ಬಂಡೀಪುರದಲ್ಲಿ ಬೆಂಕಿ ನಂದಿಸುತ್ತಿರುವ ಸಿಬ್ಬಂದಿಗಳಿಗೆ ನೀರು, ಹಣ್ಣು ಕೊಡಿ: ಅರಣ್ಯ ಇಲಾಖೆ ಮನವಿ
ಮೈಸೂರು, ಫೆಬ್ರವರಿ 26 : ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯ ಕಾಡ್ಗಿಚ್ಚಿನಿಂದ ನಲುಗಿ ಹೋಗಿದ್ದು, ಅಪಾರ ಪ್ರಮಾಣದ ವನ್ಯಸಂಪತ್ತು ಅಗ್ನಿಗಾಹುತಿಯಾಗಿದೆ. ನೂರಾರು ಅರಣ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹೀಗೆ ಅರಣ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಕುಡಿಯಲು ನೀರು, ಹಣ್ಣು ನೀಡುವಂತೆ ಅರಣ್ಯ ಇಲಾಖೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದೆ.
ಈಗಾಗಲೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿರುವವರಿಗೆ ಸಕಾಲಕ್ಕೆ ಕುಡಿಯುವ ನೀರು, ಆಹಾರ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.
ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಮರೋಪಾದಿ ಕಾರ್ಯಾಚರಣೆಗಿಳಿದಿದೆ. ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ನೂರಾರು ಸ್ವಯಂಸೇವಕರು ಸಮರೋಪಾದಿಯಲ್ಲಿ ಪಾಲ್ಗೊಂಡಿದ್ದಾರೆ.

ಕುಡಿಯುವ ನೀರಿನ ಬಾಟೆಲ್, 5 ಲೀಟರ್ ನೀರಿನ ಕ್ಯಾನ್, ಕಾರವಿಲ್ಲದೆ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳ ಪ್ಯಾಕೆಟ್ , ಕಲ್ಲಂಗಡಿ, ಬಾಳೆಹಣ್ಣು, ಕಿತ್ತಳೆ , ದ್ರಾಕ್ಷಿ, ಮೂಸಂಬಿ, ಸೇಬು , ಗ್ಲುಕೋಸ್ , ತಂಪು ಪಾನೀಯ, ಬಿಸ್ಕೆಟ್ , ಟಾರ್ಚ್, ಸುಟ್ಟ ಗಾಯಗಳಿಗೆ ಹಚ್ಚುವ ಬರ್ನಾಲ್ , ಮಾಸ್ಕ್ , ಗ್ಲೌಸ್ ಇತ್ಯಾದಿ ಪದಾರ್ಥಗಳನ್ನು ಅರಣ್ಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ನೀಡಬಹುದಾಗಿದೆ.
ದಾನಿಗಳು ನೀಡುವ ವಸ್ತುಗಳನ್ನು ಸಂಗ್ರಹಿಸಲು ಈಗಾಗಲೇ ಮೈಸೂರು ಮೃಗಾಲಯದಲ್ಲಿ ಕೌಂಟರ್ ತೆರೆಯಲಾಗಿದೆ. ರೇಸ್ ಕೋರ್ಸ್ ಮುಂಭಾಗದ ಗೇಟ್ ಬಳಿ ಈಗಾಗಲೇ ಕೌಂಟರ್ ಕಾರ್ಯಾರಂಭಿಸಿದ್ದು, ದಾನಿಗಳು ಶಕ್ತ್ಯಾನುಸಾರ ವಸ್ತುಗಳನ್ನು ನೀಡಿ ರಸೀದಿ ಪಡೆಯಬಹುದು.

ಸುಮಾರು ಒಂದು ಟ್ರಕ್ ನಲ್ಲಿ ಕುಡಿಯುವ ನೀರು ಕಲ್ಲಂಗಡಿ ಹಾಗೂ ಬಾಳೆ ಹಣ್ಣು ಬಂಡೀಪುರಕ್ಕೆ ಮೃಗಾಲಯದ ವತಿಯಿಂದ ಈಗಾಗಲೇ ರವಾನಿಸಲಾಗಿದೆ.












Click it and Unblock the Notifications