ಮೈಸೂರಿನಲ್ಲಿ ಹೆಚ್ಚಾಯ್ತು ವ್ಯಾಘ್ರನ ಕಾಟ: ಜನರ ನಿದ್ದೆಗೆಡಿಸಿದ ಹುಲಿಗಳ ಸಂಚಾರ, ಅರಣ್ಯ ಇಲಾಖೆಯಿಂದ ಕಟ್ಟೆಚ್ಚರ
ಮೈಸೂರು, ನವೆಂಬರ್ 30: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರ ನಿದ್ದೆಗೆಡಿಸಿದ್ದ ಹುಲಿಗಳು ಇದೀಗ ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಜನ, ಜಾನುವಾರುಗಳ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ನಂಜನಗೂಡು ತಾಲೂಕಿನ ಹೆಡಿಯಾಲ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿತ್ತು.
ಇನ್ನೇನು ಹುಲಿ ಆತಂಕ ದೂರವಾಯಿತು ಎನ್ನುವಾಗಲೇ ಮತ್ತೆ ಹುಲಿಗಳು ಪ್ರತ್ಯಕ್ಷವಾಗಿರುವುದು ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಲ್ಲಿ ಸ್ಥಳೀಯರಿಗೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಸಂಬಂಧ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದೆ.

ಸೋಮವಾರ ಮತ್ತು ಬುಧವಾರದಂದು ಮೈಸೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ರಸ್ತೆ ಬದಿಯಲ್ಲಿ ಹುಲಿ ತಿರುಗಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಆ ವೀಡಿಯೋ ಎಲ್ಲಿ ಸೆರೆ ಹಿಡಿದಿದ್ದು ಎಂಬ ಖಚಿತ ಮಾಹಿತಿ ಮಾತ್ರ ದೊರೆತಿಲ್ಲ.
ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಲಕ್ಷ್ಮಿಕಾಂತ, ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಹುಲಿ ಕಾಣಿಸಿಕೊಂಡಿರುವ ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಹುಲಿಯ ಹೆಜ್ಜೆಗುರುತು ಕೂಡ ಪತ್ತೆಯಾಗಿವೆ. ಹಾಗಾಗಿ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ. ಜೊತೆಗೆ ಹುಲಿ ಕಾಣಿಸಿಕೊಂಡ ಭಾಗಗಳಲ್ಲಿ ವಿಶೇಷ ಕ್ಯಾಮೆರಾಗಳನ್ನು ಮತ್ತು ಹುಲಿ ಬೋನ್‌ಗಳನ್ನು ಅಳವಡಿಸಲಾಗಿದ್ದು, ಹುಲಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ವಿಶೇಷ ತಂಡದಲ್ಲಿ ಚಿರತೆ ಕಾರ್ಯ ಪಡೆಯ 10 ಸಿಬ್ಬಂದಿ, ಮೈಸೂರು ವಲಯದ 20 ಸಿಬ್ಬಂದಿ, ನಗರ ಹಸರೀಕರಣದ ವಲಯದ 10 ಸಿಬ್ಬಂದಿ, ನಂಜನಗೂಡು ವಲಯದ 10 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಜೊತೆಗೆ ವಿವಿಧ ಬಗೆಯ ಒಟ್ಟು 35 ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ತುಮಕೂರು ಮಾದರಿಯ ಹುಲಿ ಹಿಡಿಯುವ 3ಬೋನುಗಳನ್ನು ತೆಗೆದುಕೊಂಡು ಅವಶ್ಯಕತೆ ಇರುವ ಸ್ಥಳದಲ್ಲಿ ಅಳವಡಿಸಲಾಗಿದೆ.
ಹುಲಿಯ ಚಲನ-ವಲನಗಳನ್ನು ಗಮನಿಸಲು ಹುಲಿ ಕಾಣಿಸಿಕೊಂಡಿರುವ ಗ್ರಾಮಗಳ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಮೂಲಕ ಪರೀಶಿಲನೆಯೂ ನಡೆಯುತ್ತಿದೆ. ಹುಲಿ ಕಾಣಿಸಿಕೊಂಡಿರುವ ಮೈಸೂರು ವಲಯದ ವ್ಯಾಪ್ತಿಯಯಲ್ಲಿ ವನ್ಯಜೀವಿ ಮುಂಜಾಗೃತಾ ಎಚ್ಚರಿಕೆ ಸಂದೇಶ ವ್ಯವಸ್ಥೆಯ ಮೂಲಕ ಈ ಗ್ರಾಮದ ಎಲ್ಲ ರೈತರ ಹಾಗೂ ಸಾರ್ವಜನಿಕರ ಮೊಬೈಲ್‌ಗೆ ಹುಲಿ ಇರುವಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಹುಲಿ ಹೆಜ್ಜೆಯ ಗುರುತು ಪತ್ತೆಯಾಗಿದೆ. ಹುಲಿ ಹೆಜ್ಜೆಯ ಜಾಡು ಹಿಡಿದು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸಂಬಂಧ ಹುಲಿಯ ಚಲನ-ವಲನಗಳನ್ನು ಗಮನಿಸಲು ಕ್ಯಾಮೆರಾಗಳನ್ನು ಅಳವಡಿಸಿ, ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದೆ. ಹುಲಿಯನ್ನು ಕಂಡ ಕೂಡಲೇ ಅರವಳಿಕೆ ಮದ್ದನ್ನು ನೀಡಲು ಇಲಾಖಾ ಪಶುವೈದ್ಯಾಧಿಕಾರಿಗಳಿಗೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್ ಬಸವರಾಜು ಮಾತನಾಡಿ, ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ. ಜೊತೆಗೆ ಹುಲಿ ಕಾಣಿಸಿಕೊಂಡ ಭಾಗಗಳಲ್ಲಿ ವಿಶೇಷ ಕ್ಯಾಮೆರಾಗಳನ್ನು ಮತ್ತು ಹುಲಿ ಬೋನ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.











Click it and Unblock the Notifications