಏ 24) ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಇವರಿಗೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ಶಾಸಕ ಸಾ.ರಾ.ಮಹೇಶ್ ಸಾಥ್ ನೀಡಿದ್ದಾರೆ.
ಮುಂದಿನ ಬುಧವಾರ (ಏ 27) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಿಗರಿಗಾಗಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಕೆಲವು ದಿನಗಳ ಹಿಂದೆ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಆಯೋಜಿಸಿದ್ದ ಕೂಟದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಭಾಗಿಯಾಗಿದ್ದರು.

ಸಿದ್ದರಾಮಯ್ಯನವರು ಆಯೋಜಿಸಿದ್ದ ಜಾಗದಲ್ಲೇ ಜೆಡಿಎಸ್ ಇಫ್ತಾರ್
ಇತ್ತೀಚಿನ ದಿನಗಳಲ್ಲಿ ಇಫ್ತಾರ್ ಕೂಟ ಎನ್ನುವುದು ರಾಜಕೀಯ ನಾಯಕರಿಗೆ ಮತ್ತು ಆ ಮೂಲಕ ಮತದಾರರಿಗೆ ಜಾತ್ಯಾತೀತ ಭರವಸೆಗಳನ್ನು ನೀಡುವ ವೇದಿಕೆಯಂತಾಗುತ್ತಿದೆ. ಅದರಲ್ಲೂ ಹಾಲೀ ವರ್ಷದಲ್ಲಿ ಮತೀಯ ಸಂಘರ್ಷ ಹೆಚ್ಚಾಗಿರುವುದರಿಂದ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈ ಕೂಟದ ಬಗ್ಗೆ ವಿಶೇಷ ಒಲವನ್ನು ತೋರುತ್ತಿರುವುದಂತೂ ಹೌದು. ಹಾಗಾಗಿ, ಇಲ್ಲೂ ರಾಜಕೀಯ ಮೇಲಾಟ ಇದ್ದೇ ಇರುತ್ತದೆ. ಹಾಗಾಗಿ, ಸಿದ್ದರಾಮಯ್ಯನವರು ಆಯೋಜಿಸಿದ್ದ ಜಾಗದಲ್ಲೇ ಜೆಡಿಎಸ್ ಇಫ್ತಾರ್ ಆಯೋಜಿಸಿದ್ದಕ್ಕೆ ರಾಜಕೀಯ ಬಣ್ಣ ತಗುಲಿದೆ. ಕಳೆದ ಶುಕ್ರವಾರ, ಸಿದ್ದರಾಮಯ್ಯ, ಬೆಂಗಳೂರಿನ ಅರಮನೆ ಮೈದಾನದ ನಳಪಾಡ್ ಪೆವಿಲಿಯನ್ ನಲ್ಲಿ ಇಫ್ತಾರ್ ಆಯೋಜಿಸಿದ್ದರು.

ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂಯೇತರರು ವ್ಯಾಪಾರಕ್ಕಿಲ್ಲ ಅವಕಾಶ
ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂಯೇತರರು ವ್ಯಾಪಾರ ನಡೆಸದಂತೆ ಮತ್ತು ಹಲಾಲ್ ಕಟ್ ವಿವಾದ ತಾರಕಕ್ಕೇರಿದ್ದಾಗ ಕುಮಾರಸ್ವಾಮಿ, ಬಿಜೆಪಿ ಮತ್ತು ಸಂಘ ಪರಿವಾರದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಲಲಾರಂಭಿಸಿದರು. ಇದನ್ನು, ಅಲ್ಪಸಂಖ್ಯಾತ ಓಲೈಕೆ ರಾಜಕಾರಣವೆಂದು ಬರೀ ಬಿಜೆಪಿಯವರಲ್ಲ, ಕಾಂಗ್ರೆಸ್ಸಿನವರೂ ಲೇವಡಿ ಮಾಡಿದ್ದರು. ಈಗ, ಸಿದ್ದರಾಮಯ್ಯನವರು ಭಾಗವಹಿಸಿದ್ದ ಜಾಗದಲ್ಲೇ ಇಫ್ತಾರ್ ಕೂಟದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದಾರೆ.

ಮೈಸೂರು ಭಾಗ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ರಾಜಕೀಯವಾಗಿ ಮಹತ್ವ
ಮೈಸೂರು ಭಾಗ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ರಾಜಕೀಯವಾಗಿ ಮಹತ್ವದ್ದಾಗಿದೆ. ಹಾಗಾಗಿ ಇಲ್ಲಿ ಎರಡೂ ಪಕ್ಷಗಳಿಂದ ಏಟಿಗೆ ಎದುರೇಟು ಇದ್ದೇ ಇರುತ್ತದೆ, ಅದು ರಾಜಕೀಯ ಸಮಾವೇಶವಾಗಲಿ, ಧಾರ್ಮಿಕ ಕಾರ್ಯಕ್ರಮವಾಗಲಿ. ಬಿಜೆಪಿಯವರು ಇಫ್ತಾರ್ ಕೂಟದಲ್ಲಿ ಭಾಗವಹಿಸುವುದು ಸ್ವಲ್ಪ ಕಮ್ಮಿ. ಹಿಂದೆ, ಯಡಿಯೂರಪ್ಪನವರು ಇಫ್ತಾರ್ ನಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಮತ್ತು RSSನ ಮುಸ್ಲಿಂ ರಾಷ್ಟ್ರೀಯ ಮಂಚ್ ಕೂಡಾ ರಾಷ್ಟ್ರದಾದ್ಯಂತ ಇಫ್ತಾರ್‌ಗಳನ್ನು ಆಯೋಜಿಸುತ್ತದೆ. (ಫೈಲ್ ಫೋಟೋ)

ಇಫ್ತಾರ್ ಪ್ರಾರ್ಥನೆಯ ನಂತರ, ಶಂಕರಮಠದ ಪುರೋಹಿತರಿಂದ ವೇದ ಘೋಷ
ಕುಮಾರಸ್ವಾಮಿಯವರು ಭಾಗವಹಿಸಿದ್ದ ಇಫ್ತಾರ್ ಕೂಟದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆಯೋಜಕರು, ಇಫ್ತಾರ್ ಪ್ರಾರ್ಥನೆಯ ನಂತರ, ಶಂಕರಮಠದ ಎಂಟು ಪುರೋಹಿತರಿಂದ ವೇದ ಘೋಷ ಮಂತ್ರ ಪಾರಾಯಣವನ್ನು ಮಾಡಿಸಲಾಯಿತು. ಆ ಮೂಲಕ, ಮೈಸೂರು ಭಾಗದ ಜನತೆಗೆ ಜೆಡಿಎಸ್ ಚುನಾವಣಾ ಸಂದೇಶ ರವಾನಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications